ADVERTISEMENT

‘ಸರ್ಕಾರಿ ಶಾಲೆಗಳಿಗೆ ಅಧಿಕಾರಿಗಳ ಭೇಟಿ ಕಡ್ಡಾಯ’

​ಪ್ರಜಾವಾಣಿ ವಾರ್ತೆ
Published 22 ಮೇ 2018, 8:15 IST
Last Updated 22 ಮೇ 2018, 8:15 IST

ಧಾರವಾಡ: ‘ಸಾರ್ವಜನಿಕ ಶಿಕ್ಷಣ ಇಲಾಖೆಯ ಎಲ್ಲ ಅಧಿಕಾರಿಗಳು ನಿತ್ಯ ಬೆಳಿಗ್ಗೆ ಪ್ರಾರ್ಥನೆ ವೇಳೆ ಒಂದು ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಾರ್ಗದರ್ಶನ ಮಾಡುವುದು ಕಡ್ಡಾಯ' ಎಂದು ಇಲಾಖೆಯ ವಾಯವ್ಯ ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತ  ಸಿದ್ಧಲಿಂಗಯ್ಯ ಹಿರೇಮಠ ಹೇಳಿದರು.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸೋಮವಾರ ಜರುಗಿದ ಬೆಳಗಾವಿ ವಿಭಾಗ ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ವಿಭಾಗದ ಎಲ್ಲ ಡಿಡಿಪಿಐ, ಬಿಇಓ, ವಿಷಯ ಪರಿವೀಕ್ಷಕರು, ಬಿಆರ್‌ಸಿ ಸಮನ್ವಯಾಧಿಕಾರಿಗಳು ಸೇರಿದಂತೆ ಎಲ್ಲಾ ಹಂತದ ಅಧಿಕಾರಿಗಳು ಸರ್ಕಾರಿ ಶಾಲೆಗೆ ಭೇಟಿ ನೀಡಬೇಕು’ ಎಂದರು.

‘ಸರ್ಕಾರ ಪ್ರತಿ ವರ್ಷ ಇಲಾಖೆಗೆ ₹30 ಸಾವಿರ ಕೋಟಿ ಅನುದಾನ ನೀಡುತ್ತಿದೆ. ಇಲಾಖೆಯಿಂದ ಪ್ರತಿಫಲ ಅಪೇಕ್ಷಿಸುತ್ತದೆ. ಕನಿಷ್ಠ ಕಲಿಕೆಯೂ ಸಾಧ್ಯವಾಗದಿದ್ದರೆ, ಶಿಕ್ಷಕರ ಬೋಧನೆಯಿಂದ ಮಕ್ಕಳು ವಂಚಿತರಾಗಿದ್ದಾರೆಂದೇ ಇಲಾಖೆ ಗ್ರಹಿಸುತ್ತದೆ’ ಎಂದರು.

ADVERTISEMENT

‘ಗ್ರಾಮ ಪಂಚಾಯ್ತಿಗಳ ಸಹಕಾರದೊಂದಿಗೆ ಪ್ರತಿಯೊಂದೂ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದ್ದು, ಇದಕ್ಕೆ ಪೂರಕವಾಗಿ 500 ಗ್ರಾಮಗಳ ಅಂಗನ
ವಾಡಿ ಕೇಂದ್ರಗಳನ್ನು ಸರ್ಕಾರಿ ಪ್ರಾಥಮಿಕ ಶಾಲಾ ಕಟ್ಟಡಗಳಿಗೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಬೆಳಗಾವಿ ವಿಭಾಗದಲ್ಲಿ 50ಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿರುವ ಒಟ್ಟು 4,956 ಶಾಲೆಗಳಿದ್ದು, ಈ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಗ್ರಾಮದ ಹಿರಿಯರ ಜೊತೆಗೆ ಸಭೆ ಮಾಡಿ, ಶಾಲೆಗಳ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಕೊಳ್ಳಬೇಕು’ ಎಂದರು.

‘ಎಸ್‌ಎಸ್‌ಎಲ್‌ಸಿಯಲ್ಲಿ ಶೂನ್ಯ ಫಲಿತಾಂಶ ದಾಖಲಿಸಿರುವ ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢ ಶಾಲೆಗಳ ಮಾನ್ಯತೆ ರದ್ದುಪಡಿಸಲಾಗಿದೆ. ಸರ್ಕಾರಿ ಪ್ರೌಢ ಶಾಲೆಗಳ ಫಲಿತಾಂಶ ಕಳಪೆ ಮಟ್ಟದ್ದಾದರೆ ಅಲ್ಲಿರುವ ಶಿಕ್ಷಕ, ಶಿಕ್ಷಕಿಯರನ್ನು ಬೇರೆ ಜಿಲ್ಲೆಯ ದೂರದ ಶಾಲೆಗಳಿಗೆ ವರ್ಗಾವಣೆ ಮಾಡಲಾಗುವುದು’ ಎಂದು ಎಚ್ಚರಿಸಿದರು. 

ಜಂಟಿ ನಿರ್ದೇಶಕ ಡಾ.ಬಿ.ಕೆ.ಎಸ್. ವರ್ಧನ್, ಪ್ರಸನ್ನಕುಮಾರ, ಮಮತಾ ನಾಯಕ, ರಾಜು ನಾಯಕ, ಉಪನಿರ್ದೇಶಕ ಎಂ.ಎಫ್. ಕುಂದಗೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.