ADVERTISEMENT

ಸ್ವಾಮಿಗಳ ಮುಖವಾಡ ಕಳಚಿದ ಕಟ್ಟೀಮನಿ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 5:50 IST
Last Updated 8 ಅಕ್ಟೋಬರ್ 2012, 5:50 IST

ಧಾರವಾಡ: `ಸಾಹಿತಿ ಬಸವರಾಜ ಕಟ್ಟೀಮನಿ ಅವರು ಸ್ವಾಮೀಜಿಗಳ, ರಾಜಕಾರಣಿಗಳನ್ನು ಮುಖವಾಡವನ್ನು ಕಳಚಿದ್ದರು~ ಎಂದು ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಎಂ.ಕಲಬುರ್ಗಿ ಅಭಿಪ್ರಾಯಪಟ್ಟರು.

ಬಸವರಾಜ ಕಟ್ಟೀಮನಿ ವಿಚಾರ ವೇದಿಕೆ ಹಾಗೂ ಬಸವರಾಜ ಕಟ್ಟೀಮನಿ ಪ್ರತಿಷ್ಠಾನದ ಸಹಯೋಗದಲ್ಲಿ ಭಾನುವಾರ ನಗರದಲ್ಲಿ ಏರ್ಪಡಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿದ ಅವರು, `ಶ್ರೀರಂಗರು ಬ್ರಾಹ್ಮಣ ಸಮಾಜದ ಮುಖವಾಡವನ್ನು ಕಳಚಿದರೆ, ಕಟ್ಟೀಮನಿ ಅವರು ಲಿಂಗಾಯತ ಸಮಾಜದ ಮುಖವಾಡ ಬಯಲುಗೊಳಿಸಿದರು. ದಾಸೋಹದ ಹೆಸರಿನಲ್ಲಿ ನಡೆಸುತ್ತಿದ್ದ ವಿದ್ಯಾರ್ಥಿಗಳ ಶೋಷಣೆಯ ಬಗ್ಗೆಯೂ ತಮ್ಮ ಜರತಾರಿ ಜಗದ್ಗುರು ಕೃತಿಯಲ್ಲಿ ದಾಖಲಿಸ್ದ್ದಿದರು~ ಎಂದರು.

`ಪ್ರತಿಷ್ಠಾನವು ಸ್ಥಾಪನೆಯಾದ ಕೆಲವೇ ತಿಂಗಳಲ್ಲಿ ಹಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಪತ್ರಿಕೋದ್ಯಮ ಕ್ಷೇತ್ರದಲ್ಲಿ ದುಡಿದಿದ್ದರಿಂದ ಇತ್ತೀಚೆಗಷ್ಟೇ ಇಬ್ಬರು ಪತ್ರಕರ್ತರಿಗೆ ಕಟ್ಟೀಮನಿ ಹೆಸರಿನಲ್ಲಿ ತಲಾ 50 ಸಾವಿರ ನಗದು ಬಹುಮಾನ ಒಳಗೊಂಡ ಪ್ರಶಸ್ತಿ ನೀಡಲಾಗಿದೆ.

`ಜ್ವಾಲಾಮುಖಿಯ  ಮೇಲೆ~ ಕಾದಂಬರಿಯಿಂದಲೇ ಅವರಿಗೆ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ದೊರೆತಿದ್ದರಿಂದ ಆ ಕೃತಿಯನ್ನು ರಷ್ಯನ್‌ಗೆ ಭಾಷಾಂತರ ಮಾಡಲಾಗುತ್ತಿದೆ. ಮಾಡಿ ಮಡಿದವರು ಕೃತಿಯನ್ನು ಇಂಗ್ಲಿಷ್, ಮರಾಠಿಗೆ ಅನುವಾದಿಸಲಾಗಿದೆ. ಅವರ ನೆನಪಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕಾಲೇಜುಗಳಿಗೆ ಎರಡು ಸಾವಿರ ರೂಪಾಯಿ, ಸಂಸ್ಥೆಗಳಿಗೆ ರೂ 5 ಸಾವಿರ ಸಹಾಯಧನ ನೀಡಲಾಗುವುದು~ ಎಂದು ಡಾ.ಕಲಬುರ್ಗಿ ಹೇಳಿದರು.

ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ.ಶ್ಯಾಮಸುಂದರ ಬಿದರಕುಂದಿ, ಸಾಹಿತಿ ಮಾಲತಿ ಪಟ್ಟಣಶೆಟ್ಟಿ ಹಾಗೂ ಪ್ರಾಧ್ಯಾಪಕ ಡಾ.ಎಂ.ಡಿ.ಒಕ್ಕುಂದ ಉಪನ್ಯಾಸ ನೀಡಿದರು.
ಗಾಯಕಿ ಜ್ಯೋತಿ ಕೂಡ್ಲಿಗಿ ಅವರು ಕಾರ್ಯಕ್ರಮದಲ್ಲಿ ಗೀತೆಗಳನ್ನು ಪ್ರಸ್ತುತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.