ADVERTISEMENT

ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ: ಹೊರಟ್ಟಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 5:35 IST
Last Updated 9 ನವೆಂಬರ್ 2012, 5:35 IST

ಧಾರವಾಡ: `ನೈಸರ್ಗಿಕ ಸಂಪನ್ಮೂಲಗಳಾದ ಭೂಮಿ, ಜಲ, ಪ್ರಾಣಿ, ಗಿಡಮರ ಹಾಗೂ ಬೆಳೆ ಇವುಗಳ ಜೊತೆಗೆ ಪ್ರತಿಯೊಬ್ಬ ರೈತರು ಹೃದಯಪೂರ್ವಕವಾದ ಬಾಂಧವ್ಯವನ್ನು ಬೆಳೆಸಿಕೊಂಡಾಗ ಮಾತ್ರ ರೈತ ಸಮುದಾಯದ ಪ್ರಗತಿ ಹೊಂದಲು ಸಾಧ್ಯ~ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ಹುಬ್ಬಳ್ಳಿ ತಾಲ್ಲೂಕಿನ ಛಬ್ಬಿ ಗ್ರಾಮದಲ್ಲಿ ಮಂಗಳವಾರ ಇಲ್ಲಿಯ ಕೃಷಿ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಸಮಗ್ರ ಕೃಷಿ ಪದ್ಧತಿ ಹಾಗೂ ಮೇವಿನ ಜೋಳದ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು.

`ರೈತ ಸಂಪಾದಿಸಿದ ಅಲ್ಪ ಹಣ ತರುವ ನೆಮ್ಮದಿ ಹಾಗೂ ಸಮೃದ್ಧಿ ಬೇರೆ ಗಳಿಕೆಯಲ್ಲಿ ದೊರಕುವುದಿಲ್ಲ. ಪ್ರತಿಯೊಬ್ಬ ರೈತರು ಕೃಷಿಗೆ ಪೂರಕವಾದ, ಹೈನುಗಾರಿಕೆ, ತೋಟಗಾರಿಕೆ, ಜೇನು ಹಾಗೂ ಕುರಿಸಾಕಾಣಿಕೆ, ರೇಷ್ಮೆ ಹಾಗೂ ಬಹುಮುಖ್ಯವಾಗಿ ಮಳೆ ನೀರು ಕೊಯ್ಲು ಅವಶ್ಯವಾಗಿ ಅಳವಡಿಸಿಕೊಳ್ಳಬೇಕು~ ಎಂದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿ.ವಿ ಕುಲಪತಿ ಡಾ.ಆರ್.ಆರ್.ಹಂಚಿನಾಳ, `ಬರ ನಿವಾರಣೆಗಾಗಿ ಹಾಗೂ ಉತ್ಪಾದಕತೆ ಹೆಚ್ಚಿಸುವ ನಿಟ್ಟಿನಲ್ಲಿ ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ನೈಸರ್ಗಿಕ ಸಂಪನ್ಮೂಲ ನಿರ್ವಹಣೆ, ಸದ್ಬಳಕೆ,ಅಂತರ್ಜಲ ಸುಧಾರಣೆಯತ್ತ  ಗಮನಹರಿಸಬೇಕು~ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ಎಚ್.ಕೋನರೆಡ್ಡಿ ಇದ್ದರು. ಸಂಶೋಧನಾ ನಿರ್ದೇಶಕ  ಡಾ.ಬಸವರಾಜ ಎಂ.ಖಾದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಸ್ತರಣಾ ನಿರ್ದೇಶಕ ಡಾ.ಎಲ್.ಕೃಷ್ಣ ನಾಯಕ ಹಾಗೂ ಡಾ.ಎಸ್.ಡಿ.ಕೊಲೋಳಗಿ ಅವರು ಹೈನುಗಾರಿಕೆ ಕುರಿತು ಮಾತನಾಡಿದರು.

ಡಾ.ಸೈಯದ್ ಸದಾಕತ್, ಡಾ.ಬಿ.ಎಂ.ರಡ್ಡೇರ, ಡಾ.ಬಿ.ಸಿ.ಕಾಮಣ್ಣ, ಡಾ.ಎಚ್.ಟಿ.ಚಂದ್ರನಾಥ, ಡಾ.ಎಸ್.ಎನ್.ಜಾಧವ, ಡಾ.ಎಂ.ಎಸ್.ನಾಗರಾಜ, ಎಸ್.ಜಿ.ಭೂತಿ, ರಾಮಚಂದ್ರ ಪದಕಿ ಇದ್ದರು. ಡಾ.ಎಂ.ಎಸ್.ನಾಗರಾಜ ಪ್ರಾರ್ಥಿಸಿದರು. ಡಾ.ಶೇಖರಪ್ಪ ನಿರೂಪಿಸಿದರು. ಡಾ.ವೈ.ಬಿ.ಪಲ್ಲೇದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.