ADVERTISEMENT

ವ್ಯಾಕರಣಬದ್ಧ ಕನ್ನಡ ಕಲಿಯಲು ಸಲಹೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 5:05 IST
Last Updated 11 ಫೆಬ್ರುವರಿ 2012, 5:05 IST

ಧಾರವಾಡ: `ಕನ್ನಡ ಭಾಷೆಯು ಸಾಂಸ್ಕೃ ತಿಕ ವಾಹಕವಾಗಿದೆ. ಯಾವುದೇ ಅಡ್ಡಿ ಉಂಟುಮಾಡದ ಈ ಮಾತೃಭಾಷೆ ಯನ್ನು ಪ್ರತಿಯೊಬ್ಬರೂ ವ್ಯಾಕರಣ ಬದ್ಧವಾಗಿ ಕಲಿಯಬೇಕು” ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಸಲಹೆ ನೀಡಿದರು.

ಶುಕ್ರವಾರ ಕನ್ನಡ ನುಡಿತೇರು ಜಾಥಾ ಅಂಗವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಇಲ್ಲಿನ ಜೆಎಸ್‌ಎಸ್ ಮಹಾವಿದ್ಯಾಲಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಪ್ರಾಧಿಕಾರವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆಡಳಿತದ ಎಲ್ಲ ಹಂತಗಳಲ್ಲಿ ಕನ್ನಡ ಬಳಕೆಗಾಗಿ ಕಾರ್ಯಕ್ರಮ ರೂಪಿಸುವುದರ ಜೊತೆಗೆ ಗಡಿಭಾಗದ ಪ್ರದೇಶಗಳಲ್ಲಿ ಭಾವೈಕ್ಯ ಹಾಗೂ ಭಾಷೆಗಳನ್ನು ಬೆಳೆಸುವಂಥ ಕಾರ್ಯಕ್ರಮಗಳನ್ನು ಪ್ರಾಧಿಕಾರ ಆಯೋಜಿಸಿದೆ.

ವಿದ್ಯಾರ್ಥಿಗಳು ಭಾಷೆಯನ್ನು ಸ್ವಚ್ಛವಾಗಿ ಕಲಿಯಬೇಕು. ಭಾಷೆಯಿಂದ ಬದುಕು ರೂಪಿಸಿಕೊಂಡ ನಿದರ್ಶನಗಳಿವೆ. ಪ್ರತಿಯೊಬ್ಬರೂ ಕನ್ನಡ ಭಾಷೆಯ ಬಗ್ಗೆ ಸ್ವಾಭಿಮಾನ ಬೆಳೆಸಿಕೊಳ್ಳಬೇಕು. ಬದುಕಿನ ಜೊತೆಗೆ ಭಾಷೆ. ಭಾಷೆಯ ಜೊತೆಗೆ ಬದುಕು ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು~ ಎಂದರು.

ಸಂಸದ ಪ್ರಹ್ಲಾದ ಜೋಶಿ, ಅತ್ಯಂತ ಪ್ರಾಚೀನವಾದ ಕನ್ನಡ ಭಾಷೆ ಜ್ಞಾನ ಸಂಪಾದನೆಗೆ ಅತ್ಯುತ್ತಮ ವಾಗಿದ್ದು, ಪ್ರತಿಯೊಬ್ಬ ವಿದ್ಯಾರ್ಥಿ ಮಾತೃ ಭಾಷೆಯನ್ನು ಸಂಪೂರ್ಣವಾಗಿ ಕಲಿಯಬೇಕು ಎಂದರು. ಸಾಹಿತಿ ವಿಷ್ಣು ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಹಿತಿ ಡಾ. ರಾಘವೇಂದ್ರ ಪಾಟೀಲ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಎಸ್.ಎನ್. ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ಭಜಂತ್ರಿ ಹಾಗೂ ನಾಗರಾಜ ಮೂರ್ತಿ ವೇದಿಕೆಯಲ್ಲಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಡಿ. ಹಿರೇಗೌಡರ ಸ್ವಾಗತಿಸಿದರು. ಚಾಮುಂಡೇಶ್ವರಿ ಪರಸಣ್ಣವರ ನಿರೂಪಿಸಿದರು. ಪ್ರೊ. ಬಿ. ಸುಕನ್ಯಾ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.