ADVERTISEMENT

ಸಾವಿನಂಚಿನಿಂದ ಪಾರಾದ ಉಡ ಕಾಡಿಗೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 9:00 IST
Last Updated 19 ಜುಲೈ 2012, 9:00 IST

ಧಾರವಾಡ: `ಉಡ ಹಿಡದಂಗ ಹಿಡದಿಯಲ್ಲೋ ಮಾರಾಯ~ ಎಂದು ಹೇಳುವುದು ಸಾಮಾನ್ಯ. ಹಿಂದೆ ಸೈನಿಕರು ಬೇರೊಂದು ರಾಜ್ಯದ ಮೇಲೆ ದಂಡೆತ್ತಿ ಹೋಗುವಾಗ ಕೋಟೆಯ ಮೇಲೇರಲು ಉಡವನ್ನು ಕೊಕ್ಕೆಯಂತೆ ಬಳಸುವುದನ್ನು ಕೇಳಿದ್ದೇವೆ. ಅಂತಹ ಉಡವೊಂದು ಧಾರವಾಡ ತಾಲ್ಲೂಕಿನ ಗೋವನಕೊಪ್ಪ ಕ್ರಾಸ್ ಬಳಿಯ ಜಮೀನಿನಲ್ಲಿ ಬುಧವಾರ ದೊರೆತಿದ್ದು, ಅದನ್ನು ಮಾರಾಟಕ್ಕೆ ಕೊಂಡೊಯ್ಯುತ್ತಿದ್ದವರಿಗೆ ತಿಳಿ ಹೇಳಿ ಮರಳಿ ಕಾಡಿಗೆ ಬಿಟ್ಟ ಘಟನೆ ನಡೆದಿದೆ.

ಭತ್ತದ ಗದ್ದೆಯಲ್ಲಿ ಸಿಕ್ಕ ಉಡವನ್ನು ಕೆಲವರು ಮಾರಾಟ ಮಾಡಲು ನಗರಕ್ಕೆ ಕೊಂಡೊಯ್ಯುತ್ತಿದ್ದರು. ಇದನ್ನು ತಿಳಿದ ಆ ಜಮೀನಿನ ಮಾಲೀಕ ಅಶೋಕ ಗೊಳಗೊಳಕಿ ಅವರನ್ನು ತಡೆದು, ಹಾವುಗಳನ್ನು ಹಿಡಿಯುವ ಎಲ್ಲಪ್ಪ ಜೋಡಳ್ಳಿ ಎಂಬುವವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಅಲ್ಲಿಗೆ ಧಾವಿಸಿದ ಎಲ್ಲಪ್ಪ ಅವರಿಗೆ ಉಡಗಳನ್ನು ಕೊಲ್ಲಬಾರದು ಎಂದು ಹೇಳಿ ಉಡವನ್ನು ಪಡೆದು ಧಾರವಾಡದ ಮಾಳಮಡ್ಡಿಯಲ್ಲಿರುವ ವನ್ಯಜೀವಿ ತಜ್ಞ ಗಂಗಾಧರ ಕಲ್ಲೂರ ಅವರ ಮನೆಗೆ ತಂದಿದ್ದಾರೆ. ಉಡಕ್ಕೆ 20ಕ್ಕೂ ಅಧಿಕ ಉಣ್ಣೆಗಳು ಹತ್ತಿಕೊಂಡಿದ್ದವು. ಅವುಗಳನ್ನೆಲ್ಲ ಬಿಡಿಸಿ ಸ್ನಾನ ಮಾಡಿಸಿ ಬಳಿಕ ಕಾಡಿಗೆ ಬಿಟ್ಟರು.

ಈ ಸಂದರ್ಭದಲ್ಲಿ ಮಾಹಿತಿ ನೀಡಿದ ಕಲ್ಲೂರ, “ಈ ಉಡ ಸುಮಾರು 4-5 ತಿಂಗಳದಾಗಿದ್ದು, ಭತ್ತದ ಗದ್ದೆಗಳಲ್ಲಿ ಇಲಿಗಳನ್ನು ಹುಡುಕಲು ನೆಲವನ್ನು ಕೊರೆಯುತ್ತವೆ. ಅದನ್ನು ತಡೆಯಲೂ ಇವುಗಳನ್ನು ಕೊಲ್ಲಲಾಗುತ್ತದೆ. ಆದರೆ ಇದರ ಚರ್ಮಕ್ಕೆ ಭಾರಿ ಬೇಡಿಕೆ ಇರುವುದರಿಂದ, ಇಲ್ಲವೇ ಕೆಲವರು ಮೂಢನಂಬಿಕೆಯಿಂದ ಕೊಲ್ಲುತ್ತಾರೆ. ಹೀಗೆ ಕೊಲ್ಲುವುದರಿಂದ ಪರಿಸರ ಸಮತೋಲನ ಕೆಡುತ್ತದೆ. ಇದು ಸಂಪೂರ್ಣ ಮಾಂಸಾಹಾರಿಯಾಗಿದ್ದು, ಇಲಿ ಹಾಗೂ ಹಾವಿನ ಮರಿಗಳನ್ನು ತಿನ್ನುತ್ತದೆ” ಎಂದರು.
ನಂತರ ಕೆಲಗೇರಿ ಬಳಿಯ ಕಾಡಿನಲ್ಲಿ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.