ADVERTISEMENT

ಸಮಾವೇಶದಿಂದ ಸಮಾಜ ಒಂದಾಗದು

​ಪ್ರಜಾವಾಣಿ ವಾರ್ತೆ
Published 24 ಜನವರಿ 2012, 11:45 IST
Last Updated 24 ಜನವರಿ 2012, 11:45 IST

ಧಾರವಾಡ: “ಹಿಂದೂ ಸಮಾಜ ಒಂದಾಗಬೇಕು ಎಂದು ಹೇಳಲು ಸಮಾವೇಶ ನಡೆಸಿ ನಾಲ್ಕು ಮಂದಿ ಕಾವಿಧಾರಿಗಳಿಂದ ಸಂದೇಶ ನೀಡಿದರೆ ಸಾಲದು. ಬೀದಿಗಿಳಿದು ಹೋರಾಟ ನಡೆಸುತ್ತಿರುವವರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಸಮಾಜ ಒಂದು ಮಾಡಬೇಕು” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸೋಮವಾರ ಅನುದಾನ ಬಿಡುಗಡೆ ಆಗ್ರಹಿಸಿ ಶಿಕ್ಷಕರು ನಡೆಸಿರುವ ಮುಷ್ಕರ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿಂದೂ ಶಕ್ತಿ ಸಂಗಮದ ಸಮಾವೇಶ ಕುರಿತು ಪ್ರಸ್ತಾಪಿಸಿ, ಸಮಾಜ ಒಂದಾಗಬೇಕಾದರೆ ಶಿಕ್ಷಕರ ಸಮಸ್ಯೆಗಳು ಸೇರಿದಂತೆ ಸಮುದಾಯದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವತ್ತ ಗಮನ ಹರಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಮಠಾಧೀಶರು ಇವರ ಬೆಂಬಲಕ್ಕೆ ಬರುತ್ತಿರುವುದು ಫ್ಯಾಶನ್ ಸಂಸ್ಕೃತಿಯಾಗಿದೆ. ಸಮಾಜಕ್ಕೆ ಸರಿಯಾಗಿ ಮಾರ್ಗದರ್ಶನ ಮಾಡಬೇಕಿದ್ದವರು ರಾಜಕಾರಣಿಗಳಿಗೆ ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸುವುದು ಸರಿಯಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಮಠಾಧೀಶರ ಗೌರವಕ್ಕೆ ಚ್ಯುತಿ ಬರುವಂತಾಗಿದೆ ಎಂದರು.

ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿಗಳ ನಡುವಿನ ಕಂದಕವನ್ನು ಸರಿಪಡಿಸಲು ಕೆಲವರು ಪ್ರಯತ್ನ ನಡೆಸಿದ್ದಾರೆ. ಕೇವಲ ರಾಜಕೀಯ ಬೆಳವಣಿಗೆಗಳಲ್ಲಿಯೇ ಹೆಚ್ಚು ಗಮನ ಹರಿಸಲಾಗುತ್ತಿದೆ ಹೊರತು, ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರ್ಕಾರ ಮುಂದಾಗುತ್ತಿಲ್ಲ. ಸರ್ಕಾರದ ನೀತಿಯಿಂದ ಜನರು ರೋಸಿಹೋಗಿದ್ದು, ಕೂಡಲೇ ವಿಸರ್ಜಿಸಿ ಚುನಾವಣೆಗೆ ಸಿದ್ಧರಾಗಬೇಕು ಎಂದು ಹೇಳಿದರು.

ಉಡುಪಿ- ಚಿಕ್ಕಮಂಗಳುರು ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಜೆಡಿಎಸ್ ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದರು.
ಮಾಜಿ ಸಚಿವ ಬಸವರಾಜ ಹೊರಟ್ಟಿ, ಹನಮಂತಪ್ಪ ಆಲ್ಕೋಡ, ಎನ್.ಎಚ್.ಕೋನರಡ್ಡಿ, ಸುರೇಶ ಹಿರೇಮಠ ಮತ್ತಿತರರು ಈ ಸಂದರ್ಭದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.