ADVERTISEMENT

ಸರ್ಕಾರದ ಕ್ರಮ ಪರಿಶೀಲನೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2011, 6:00 IST
Last Updated 20 ಸೆಪ್ಟೆಂಬರ್ 2011, 6:00 IST

ಹುಬ್ಬಳ್ಳಿ: `ಕಾನೂನುಬಾಹಿರ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈ ಹಿಂದೆ ಸಲ್ಲಿಸಿದ ಪ್ರಮಾಣ ಪತ್ರದಂತೆ ನಡೆದುಕೊಳ್ಳಲಾಗಿದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು~ ಎಂದು ಸುಪ್ರೀಂ ಕೋರ್ಟ್ ರಚನೆ ಮಾಡಿರುವ ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ)ಗೆ ಧಾರವಾಡದ ಸಮಾಜ ಪರಿವರ್ತನ ಸಮುದಾಯ (ಎಸ್‌ಪಿಎಸ್) ಮನವಿ ಮಾಡಿದೆ.

ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತ ನಾಡಿದ ಸಂಘಟನೆ ಮುಖಂಡ ಎಸ್.ಆರ್. ಹಿರೇಮಠ, `ಬೇಲೆಕೇರಿ ಬಂದರಿನಿಂದ ಅದಿರು ಕಳ್ಳತನ ವಾದ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಕ್ರಮ ಕೈಗೊಳ್ಳುವಂತೆಯೂ ಸಿಇಸಿಗೆ ಮನವಿ ಮಾಡಿದ್ದೇವೆ~ ಎಂದು ತಿಳಿಸಿದರು.

ಸಿಇಸಿಗೆ ಬರೆದ ಪತ್ರದ ಪ್ರತಿಗಳನ್ನು ಅವರು ಮಾಧ್ಯಮ ಪ್ರತಿನಿಧಿಗಳಿಗೆ ಬಿಡುಗಡೆ ಮಾಡಿದರು.
`ಕಾನೂನುಬಾಹಿರ ಗಣಿಗಾರಿಕೆಯಲ್ಲಿ ಪಾಲ್ಗೊಂಡ ಎಲ್ಲ ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಸುಪ್ರೀಂ ಕೋರ್ಟ್‌ಗೆ ಏಪ್ರಿಲ್ 20 ರಂದು  ಪ್ರಮಾಣ ಪತ್ರ ಸಲ್ಲಿಸಿದ್ದರು. ಆದರೆ, ಇಲ್ಲಿ ಯವರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಇಲ್ಲ. ಆದ್ದರಿಂದಲೇ ಫಾಲೋ ಅಪ್ ಮಾಡುವಂತೆ ಸಿಇಸಿಗೆ ಕೇಳಿಕೊಂಡಿದ್ದೇವೆ~ ಎಂದು ವಿವರಿಸಿದರು.

`ಅದಿರು ಕಳ್ಳತನ ಪ್ರಕರಣದ ತನಿಖೆ ಬಸವನ ಹುಳು ತೆವಳುವ ವೇಗದಲ್ಲಿ ನಡೆದಿದೆ. ಆದ್ದರಿಂದ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಬೇಕಿದೆ. ಸಿಬಿಐ ಮೇಲೆ ಕೇಂದ್ರ ಸರ್ಕಾರ ಪ್ರಭಾವ ಬೀರದಂತೆ ನೋಡಿಕೊಳ್ಳಲು ಸುಪ್ರೀಂ ಕೋರ್ಟ್ ಮೇಲು ಸ್ತುವಾರಿಯಲ್ಲಿ ತನಿಖೆ ನಡೆಯಬೇಕು~ ಎಂದು ಅಭಿ ಪ್ರಾಯಪಟ್ಟರು.

`ಅದಿರು ಗಣಿಗಾರಿಕೆ ಗುತ್ತಿಗೆ, ತೆರಿಗೆ ವಿನಾಯಿತಿ, ಲೈಸನ್ಸ್ ಅವಧಿ ಮುಗಿದರೂ ಅದಿರು ಸಾಗಾಟಕ್ಕೆ ಅನುಮತಿ ಸೇರಿದಂತೆ ಎಲ್ಲ ಪ್ರಕರಣಗಳ ಸಮಗ್ರ ತನಿಖೆ ನಡೆಸಬೇಕು. ಲೋಕಾಯುಕ್ತ ವರದಿ ಆಧರಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂಬ ಮನವಿಯನ್ನೂ ಸಿಇಸಿಗೆ ಸಲ್ಲಿಸಲಾಗಿದೆ~ ಎಂದು ಅವರು ಮಾಹಿತಿ ನೀಡಿದರು.

`ನ್ಯಾ. ಸಂತೋಷ ಹೆಗ್ಡೆ ಅವರು ಲೋಕಾಯುಕ್ತ ರಾಗಿದ್ದಾಗ ನೀಡಿದ ಮೊದಲ ಅಕ್ರಮ ಗಣಿಗಾರಿಕೆ ವರದಿ ಶೈತ್ಯಾಗಾರ ಸೇರಿದ್ದು, ಎರಡನೇ ವರದಿಗೂ ಅದೇ ಗತಿ ಕಾಣಿಸುವ ಹವಣಿಕೆಯಲ್ಲಿ ರಾಜ್ಯ ಸರ್ಕಾ ರವಿದೆ. ಆದರೆ, ನಮ್ಮ ಸಂಘಟನೆ ಅದಕ್ಕೆ ಅವಕಾಶ ನೀಡದೆ ಕಾನೂನುಸಮರ ಮುಂದುವರಿಸಲಿದೆ~ ಎಂದು ಅವರು ವಿವರಿಸಿದರು.

`ರಾಜ್ಯದ ಸಂಡೂರು ತಾಲ್ಲೂಕಿನ ರಾಮಗಡ ಪ್ರದೇಶದಲ್ಲಿ ಜಿ.ಸೋಮಶೇಖರ ರೆಡ್ಡಿ ಅಕ್ರಮ ಗಣಿಗಾರಿಕೆ ನಡೆಸಿರ‌್ದುವುದು ಲೋಕಾಯುಕ್ತರು ನೀಡಿರುವ ವರದಿಯಿಂದ ದೃಢಪಟ್ಟಿದೆ. ಅವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಾಗಬೇಕು. ರೆಡ್ಡಿ ಅವರಿಂದ ನಡೆದಿರುವ ಕಾನೂನುಬಾಹಿರ ಚಟುವಟಿಕೆಗಳ ತನಿಖೆಯಾಗಬೇಕು~ ಎಂದು ಹಿರೇಮಠ ಆಗ್ರಹಿಸಿದರು.

`ಅಕ್ರಮ ಗಣಿಗಾರಿಕೆ ವಿರುದ್ಧ ರಾಜ್ಯದಾದ್ಯಂತ ಸಂಕಲ್ಪ ಸಭೆ ಹಾಗೂ ಜಾಗೃತಿ ಸಮಾವೇಶಗಳನ್ನು ನಡೆಸಲಾಗುತ್ತದೆ. ಎಲ್ಲೆಡೆಯಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ~ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.