ADVERTISEMENT

ಸಮಸ್ಯೆ ಪರಿಹರಿಸದಿದ್ದರೆ ಯಾತ್ರೆಗೆ ತಡೆ: ಬಿಜೆಪಿಗೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2017, 7:45 IST
Last Updated 30 ನವೆಂಬರ್ 2017, 7:45 IST
ನವಲಗುಂದದಲ್ಲಿ ಬುಧವಾರ ರೈತ ಸೇನಾ ಕಾರ್ಯಕರ್ತರು ರೈತರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.
ನವಲಗುಂದದಲ್ಲಿ ಬುಧವಾರ ರೈತ ಸೇನಾ ಕಾರ್ಯಕರ್ತರು ರೈತರ ಪ್ರಮುಖ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು.   

ನವಲಗುಂದ: ‘ಕೊಟ್ಟ ಮಾತಿನಂತೆ ಕಳಸಾ ಬಂಡೂರಿ ಸಮಸ್ಯೆಯನ್ನು ಡಿ.15 ರೊಳಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಇತ್ಯರ್ಥ ಪಡಿಸದಿದ್ದರೆ, ಅವರ ಮನೆ ಮುಂದೆ ವಿಷ ಕುಡಿಯುತ್ತೇನೆ’ ರೈತ ಸೇನಾ ರಾಜ್ಯ ಘಟಕದ ಅಧ್ಯಕ್ಷ ವೀರೇಶ ಸೊಬರದಮಠ ಎಚ್ಚರಿಸಿದ್ದಾರೆ.

ರೈತ ಸೇನಾ ಕರ್ನಾಟಕ ವತಿಯಿಂದ ಬುಧವಾರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾದಲ್ಲಿ ಅವರು ಮಾತನಾಡಿದರು.

‘ಪ್ರತಿ ಚುನಾವಣೆಯಲ್ಲಿ ಮಹದಾಯಿ ಹೋರಾಟವನ್ನೇ ಮುಂದಿಟ್ಟುಕೊಂಡು ರಾಜಕಾರಣ ಮಾಡಲಾಗುತ್ತದೆ. ಕಳಸಾ ಬಂಡೂರಿ ವಿಷಯ ಇತ್ಯರ್ಥಗೊಳಿಸದೇ ಬಿಜೆಪಿಯ ಪರಿವರ್ತನಾ ಯಾತ್ರೆಗೆ ಜಿಲ್ಲೆಗೆ ಬರಲು ಬಿಡುವುದಿಲ್ಲ’ ಎಂದರು.

ADVERTISEMENT

‘ಬೆಂಬಲ ಬೆಲೆಯಡಿ ಕ್ವಿಂಟಲ್‌ ಕಡಲೆಗೆ ₹8 ರಿಂದ 10,000, ಜೋಳಕ್ಕೆ ₹4 ರಿಂದ 5,000, ಗೋಧಿಗೆ ₹4 ರಿಂದ 5,000, ಹತ್ತಿಗೆ ₹6 ರಿಂದ 8,000, ಸೂರ್ಯಕಾಂತಿಗೆ ₹8 ರಿಂದ 10,000, ಗೋವಿನಜೋಳಕ್ಕೆ ₹3 ರಿಂದ 4,000 ಹಾಗೂ ಮೆಣಸಿನಕಾಯಿ ₹15 ರಿಂದ 20,000ರ ವರೆಗೆ ಸರ್ಕಾರ ಕೂಡಲೇ ಖರೀದಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.

ಕಳೆದ ವರ್ಷದ ಬೆಳೆ ವಿಮಾ ಹಾಗೂ ಈ ಸಾಲಿನ ಫಸಲ್ ಭೀಮಾ ಯೋಜನೆಯ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಅಕಾಲಿಕ ಮಳೆಯಿಂದಾಗಿ ಹಾನಿಯಾದ ಬೆಳೆಗಳಿಗೆ ಪರಿಹಾರ ಕೊಡಬೇಕು ಎಂದರು.

‘ರೈತರು ಬಂದರೂ ದಾರಿ ನೀಡಿ, ಮಹದಾಯಿ ನೀರು ಕೋಡಿ’ ಎಂಬ ಘೋಷಣೆ ಹಾಕಿದರು. ನಂತರ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ಅರ್ಧಗಂಟೆ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದರು. ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ನವೀನ ಹುಲ್ಲೂರ ಅವರಿಗೆ ಮನವಿ ಸಲ್ಲಿಸಿದರು.

ರೈತಸೇನಾ ರಾಜ್ಯ ಉಪಾಧ್ಯಕ್ಷ ಶಂಕರಪ್ಪ ಅಂಬಲಿ, ಮುಖಂಡರಾದ ಗುರು ರಾಯನಗೌಡರ, ತಿಪ್ಪಣ್ಣ ಅಕ್ಕಿ, ಅಯ್ಯಪ್ಪ ಶಿರಕೋಳ, ಮಹೇಶ ನಾವಳ್ಳಿ, ಅಭಿಷೇಕ ಇಜಾರಿ, ಚಿದಾನಂದ ಹೂಲಿ, ನೀಲಿಪ್ಪ ಕಡಿಯವರ, ರವಿ ಬಾಜಿ, ಫಕ್ಕೀರಬಿ ಅಗಸರ, ಶೋಭಾ ಕಮತರ, ಕಸ್ತೂರೆವ್ವಾ ಬಾಳಿಕಾಯಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.