ADVERTISEMENT

ವ್ಯಾಪಾರೀಕರಣಕ್ಕೆ ಸರ್ಕಾರಿ ಶಾಲೆ ಬಲಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2011, 9:10 IST
Last Updated 28 ಅಕ್ಟೋಬರ್ 2011, 9:10 IST

ಧಾರವಾಡ: “ರಾಜ್ಯದಲ್ಲಿನ ಸುಮಾರು 3174 ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಮೂಲಕ ರಾಜ್ಯ ಸರ್ಕಾರ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣ ವ್ಯಾಪಾರೀಕರಣಕ್ಕೆ ನೀಡುವ ಹುನ್ನಾರ ನಡೆಸಿದೆ” ಎಂದು ಕರ್ನಾಟಕ ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ಶಿವಾನಂದ ಶೆಟ್ಟರ ಹೇಳಿದರು.

ಇಲ್ಲಿನ ಸರ್ಕಾರಿ ಆರ್ಟ್ ಗ್ಯಾಲರಿಯಲ್ಲಿ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ಆಯೋಜಿಸಿದ್ದ ವಿದ್ಯಾರ್ಥಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಶಿಕ್ಷಣ ಕ್ಷೇತ್ರಕ್ಕೆ ನೀಡುವ ಸಹಾಯಧನ ಕಡಿಮೆಯಾಗಿದ್ದರಿಂದ ಶಾಲಾ- ಕಾಲೇಜುಗಳು ಮೂಲ ಸೌಲಭ್ಯಗಳಿಂದ ವಂಚಿತವಾಗುತ್ತಿವೆ ಎಂದರು.
ಕನ್ನಡ ಶಾಲೆ ಮುಚ್ಚುವ ಪ್ರಯತ್ನದಿಂದ ಸರ್ಕಾರ ಕೂಡಲೇ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಎಸ್‌ಎಫ್‌ಐ ರಾಜ್ಯ ಕಾರ್ಯದರ್ಶಿ ಅನಂತ ನಾಯ್ಕ ಮಾತನಾಡಿ, ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಶೋಚನೀಯವಾಗಿದೆ. ಶಿಕ್ಷಣ ಕ್ಷೇತ್ರ ಅತ್ಯಂತ ದುಬಾರಿಯಾಗಿದ್ದು, ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
 
ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದ ಅಂಶವಾಗಿದ್ದು, ಅಲ್ಲದೇ ಭ್ರಷ್ಟಾಚಾರದಿಂದ ರಾಜ್ಯ ಮತ್ತು ದೇಶ ಅಲ್ಲೋಲಕಲ್ಲೋಲವಾಗುತ್ತಿದೆ. ದುಡಿಯುವ ಯುವಜನರಿಗೆ ಉದ್ಯೋಗವನ್ನು ನೀಡದೆ ಸರ್ಕಾರಿ ಶಾಲಾ- ಕಾಲೇಜುಗಳನ್ನು ಮುಚ್ಚುವುದರ ಮೂಲಕ ಇನ್ನಷ್ಟು ನಿರುದ್ಯೋಗವನ್ನು ಸೃಷ್ಟಿ ಮಾಡಲು ರಾಜ್ಯ ಸರ್ಕಾರ ಹೊರಟಿರುವುದು ಖಂಡನೀಯ ಎಂದರು.

ಇಂದಿನ ಸಂದರ್ಭದಲ್ಲಿ ಈ ವ್ಯವಸ್ಥೆಯ ವಿರುದ್ಧ ಸಂಘಟಿತ ಹೋರಾಟ ಅವಶ್ಯವಿದೆ. ಯಾವುದೇ ಕಾರಣಕ್ಕೂ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವುದನ್ನು ತಮ್ಮ ಸಂಘಟನೆ ವಿರೋಧಿಸುತ್ತದೆ. ಸರ್ಕಾರ ಕೂಡಲೇ ಇದನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಬಿ.ಎನ್.ಪೂಜಾರ, ನಾರಾಯಣ ಕಾಳೆ ಮಾತನಾಡಿದರು. ಮಾರುತಿ ಅಂಬಿಗೇರ ಅಧ್ಯಕ್ಷತೆ ವಹಿಸಿದ್ದರು. ಸದಾಶಿವ ಕಪಲಿ ಸ್ವಾಗತಿಸಿದರು. ವಿನಾಯಕ ಕುರುಬರ ವಂದಿಸಿದರು. ಜ್ಯೋತಿ ಪುಟ್ಟರಡ್ಡೇರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.