ADVERTISEMENT

ಸಾಹಿತ್ಯ ಕಾರ್ಯಕ್ಕೆ ಕಾರ್ಯಕರ್ತರ ಪಡೆ ಬೇಕು

​ಪ್ರಜಾವಾಣಿ ವಾರ್ತೆ
Published 8 ಮೇ 2012, 9:35 IST
Last Updated 8 ಮೇ 2012, 9:35 IST

ಧಾರವಾಡ: `ಸಾಹಿತ್ಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಹೋಗಲು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಕಾರ್ಯಕರ್ತರ ಪಡೆಯನ್ನು ಸೃಷ್ಟಿಸಬೇಕು~ ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಸಲಹೆ ನೀಡಿದರು.

ನಗರದ ಸಾಹಿತ್ಯ ಭವನದಲ್ಲಿ ಸೋಮವಾರ ಜಿಲ್ಲಾ ಕಸಾಪ ನೂತನ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಅವರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ ಅವರು, `ಸಾಹಿತ್ಯ ಪರಿಷತ್ತು ಅಧಿಕೃತವಾಗಿ ಅಸ್ತಿತ್ವದಲ್ಲಿ ಇಲ್ಲದಿದ್ದ ಸಮಯದಲ್ಲೂ ಹಲವಾರು ಸಾಹಿತಿಗಳು ಸಾಹಿತ್ಯ ಸೇವೆಯನ್ನು ಮಾಡಿದ್ದಾರೆ. ಜಿ.ನಾರಾಯಣ ಅವರ ಆಸಕ್ತಿಯ ಫಲವಾಗಿ ಸಾಹಿತ್ಯ ಪರಿಷತ್ತಿನ ಕಟ್ಟಡಗಳು ಅಸ್ತಿತ್ವಕ್ಕೆ ಬಂದವು. ಅವರು ಬೆಂಗಳೂರು ಪಾಲಿಕೆ ಮೇಯರ್ ಆಗಿದ್ದಾಗ ಸರ್ಕಾರದ ಮೇಲೆ ಪ್ರಭಾವ ಬೀರಿ ಸಾಹಿತ್ಯಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುದಾನವನ್ನು ಪಡೆದುಕೊಂಡರು~ ಎಂದರು.

`ಪ್ರತಿ ತಿಂಗಳು ಕಾರ್ಯಕ್ರಮಗಳು ಕೈಗೂಡಬೇಕು. ಅದಕ್ಕೆ ನಮ್ಮ ಬೆಂಬಲ ಸದಾ ಇರುತ್ತದೆ~ ಎಂದೂ ಭರವಸೆ ನೀಡಿದರು.

ಹಿರಿಯ ವಿಮರ್ಶಕ ಡಾ.ಜಿ.ಆರ್.ಆಮೂರ ಮಾತನಾಡಿ, `ರಾಜಕೀಯ ಇಲ್ಲದೆ ಅಧಿಕಾರವೂ ಇಲ್ಲ. ಆದ್ದರಿಂದ ಅಧಿಕಾರವನ್ನು ಜನಹಿತಕ್ಕೆ ಬಳಸಿಕೊಂಡು ಸೇವಾವಧಿಯನ್ನು ಪೂರ್ಣಗೊಳಿ ಸಬೇಕು~ ಎಂದು ಹೇಳಿದರು.
 
ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ, `ಕನ್ನಡ ಸಾಹಿತ್ಯದ ಪರಿಸರವನ್ನು ನಿರ್ಮಿಸುವುದು ನೂತನ ಅಧ್ಯಕ್ಷರ ಆದ್ಯತೆಯಾಗಬೇಕು. ಕನ್ನಡ ಕಟ್ಟುವುದು ಪರಿಷತ್ತಿನ ಮುಖ್ಯ ಕಾರ್ಯವಾಗಬೇಕು. ಕನ್ನಡದ ಜಾಗೃತ ಪ್ರಜ್ಞೆಯನ್ನು ಇರಿಸಿಕೊಂಡು, ವಿರೋಧಿಸಿದವನ್ನೂ ಪ್ರೀತಿಸಿ ಪರಿಷತ್ತನ್ನು ಮುನ್ನಡೆಸಿಕೊಂಡು ಹೋಗಬೇಕು~ ಎಂದರು.

ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ, `ಸಾಹಿತಿಗಳೇ ಅಧ್ಯಕ್ಷರಾಗಬೇಕಿಲ್ಲ. ಸಂಘಟಕರೂ ಅಧ್ಯಕ್ಷರಾಗಬೇಕು ಎಂಬ ಉದ್ದೇಶದಿಂದ ಅಂಗಡಿ ಅವರನ್ನು ಆಯ್ಕೆ ಮಾಡಿದ್ದೇವೆ. ಧಾರವಾಡವು ಸಾಹಿತ್ಯಿಕ ಚಟುವಟಿಕೆಗಳ ತಾಣವಾಗಿದ್ದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು. ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಹಣಕಾಸಿನಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು~ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.