ADVERTISEMENT

ಶ್ರಾವಣಮಾಸದ ಕಾರ್ಯಕ್ರಮ 20ರಿಂದ

​ಪ್ರಜಾವಾಣಿ ವಾರ್ತೆ
Published 17 ಜುಲೈ 2012, 6:10 IST
Last Updated 17 ಜುಲೈ 2012, 6:10 IST

ಧಾರವಾಡ: ಬಸವಪೂರ್ವ ಯುಗದಲ್ಲಿಯೇ ಸ್ಥಾಪನೆಯಾಗಿರುವ ತಾಲ್ಲೂಕಿನ ಅಮ್ಮಿನಬಾವಿ ಗ್ರಾಮದ ಐತಿಹಾಸಿಕ ಪಂಚಗೃಹ ಹಿರೇಮಠದಲ್ಲಿ  ಇದೇ 20ರಿಂದ ಶ್ರಾವಣ ಮಾಸದ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ.

ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಪ್ರಸಿದ್ಧರಾಗಿರುವ ಲಿಂಗೈಕ್ಯ ನಾಲತವಾಡದ ವೀರೇಶ್ವರ ಶರಣರ ಪುರಾಣ ಪ್ರವಚನವು ಪ್ರತಿನಿತ್ಯ ರಾತ್ರಿ 8ರಿಂದ 10ರವರೆಗೆ ಒಂದು ತಿಂಗಳಕಾಲ ಹುಬ್ಬಳ್ಳಿ ತಾಲ್ಲೂಕು ಸುಳ್ಳ ಪಂಚಗೃಹ ಹಿರೇಮಠದ ಅಭಿನವ ಸಿದ್ಧರಾಮ ಶಿವಾಚಾರ್ಯ ಸ್ವಾಮೀಜಿಗಳಿಂದ ನಡೆಯಲಿದೆ.

ಉದ್ಘಾಟನೆ: ಜು 20ರಂದು ರಾತ್ರಿ 8ಕ್ಕೆ ಈ ಪುರಾಣ ಪ್ರವಚನ ಸಮಾರಂಭವನ್ನು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸುವರು. ಹಿರೇಮಠದ ಕಿರಿಯ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳು ನೇತೃತ್ವ ವಹಿಸುವರು.

ರುದ್ರಾಭಿಷೇಕ ಮಹಾಪೂಜೆ: ಮಠದ ಕರ್ತುೃ ಗದ್ದುಗೆಗೆ ಏಕಾದಶಿ ಮಹಾರುದ್ರಾಭಿಷೇಕ, ನೂರೊಂದು ಬಿಲ್ವಾರ್ಚನೆ, ಅಲಂಕಾರ ಪೂಜೆ, ಗುರುಪಾದ ಪೂಜೆ, ಮಹಾಮಂಗಳಾರತಿ ಸೇರಿದಂತೆ ಎಲ್ಲ ವೀರಶೈವ ಧಾರ್ಮಿಕ ಪೂಜಾ ವಿಧಿಗಳು ವೇದಮೂರ್ತಿ ಶಿವಾನಂದಸ್ವಾಮಿ ಹಿರೇಮಠ, ವೇದಮೂರ್ತಿ ಸೋಮಲಿಂಗ ಶಾಸ್ತ್ರಿಗಳು ಗುಡ್ಡದಮಠ ಹಾಗೂ ವೀರಯ್ಯ ಹಿರೇಮಠ ಅವರ ನೇತೃತ್ವದಲ್ಲಿ ನಡೆಯಲಿವೆ.

ಸಂಗೀತ ಕಾರ್ಯಕ್ರಮವೂ ನಡೆಯಲಿದ್ದು, ಶ್ರಾವಣ ಮಾಸದ ಅಂಗವಾಗಿ ಒಂದು ತಿಂಗಳ ಕಾಲ, ಹುಬ್ಬಳ್ಳಿ ತಾಲ್ಲೂಕು ಸುಳ್ಳ ಗ್ರಾಮದ ಯುವ ಸಂಗೀತಗಾರ ಗುರುಸಿದ್ದಯ್ಯ ಸವದಿಮಠ ಭಕ್ತಿಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಉಪ್ಪಿನ ಬೆಟಗೇರಿಯ ಮಡಿವಾಳಯ್ಯ ಶಹಪೂರಮಠ ತಬಲಾಸಾಥ್ ನೀಡುವರು.

ಇಷ್ಟಲಿಂಗ ಧಾರಣೆ: ಶ್ರಾವಣ ಮಾಸದ ಸಂದರ್ಭದಲ್ಲಿ ಪ್ರತಿನಿತ್ಯ ಮಠದ ಉಭಯ ಸ್ವಾಮೀಜಿ ಅವರು ಭಕ್ತ ಸಮೂಹಕ್ಕೆ ಇಷ್ಟಲಿಂಗ ಧಾರಣೆ ಮಾಡುವರು. ರುದ್ರಾಭಿಷೇಕ ಮಹಾಪೂಜೆಯಲ್ಲಿ ಪಾಲ್ಗೊಳ್ಳುವ ಮೂಲಕ ಆಸಕ್ತ ಭಕ್ತ ಸಮೂಹ ಇಷ್ಟಲಿಂಗ ಧಾರಣೆಯನ್ನು ಮಾಡಿಸಿಕೊಳ್ಳಬಹುದಾಗಿದೆ.

ಇಷ್ಟಲಿಂಗ ಧಾರಣೆಯನ್ನು ಮಾಡಿಸಿಕೊಳ್ಳುವವರು ಕನಿಷ್ಟ ಒಂದು ದಿನ ಮುಂಚಿತವಾಗಿ ಮಠಕ್ಕೆ ಭೇಟಿ ನೀಡಬೇಕು ಹೆಚ್ಚಿನ ಮಾಹಿತಿಗಾಗಿ 99454 69516 ಅಥವಾ 99459 59431ಕ್ಕೆ ಸಂಪರ್ಕಿಸಬಹುದು ಎಂದು ಶ್ರಾವಣ ಮಾಸದ ಕಾರ್ಯಕ್ರಮ ಸಂಚಾಲಕ ವಿನಾಯಕ ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.