ADVERTISEMENT

ಸಾಹಿತ್ಯ ಪರಿಚಾರಕನಿಗೆ ವಿದಾಯ

ನಾಡಿನ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜಗೆ ಅಂತಿಮ ನಮನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 6:27 IST
Last Updated 13 ಮೇ 2018, 6:27 IST
ಧಾರವಾಡದಲ್ಲಿ ಶನಿವಾರ ಡಾ. ಗಿರಡ್ಡಿ ಗೋವಿಂದರಾಜ ಅವರ ಅಂತಿಮ ದರ್ಶನ ಪಡೆದ ಡಾ. ಪಾಟೀಲ ಪುಟ್ಟಪ್ಪ ಅವರು ಡಾ. ಶಾಂತಾ ಇಮ್ರಾಪುರ ಹಾಗೂ ಇತರರೊಂದಿಗೆ ಮಾತನಾಡಿದರು
ಧಾರವಾಡದಲ್ಲಿ ಶನಿವಾರ ಡಾ. ಗಿರಡ್ಡಿ ಗೋವಿಂದರಾಜ ಅವರ ಅಂತಿಮ ದರ್ಶನ ಪಡೆದ ಡಾ. ಪಾಟೀಲ ಪುಟ್ಟಪ್ಪ ಅವರು ಡಾ. ಶಾಂತಾ ಇಮ್ರಾಪುರ ಹಾಗೂ ಇತರರೊಂದಿಗೆ ಮಾತನಾಡಿದರು   

ಧಾರವಾಡ: ತೀವ್ರ ಹೃದಯಾಘಾತದಿಂದ ಶುಕ್ರವಾರ ವಿಧಿವಶರಾದ ನಾಡಿನ ಹಿರಿಯ ವಿಮರ್ಶಕ ಡಾ.ಗಿರಡ್ಡಿ ಗೋವಿಂದರಾಜ ಅವರ ಇಲ್ಲಿನ ನವೋದಯನಗರದ ಮನೆ ’ಸರೋಜ’ ದಲ್ಲಿ ಶನಿವಾರ ನೀರವ ಮೌನ. ಅಮೂಲ್ಯವಾದದ್ದನ್ನು ಕಳೆದುಕೊಂಡ ಭಾವ ಪ್ರತಿಯೊಬ್ಬರಲ್ಲಿ ಮನೆ ಮಾಡಿತ್ತು.

ಬೆಳಿಗ್ಗೆ ಹಿರಿಯ ಸಾಹಿತಿಗಳು, ಗಣ್ಯರ ದಂಡೇ ಹರಿದು ಬಂದಿತ್ತು. ಡಾ.ಚೆನ್ನವೀರ ಕಣವಿ, ಡಾ.ಸಿದ್ಧಲಿಂಗ ಪಟ್ಟಣಶೆಟ್ಟಿ,  ಪ್ರೊ.ಐ.ಜಿ.ಸನದಿ, ಚಂದ್ರಕಾಂತ ಬೆಲ್ಲದ, ಡಾ.ಎಚ್.ವಿ.ಮಹೇಶ್ವರಯ್ಯ, ಡಾ.ವೀಣಾ ಶಾಂತೇಶ್ವರ, ಡಾ.ರಾಘವೇಂದ್ರ ಪಾಟೀಲ, ಡಾ.ಮಲ್ಲಿಕಾರ್ಜುನ ಹಿರೇಮಠ, ಕವಿವಿ ಕುಲಸಚಿವ ಡಾ.ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಅನೇಕರು ಗಿರಡ್ಡಿ ನಿವಾಸಕ್ಕೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.

ಕರ್ನಾಟಕ ಕಾಲೇಜಿನಲ್ಲಿ ಅವರ ಸಹಪಾಠಿಯಾಗಿದ್ದ ಪ್ರೊ.ಐ.ಜಿ.ಸನದಿ, ‘ಕಾಲೇಜಿನಲ್ಲಿ ಚರ್ಚಾ ಸ್ಪರ್ಧೆಗೆ ಹೋಗುವಾಗ ಡಾ.ಗಿರಡ್ಡಿ ಅವರ ಬಳಿಯಿದ್ದ ಕೋಟು ಕೊಡುತ್ತಿದ್ದರು. ನಾಟಕಕ್ಕೆ ಪಾತ್ರ ಸಿದ್ಧಪಡಿಸುವಂತೆ ನನ್ನನ್ನು ಸಿದ್ಧಗೊಳಿಸಿ, ನೀನು ಚೊಲೊ ಮಾತಾಡ್ತಿ. ಸ್ಪರ್ಧಾಕ್ಕ ನೀನ್ ಹೋಗು ಅಂತಿದ್ರು. ನನ್ನ ಬದುಕಿನ ಹಲವು ಘಟ್ಟಗಳಲ್ಲಿ ಗಿರಡ್ಡಿ ಅವರ ಪಾತ್ರ ದೊಡ್ಡದು. ಕಳೆದ ಸಾಹಿತ್ಯ ಸಂಭ್ರಮದ ಸಂದರ್ಭದಲ್ಲಿ ಇದು ಬಹುಶಃ ಕೊನೆಯ ಸಂಭ್ರಮ. ಇನ್ನು ಮುಂದೆ ಇದನ್ನು ಸಂಘಟಿಸುವುದು ಕಷ್ಟ ಎಂದಿದ್ದರು. ಅವರು ಅಂದ ಹಾಗೆಯೇ ಆಗಿದೆ. ಸಾಹಿತ್ಯ ಸಂಭ್ರಮ ಅವರ ಕನಸಿನ ಕೂಸು. ಅದು ಮುಂದುವರಿಯಬೇಕು ಎನ್ನುವುದು ನನ್ನ ಆಸೆ. ಅದನ್ನು ಅವರ ಮುಂದೆ ಹೇಳಿಕೊಂಡಿದ್ದೆ ಕೂಡಾ’ ಎಂದು ನೆನೆಪಿಸಿಕೊಂಡರು.

ADVERTISEMENT

ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ, ‘ಬಹಳಷ್ಟು ಲೇಖಕರು, ಬರಹಗಾರರು ಸಿಗುತ್ತಾರೆ. ಆದರೆ, ಒಬ್ಬ ಉತ್ತಮ ವಿಮರ್ಶಕ ರೂಪುಗೊಳ್ಳುವುದು ಕಷ್ಟ. ಅವರ ಇಲ್ಲದಿರುವಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ದೊಡ್ಡ ನಷ್ಟ. ಇನ್ನೂ ಅವರ ಸೇವೆ ಬೇಕು ಎನ್ನುವಾಗಲೇ ನಮ್ಮಿಂದ ದೂರವಾಗಿದ್ದಾರೆ’ ಎಂದರು.

‘ಹೊರಗಿನ ಖಾಲಿತನ ತುಂಬಿಕೊಳ್ಳಬಹುದು. ಆದರೆ, ಒಳಗಿನ ಖಾಲಿತನ ತುಂಬಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆ ಡಾ.ಗಿರಡ್ಡಿ ಅವರ ನಿಧನದಿಂದ ನಮ್ಮ ಎದುರು ನಿಂತಿದೆ. ಕನ್ನಡ ಸಾರಸ್ವತಲೋಕ ಅಪ್ರತಿಮ ವಿಮರ್ಶಕರೊಬ್ಬರನ್ನು ಕಳೆದುಕೊಂಡಿದೆ’ ಎಂದು ಕಣ್ಣೀರು ಒರೆಸಿಕೊಳ್ಳುತ್ತಲೇ ಹೇಳಿದರು ಕಥೆಗಾರ ಡಾ.ರಾಘವೇಂದ್ರ ಪಾಟೀಲ.

ಡಾ.ಗಿರಡ್ಡಿ ಗೋವಿಂದರಾಜ ಅವರ ಅಂತ್ಯಕ್ರಿಯೆಗೆ ಗದಗ ಜಿಲ್ಲೆ ಅಬ್ಬಿಗೇರಿಯತ್ತ ಅವರ ಪಾರ್ಥಿವ ಶರೀರದ ಮೆರವಣಿಗೆ ಹೊರಡುತ್ತಿದ್ದಂತೆಯೇ ಅಲ್ಲಿ ಸೇರಿದ್ದ ನೂರಾರು ಕಣ್ಣುಗಳಲ್ಲಿ ಕಂಬನಿ ತುಂಬಿತ್ತು. ಭಾರವಾದ ಹೃದಯದಿಂದ ಕೈ ಮುಗಿದು ಸಾಂಸ್ಕೃತಿಕ ನಗರಿಯ ಸಾಹಿತ್ಯ ಅವರಿಗೆ ಲೋಕ ವಿದಾಯ ಹೇಳಿತು.

– ರವಿ ಕುಲಕರ್ಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.