ADVERTISEMENT

ಶ್ವೇತಾರಾಣಿಗೆ ಎಂಟು ಚಿನ್ನದ ಪದಕ

ಕರ್ನಾಟಕ ವಿಶ್ವವಿದ್ಯಾಲಯದ 68ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 6 ಮೇ 2018, 10:24 IST
Last Updated 6 ಮೇ 2018, 10:24 IST
68ನೇ ಘಟಿಕೋತ್ಸವದಲ್ಲಿ ಡಾ.ಆನಂದ ಪಾಂಡುರಂಗಿ ಅವರಿಗೆ ಕುಲಪತಿ ಪ್ರೊ.ಪ್ರಮೋದ ಗಾಯಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ.ಕೆ.ವಿಜಯರಾಘವನ್‌, ಡಾ.ಮಲ್ಲಿಕಾರ್ಜುನ ಪಾಟೀಲ ಇದ್ದಾರೆ.
68ನೇ ಘಟಿಕೋತ್ಸವದಲ್ಲಿ ಡಾ.ಆನಂದ ಪಾಂಡುರಂಗಿ ಅವರಿಗೆ ಕುಲಪತಿ ಪ್ರೊ.ಪ್ರಮೋದ ಗಾಯಿ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಪ್ರೊ.ನಿಜಲಿಂಗಪ್ಪ ಮಟ್ಟಿಹಾಳ, ಪ್ರೊ.ಕೆ.ವಿಜಯರಾಘವನ್‌, ಡಾ.ಮಲ್ಲಿಕಾರ್ಜುನ ಪಾಟೀಲ ಇದ್ದಾರೆ.   

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ 68 ನೇ ಘಟಿಕೋತ್ಸವದಲ್ಲಿ, ಜೀವ ರಸಾಯನಶಾಸ್ತ್ರ ವಿಭಾಗದ ಶ್ವೇತಾರಾಣಿ ಗುಬ್ಬೇವಾಡ ಎಂಟು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಳ್ಳುವ ಮೂಲಕ ‘ಚಿನ್ನದ ಹುಡುಗಿ’ ಪಟ್ಟವನ್ನು ತಮ್ಮದಾಗಿಸಿಕೊಂಡರು.

ಪ್ರಾಣಿ ಶಾಸ್ತ್ರ ವಿಭಾಗದ ಪಾರ್ವತಿ ಅಲ್ಲೊಳ್ಳಿ, ರಾಜ್ಯಶಾಸ್ತ್ರ ವಿಭಾಗದ ಜ್ಯೋತಿಬಾಯಿ ಬೋರಾಡೆ, ಪತ್ರಿಕೋದ್ಯಮ ವಿಭಾಗದ  ಮಂಜುನಾಥ ಗುಡಿಸಾಗರ ಮತ್ತು ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಸ್ವಾತಿ ಸಂಗಮ್‌ ತಲಾ ಏಳು ಪದಕಗಳನ್ನು ಪಡೆದರೆ, ಇಂಗ್ಲಿಷ್‌ ವಿಭಾಗದ ಚೈತ್ರಾ ನಾಗಮ್ಮನವರ, ಕನ್ನಡ ಅಧ್ಯಯನ ಪೀಠದ ಕೀರ್ತಿ ಪ್ರಭುಸ್ವಾಮಿ, ತತ್ವಜ್ಞಾನ ವಿಭಾಗದ ಗಂಗಮ್ಮ ಛಬ್ಬಿ ಮತ್ತು ಗಣಿತಶಾಸ್ತ್ರ ವಿಭಾಗದ ಭಾಗ್ಯಶ್ರೀ ಮೋರೆ ತಲಾ ಆರು ಚಿನ್ನದ ಪದಕ ಪಡೆದುಕೊಂಡರು.

ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದ ಶ್ವೇತಾರಾಣಿ ವಿಜಯಪುರ ಜಿಲ್ಲೆ ಗುಬ್ಬೇವಾಡದವರು. ‘ನಿರಂತರ ಪರಿಶ್ರಮದಿಂದ ಯಶಸ್ಸು ಸಾಧಿಸಿ, ಹೆಚ್ಚಿನ ಚಿನ್ನದ ಪದಕ ಪಡೆದ ಹೆಮ್ಮೆ ನನಗಿದೆ. ಸ್ಪರ್ಧಾತ್ಮಕ
ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ. ಅರಣ್ಯಾಧಿಕಾರಿಯಾಗಿ ಪರಿಸರ ಸಂರಕ್ಷಣೆ ಮಾಡಬೇಕು ಎನ್ನುವುದು ನನ್ನ ಆಶಯ’ ಎಂದು ಸಂತಸ ಹಂಚಿಕೊಂಡರು.

ADVERTISEMENT

ಪತ್ರಿಕೋದ್ಯಮದಲ್ಲಿ ಏಳು ಚಿನ್ನದ ಪದಕ ಪಡೆದ ಮಂಜುನಾಥ ಅತ್ಯಂತ ಬಡತನ ಹಿನ್ನೆಲೆಯಿಂದ ಬಂದವರು. ‘ಪತ್ರಿಕೋದ್ಯಮದಲ್ಲಿ ಸಾಧನೆ ಮಾಡಬೇಕು ಎನ್ನುವ ಉದ್ದೇಶದಿಂದ ಹಾವೇರಿ ಸ್ನಾತಕೋತ್ತರ ಕೇಂದ್ರಕ್ಕೆ ಪ್ರವೇಶ ಪಡೆದಿದ್ದೆ. ಅಲ್ಲಿ ಸೌಲಭ್ಯ ಇಲ್ಲದಿದ್ದರೂ, ಕಷ್ಟಪಟ್ಟು ಅಭ್ಯಾಸ ಮಾಡಿದ್ದೇನೆ. ಸಂತಸವಾಗಿದೆ’ ಎಂದರು. 

ಪ್ರಾಧ್ಯಾಪಕಿಯಾಗುವ ಇಚ್ಛೆ ವ್ಯಕ್ತಪಡಿಸಿದ ಚೈತ್ರಾ ನಾಗಮ್ಮನವರ, ತಮ್ಮ ಯಶಸ್ಸನ್ನು ತಂದೆ, ತಾಯಿ ಮತ್ತು ಪತಿಗೆ ಸಮರ್ಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.