ಧಾರವಾಡ: ಇತ್ತೀಚೆಗಷ್ಟೇ ಸಿಇಟಿ ಪ್ರವೇಶ ಪರೀಕ್ಷೆ ಬರೆದು ವೃತ್ತಿಪರ ಕೋರ್ಸ್ ಸೇರಲು ಅಣಿಯಾಗುತ್ತಿರುವ ವಿದ್ಯಾರ್ಥಿಗಳು ಬುಧವಾರ ಇಲ್ಲಿಯ ಎಸ್‌ಡಿಎಂ ಎಂಜಿನಿಯರಿಂಗ್ ಕಾಲೇಜಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕೇಂದ್ರದಲ್ಲಿ ತಮ್ಮ ಮೂಲದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಿದರು.
ಮೊದಲ ದಿನವಾದ ಬುಧವಾರ 1ರಿಂದ 2000 ರ‌್ಯಾಂಕ್‌ಗಳವರೆಗಿನ ವಿದ್ಯಾರ್ಥಿಗಳು ತಮ್ಮ ಮೂಲದಾಖಲೆಗಳ ಪರಿಶೀಲನೆ ಮಾಡಲು ಅನುವು ಮಾಡಿಕೊಡಲಾಗಿತ್ತು. ಅದರಂತೆ ಈ ಕೇಂದ್ರದ ವ್ಯಾಪ್ತಿಯ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಅಭ್ಯರ್ಥಿಗಳು ಬೆಳಿಗ್ಗೆಯಿಂದಲೇ ತಮ್ಮ ಪೋಷಕರೊಂದಿಗೆ ಬಂದಿದ್ದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ದ ಈ ನೋಡಲ್ ಕೇಂದ್ರದಲ್ಲಿ ಒಂದು ನೋಂದಣಿ ಹಾಗೂ ಆರು ದಾಖಲೆಗಳ ಪರಿಶೀಲನೆಯ ಕೌಂಟರ್‌ಗಳನ್ನು ತೆರೆಯಲಾಗಿತ್ತು. ಪ್ರತಿ ಕೌಂಟರ್‌ಗೆ ಇಬ್ಬರಿಂದ ಮೂವರು ಸಿಬ್ಬಂದಿ ದಾಖಲೆಗಳ ಪರಿಶೀಲನೆ ನಡೆಸಿದರು. ದಾಖಲೆಗಳ ಪರಿಶೀಲನೆ ಪ್ರಕ್ರಿಯೆಯ ಉದ್ಘಾಟನೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ನೆರವೇರಿಸಿದರು.
ದಾಖಲೆ ಪರಿಶೀಲನೆಗೆ ಸಂಬಂಧಿಸಿದ ಅಂಶಗಳನ್ನು `ಪ್ರಜಾವಾಣಿ'ಯೊಂದಿಗೆ ಹಂಚಿಕೊಂಡ ಧಾರವಾಡ ಕೇಂದ್ರದ ಮುಖ್ಯ ನೋಡಲ್ ಅಧಿಕಾರಿ ಎಸ್.ಬಿ.ಗಿರಿಮಠ, ಜೂನ್ 6ರಿಂದ 23ರವರೆಗೆ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಿ, ಎಲ್ಲವೂ ಸರಿ ಇದೆ ಎಂದ ಬಳಿಕ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ತಮಗೆ ಬೇಕಾದ ಕೋರ್ಸ್, ಕಾಲೇಜನ್ನು ಆಯ್ಕೆ ಮಾಡಿಕೊಳ್ಳಲು ಒಂದು ಕೋಡ್‌ವರ್ಡ್ ಇರುವ ಪತ್ರ ನೀಡುತ್ತೇವೆ.
ದಾಖಲೆ ಪರಿಶೀಲನೆ ಪ್ರಕ್ರಿಯೆ ಮುಗಿದ ಕೆಲ ದಿನಗಳಲ್ಲಿ ಆನ್‌ಲೈನ್‌ನಲ್ಲಿ ತಮಗೆ ಬೇಕಾದ ಕಾಲೇಜನ್ನು ಆಯ್ಕೆ ಮಾಡಿಕೊಳ್ಳುವ `ಆಪ್ಷನ್ ಎಂಟ್ರಿ' ಅವಕಾಶ ನೀಡುತ್ತೇವೆ. ಕಳೆದ ಬಾರಿ ಕಾಲೇಜು ಆಯ್ಕೆ ಮಾಡಿಕೊಳ್ಳಲು ಮಿತಿ ಹೇರಲಾಗಿತ್ತು. ಇದೀಗ ಆ ನಿರ್ಬಂಧವನ್ನು ತೆಗೆದು ಹಾಕಿದ್ದು, ಯಾರು ಎಷ್ಟು ಬೇಕಾದರೂ ಆಪ್ಷನ್ ಎಂಟ್ರಿ ಮಾಡಬಹುದು' ಎಂದರು. ಜೂನ್ 6ರಂದು 5000ನೇ ರ‌್ಯಾಂಕ್‌ವರೆಗಿನ ವಿದ್ಯಾರ್ಥಿಗಳ ದಾಖಲೆ ಪರಿಶೀಲನೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.