ADVERTISEMENT

‘ಸಾಲ ಮನ್ನಾ ಮಾಡದಿದ್ದರೆ ಉಗ್ರ ಹೋರಾಟ’

ಪಕ್ಷಾತೀತ ರೈತ ಹೋರಾಟ ಸಮಿತಿಯಿಂದ ಮುಖ್ಯಮಂತ್ರಿಗೆ ಪತ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2018, 9:09 IST
Last Updated 27 ಮೇ 2018, 9:09 IST
ನವಲಗುಂದದಲ್ಲಿ ಪಕ್ಷಾತೀತ ರೈತ ಹೋರಾಟ ಸಮಿತಿಯವರು ಕಳಸಾ ಬಂಡೂರಿ ಹೋರಾಟದ ವೇದಿಕೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು
ನವಲಗುಂದದಲ್ಲಿ ಪಕ್ಷಾತೀತ ರೈತ ಹೋರಾಟ ಸಮಿತಿಯವರು ಕಳಸಾ ಬಂಡೂರಿ ಹೋರಾಟದ ವೇದಿಕೆಯಲ್ಲಿ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು   

ನವಲಗುಂದ: ಜೆಡಿಎಸ್ ಪಕ್ಷದ ಪ್ರಣಾಳಿಕೆಯಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಗಳಲ್ಲಿ ರೈತರ ಎಲ್ಲ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದಂತೆಯೇ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಕ್ಷಣವೇ ಸಾಲ ಮನ್ನಾ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಪಕ್ಷಾತೀತ ರೈತ ಹೋರಾಟ ಸಮಿತಿಯವರು ಶನಿವಾರ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಮಿತಿಯು ಮೂರು ವರ್ಷ ಸತತ ಬರಗಾಲದಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ. ಸಾಲ ಬಾಧೆಯಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ತಕ್ಷಣವೇ ಸರ್ಕಾರವು ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕೆಂದು ಆಗ್ರಹಿಸಿದೆ.

ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಳಸಾ– ಬಂಡೂರಿ ಯೋಜನೆಯನ್ನು ಆರು ತಿಂಗಳಲ್ಲಿ ಬಗೆಹರಿಸುವುದಾಗಿ ಮಾತು ಕೊಟ್ಟಿದ್ದನ್ನು ಮರೆಯಬಾರದು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪನವರು ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಸೋಮವಾರ ಕರ್ನಾಟಕ ಬಂದ್ ಮಾಡುವುದಾಗಿ ಎಚ್ಚರಿಸಿದ್ದಾರೆ. ರೈತರ ವಿಷಯವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳದೆ ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕೆಂದು ಸಮಿತಿಯು ಸಲಹೆ ಮಾಡಿದೆ.

ADVERTISEMENT

ರೈತರಿಗೆ ಮೋಸ ಮಾಡಿದರೆ ಬೀದಿಗಿಳಿದು ಉಗ್ರ ಹೋರಾಟ ಮಾಡಲಾಗುವುದೆಂದು ಪಕ್ಷಾತೀತ ರೈತ ಹೋರಾಟ ಸಮಿತಿಯ ಅಧ್ಯಕ್ಷ ಬಸಪ್ಪ ಬೀರಣ್ಣವರ, ಹೋರಾಟಗಾರರಾದ ಸುಭಾಸಚಂದ್ರಗೌಡ ಪಾಟೀಲ, ಬಿ.ಎಸ್.ಪಾಟೀಲ, ಆರ್.ಎಂ.ನಾಯ್ಕರ್, ಎಂ.ಬಿ.ಮೂಲಿಮನಿ, ಮಲ್ಲೇಶಪ್ಪ ಹಳಕಟ್ಟಿ, ಮಲ್ಲಪ್ಪ ಹತ್ತಿಕಟಗಿ, ಗಂಗಪ್ಪ ಸಂಗಟಿ, ಮಲ್ಲಿಕಾರ್ಜುನಗೌಡ ಪಾಟೀಲ, ಗೌಡಪ್ಪಗೌಡ ದೊಡ್ಡಮನಿ, ಸಿದ್ದಪ್ಪ ಮುಪ್ಪಯ್ಯನವರ, ಬಸಯ್ಯ ಮಠಪತಿ, ಮಲ್ಲೇಶ ಉಪ್ಪಾರ ಹಾಗೂ ಇನ್ನಿತರರು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.