ADVERTISEMENT

ಸಿದ್ಧಪ್ಪಜ್ಜನ ಬೆಳ್ಳಿರಥದ ಭವ್ಯ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:46 IST
Last Updated 20 ಡಿಸೆಂಬರ್ 2013, 5:46 IST

ಹುಬ್ಬಳ್ಳಿ: ಬಿರು ಬಿಸಿಲಿನ ಹೊಳಪಿನಲ್ಲಿ ಉಣಕಲ್‌ ಕ್ರಾಸ್‌ನಲ್ಲಿ ದಕ್ಷಿಣ ಕನ್ನಡದ ಚಂಡೆ, ಮೈಸೂರಿನ ಬೀಸು ಕಂಸಾಳೆಯ ಸದ್ದು ಜೋರಾಗಿತ್ತು. ಶಿಕಾರಿಪುರದ ಡೊಳ್ಳು, ಆಂಧ್ರದ ನಂದಿಕೋಲು, ಕಲಘಟಗಿ ಹುಡುಗರ ಕೋಲಾಟ, ಸಂಭಾಳ ಇತ್ಯಾದಿ ಇದಕ್ಕೆ ಸುಂದರ ಹಿನ್ನೆಲೆ ಒದಗಿಸಿತ್ತು. ಆನೆ, ಕುದುರೆ, ಒಂಟೆಗಳ ಜೊತೆಯಲ್ಲಿ ನಾದ­ಸ್ವರದ ಮೇಳ ಸೇರಿದಾಗ ಇಡೀ ವಾತಾವರಣ ಮನಕ್ಕೆ ಮುದ ನೀಡಿತು; ಹಿಂದೆ ಬೆಳ್ಳಿ ರಥ ಕಂಗೊಳಿಸಿತು.

ಇದು ಸಿದ್ಧಪ್ಪಜ್ಜನ ಮೂಲ ಮಠಕ್ಕೆ ಸಮರ್ಪಿ­ಸ­ಲಾದ ಬೆಳ್ಳಿ ರಥದ ಮೆರವಣಿಗೆಯ ಸಂದರ್ಭದ ದೃಶ್ಯ. ಬೆಳಿಗ್ಗೆ ಆರಂಭವಾದ ವಿವಿಧ ಧಾರ್ಮಿಕ ಕಾರ್ಯಗಳ ನಂತರ ಮಧ್ಯಾಹ್ನ ನಡೆದ ಮೆರವಣಿಗೆಯಲ್ಲಿ ನೂರಾರು ಮಂದಿ ಭಾಗವಹಿಸಿದ್ದರು. ಪೂರ್ಣಕುಂಭ ಹೊತ್ತ ಹೆಂಗಳೆಯರು ಮೆರವಣಿಗೆಗೆ ಕಳೆ ತಂದರು.

ಸಿದ್ಧಪ್ಪಜ್ಜನ ಗುಡಿಯಿಂದ ಬಂದು ಉಣಕಲ್‌ ಕ್ರಾಸ್‌ನಲ್ಲಿ ಜಮಾಯಿಸಿದ ಕಲಾತಂಡದವರು  ವಾದ್ಯಮೇಳಗಳೊಂದಿಗೆ ಸಾಯಿನಗರ ರಸ್ತೆಯ ಮೂಲಕ ಮೆರವಣಿಗೆ ಆರಂಭಿಸಿದರು. ಊರಿನ ವಿವಿಧ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ­ಯಲ್ಲಿ ಬಂದ ಬೆಳ್ಳಿರಥವನ್ನು ಕಂಡು ಜನರು ಭಕ್ತಿಯಿಂದ ನಮಿಸಿದರು. ಕಟ್ಟಡಗಳ ಮೇಲೆ ನಿಂತು ನೋಡಿದ ಜನರು ಪುಳಕಗೊಂಡರು. ಬೆಳ್ಳಿ ರಥ ಸಮರ್ಪಣೆಯ ಅಂಗವಾಗಿ ಬೆಳಿಗ್ಗೆ ಬಾಳೆ­ಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಹೊಸ­­ಮಠದಿಂದ ಸಿದ್ದಪ್ಪಜ್ಜನ ಗುಡಿ ವರೆಗೆ ನೂರಾರು ಮಂದಿಯ ಜೊತೆ ಪಾದಯಾತ್ರೆ ನಡೆಸಿದರು.

ಮಠಾಧಿಪತಿಗಳಿಗೆ ಸಮಾನ ದೃಷ್ಟಿ ಅಗತ್ಯ: ನಂತರ ಆಶೀರ್ವಚನ ನೀಡಿದ ದಿಂಗಾಲೇಶ್ವರ ಸ್ವಾಮೀಜಿ ‘ಮಠಾಧಿಪತಿಗಳು ಯಾವುದೇ ಜಾತಿ–ಸಮುದಾಯದ ಪರವಾಗಿರಬಾರದು. ಎಲ್ಲರನ್ನು ಸಮಾನವಾಗಿ ಕಾಣುವ ಭಾವವನ್ನು ಅವರು ಮೈಗೂಡಿಸಿಕೊಳ್ಳಬೇಕು’ ಎಂದರು.

‘ಸ್ವಾಮೀಜಿಗಳು ವರ್ಗವೊಂದಕ್ಕೆ ಸೀಮಿತವಾದರೆ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಯುವ ಸಮುದಾಯದ ಮನಸ್ಸಿನಲ್ಲಿ ಕೆಡುಕು ತುಂಬುತ್ತದೆ. ಆದ್ದರಿಂದ ಎಲ್ಲಿಗೂ ಸೀಮಿತವಾಗದೆ ರಚನಾತ್ಮಕ ಕೆಲಸಗಳನ್ನು ಮಾಡಲು ಪ್ರೇರೇಪಣೆ ನೀಡುವ ಕೆಲಸವನ್ನು ಮಠಾಧಿಪತಿಗಳು ಮಾಡಬೇಕು. ಯುವಜನರು ಇಂದು ದುಷ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಅವರ ಪೌರುಷದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಅವರ ಮನಸ್ಸನ್ನು ಒಳ್ಳೆಯತನದ ಕಡೆಗೆ ಹೊರಳಿಸುವ ಅಗತ್ಯವಿದೆ’ ಎಂದು ಸ್ವಾಮೀಜಿ ಹೇಳಿದರು.

‘ತ್ಯಾಗಜೀವನವನ್ನು ಅಳವಡಿಸಿಕೊಳ್ಳಲು ಪ್ರತಿ­ಯೊಬ್ಬರೂ ಮುಂದಾಗಬೇಕು. ತ್ಯಾಗಿಗಳನ್ನು ದೇವರು ಕೂಡ ಮೆಚ್ಚುತ್ತಾನೆ. ಸಮಾಜಕ್ಕೂ ಇದ­ರಿಂದ ಒಳಿತಾಗುತ್ತದೆ’ ಎಂದರು. ಸದ್ಗುರು ಸಿದ್ದಪ್ಪ­ಜ್ಜ­­ನವರ ಸೇವಾ ಸಮಿತಿಯ ಅಧ್ಯಕ್ಷ ಮಲ್ಲಿ­ಕಾ­ರ್ಜುನ ಬಿದರಿಕೊಪ್ಪ ಉಪಸ್ಥಿತರಿ­ದ್ದರು.  ಡಾ. ಎಸ್.ಬಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.