ADVERTISEMENT

ಸ್ತ್ರೀ, ಪುರುಷ ಶೋಷಣೆ ನಿಲ್ಲಲಿ: ಪೇಜಾವರ ಶ್ರೀ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 5:29 IST
Last Updated 20 ಡಿಸೆಂಬರ್ 2013, 5:29 IST

ಧಾರವಾಡ: ‘ಪುರುಷರಿಂದ ಸ್ತ್ರೀಯರ ಶೋಷಣೆ­ಯಾಗಬಾರದು, ಸ್ತ್ರೀಯರಿಂದ ಪುರುಷರ ಶೋಷಣೆಯಾಗಬಾರದು. ಆದರೆ, ಇಂದು ಈ ಎರಡೂ ರೀತಿಯಲ್ಲಿ ಶೋಷಣೆ ನಡೆಯುತ್ತಿವೆ’ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು.

ಇಲ್ಲಿನ ವನವಾಸಿ ರಾಮಮಂದಿರದಲ್ಲಿ ದಾಸ ಸಾಹಿತ್ಯ ಪ್ರತಿಷ್ಠಾನ ಹಾಗೂ ಅಖಿಲ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಪ್ರ ಭೀಮರಥಿ ಸಹಸ್ರಚಂದ್ರದರ್ಶನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜದಲ್ಲಿ ಶೋಷಣೆ ಎಂಬ ಪ್ರಕ್ರಿಯೆ ನಿಲ್ಲಬೇಕು. ಇದು ನಿಂತಾಗ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯ. ಬ್ರಾಹ್ಮಣ ಸಮಾಜ ಸಂಸ್ಕೃತಿಯಿಂದ ಇನ್ನೂ ಬೆಳೆಯಬೇಕು. ಈ ನಿಟ್ಟಿನಲ್ಲಿ 80 ವರ್ಷ ಕಂಡ ದಂಪತಿಗೆ ಈ ಸಹಸ್ರಚಂದ್ರದರ್ಶನ ಎಂಬ ಕಾರ್ಯಕ್ರಮ ನಡೆಸಿದ್ದು, ಸ್ಫೂರ್ತಿಯಾಗಿದೆ.

ನಾವು ಎಂದೂ ಹಿರಿಯರನ್ನು ನಿರ್ಲಕ್ಷಿಸಬಾರದು. ಅವರನ್ನು ನಿರ್ಲಕ್ಷಿಸಿದರೆ ನಮ್ಮ ಸಂಸ್ಕೃತಿಗೆ ಅಪಮಾನವೆಸಗಿದಂತೆ. ಹಿರಿಯರನ್ನು ಗೌರವಿಸಿದರೆ ಇಡೀ ಕುಟುಂಬ ಉತ್ತಮ ರೀತಿಯಲ್ಲಿ ಬೆಳೆಯುತ್ತದೆ. ವೈದಿಕ ಧರ್ಮ ಎಂಬುದು ದ್ವೈತ, ಅದ್ವೈತಗಳಿಗೆ ಬೇರು ಇದ್ದಂತೆ ಮೊದಲು ಬೇರಿನ ಸ್ಥಾನದಲ್ಲಿ ನಿಂತಿರುವ ವೈದಿಕ ಧರ್ಮವನ್ನು ನಾವು ಸಂರಕ್ಷಿಸಬೇಕು’ ಎಂದರು.

ಕೂಡ್ಲಿ ಶೃಂಗೇರಿ ಮಠದ ವಿದ್ಯಾಭಿನವ ಶಂಕರ ಭಾರತೀ ಸ್ವಾಮೀಜಿ, ‘ಮಕ್ಕಳ ಮನಸ್ಸಿನ ಮೇಲೆ ನಾವು ಮೊದಲು ಒಳ್ಳೆಯ ಗುಣಗಳನ್ನು ಬಿತ್ತ­ಬೇಕು. ಅಂದಾಗ ಮಾತ್ರ ಮಕ್ಕಳು ಸಂಸ್ಕಾರ­ಯುತರಾಗಿ ಬೆಳೆಯುತ್ತಾರೆ. ಒಳ್ಳೆಯ ಗುಣಗಳು ಎಂದರೆ ಪೂಜಾ ಸಾಮಾನುಗಳು ಇದ್ದಂತೆ. ವ್ಯಕ್ತಿಗೆ ಎಂದೂ ಮಹತ್ವ ಇರುವುದಿಲ್ಲ. ಆದರೆ, ಆತನಲ್ಲಿರುವ ಒಳ್ಳೆಯ ಗುಣಗಳಿಗೆ ಮಹತ್ವ ಇರುತ್ತದೆ. ಭಗವಂತನ ಅನುಸಂದಾನ ಪಡೆದು­ಕೊಳ್ಳಲು ಈ ಒಳ್ಳೆಯ ಗುಣಗಳ ಸದುಪಯೋಗ ಮಾಡಿಕೊಳ್ಳಬೇಕು. ಬ್ರಾಹ್ಮಣರು ನಾವು ಎಂದು ಎಂಬ ಭಾವನೆ ತಾಳಬೇಕು. ಇದಕ್ಕಿಂತ ಮಿಗಿಲಾಗಿ ಭಾರತೀಯರು ನಾವೆಲ್ಲ ಒಂದೇ ಎನ್ನುವ ಭಾವನೆ ತಾಳಬೇಕು’ ಎಂದು ಅವರು ತಿಳಿಸಿದರು,

ಅಖಿಲ ಕರ್ನಾಟಕ ಭಾರತ ಬ್ರಾಹ್ಮಣ ಸಂಘಗಳ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯ ದೀಪಕ ಚಿಂಚೋರೆ, ಹನುಮಂತ ಡಂಬಳ, ಡಾ.­ಉದಯ ದೇಸಾಯಿ, ಕೃಷ್ಣಮೂರ್ತಿ ಪುರಾಣಿಕ, ವಿಜಯ ನಾಡಜೋಶಿ, ಆನಂದ ಕಮಲಾಪುರ ಮತ್ತಿತರರು ಇದ್ದರು.

ಇದಕ್ಕೂ ಮುನ್ನ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ವಿದ್ಯಾಭಿನವ ಶಂಕರ ಭಾರತಿ ಸ್ವಾಮೀಜಿ­ಗಳ ತುಲಾಭಾರ ನಡೆಯಿತು. ಚಿದಂಬರ ಹಂದಿಗೋಳ ಪ್ರಾರ್ಥಿಸಿದರು. ಎನ್‌.ಆರ್‌.­ಕುಲಕರ್ಣಿ ಸ್ವಾಗತಿಸಿ, ನಿರೂಪಿಸಿದರು. ಎಚ್‌.ಎನ್‌.ಕಾರಕೂನ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT