ADVERTISEMENT

ಹಾಲಿ ನಿವಾಸಿಗಳಿಗೆ ಮನೆ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2017, 6:45 IST
Last Updated 30 ಅಕ್ಟೋಬರ್ 2017, 6:45 IST

ಹುಬ್ಬಳ್ಳಿ: ಅಮರಗೋಳ ಆಶ್ರಯ ಕಾಲೊನಿಯ ಹಾಲಿ ನಿವಾಸಿಗಳಿಗೆ ಮನೆಗಳನ್ನು ಒದಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಮರಗೋಳ ಆಶ್ರಯ ಕಾಲೊನಿ ನಿವಾಸಿಗಳ ಹೋರಾಟ ಸಮಿತಿ ಸದಸ್ಯರು ಭಾನುವಾರ ಆಶ್ರಯ ಸಮಿತಿ ಅಧ್ಯಕ್ಷರಾದ ಅರವಿಂದ ಬೆಲ್ಲದ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

‘ಆಶ್ರಯ ಕಾಲೊನಿಯಲ್ಲಿ ಹಂಚಿಕೆಯಾದ ಮನೆಗಳ ಪೈಕಿ ಶೇ 90ರಷ್ಟನ್ನು ಮೂಲ ಹಕ್ಕುದಾರರರು ಕಳೆದ 20 ವರ್ಷಗಳ ಹಿಂದೆಯೇ ಬೇರೆಯವರಿಗೆ ಮಾರಾಟ ಮಾಡಿದ್ದಾರೆ ಹಾಗೂ ಬಾಡಿಗೆ ನೀಡಿದ್ದಾರೆ. ಇತ್ತೀಚೆಗೆ ಪಾಲಿಕೆ ಅಧಿಕಾರಿಗಳು ಪರಿಶೀಲನೆಗೆ ತೆರಳಿದ್ದಾಗ ವಾಸ್ತವ ಸ್ಥಿತಿ ಅರಿವಿಗೆ ಬಂದಿದೆ. ಇದರಿಂದ ಮೂಲ ಫಲಾನುಭವಿಗಳು ಹಾಲಿ ವಾಸವಿರುವವರನ್ನು ಮನೆ ಖಾಲಿ ಮಾಡುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅವರನ್ನು ರಾತ್ರೋರಾತ್ರಿ ಒಕ್ಕಲೆಬ್ಬಿಸಿದ್ದಾರೆ’ ಎಂದು ಸದಸ್ಯರು ಶಾಸಕರ ಎದುರು ಅಳಲು ತೋಡಿಕೊಂಡರು.

‘ಪ್ರಸ್ತುತ ಮನೆಗಳಲ್ಲಿ ವಾಸ ಮಾಡುತ್ತಿರುವವರು ಅತಂತ್ರ ಸ್ಥಿತಿಯಲ್ಲಿ ದಿನ ದೂಡುತ್ತಿದ್ದಾರೆ. 825 ನಿವೇಶನಗಳ ಪೈಕಿ ಎಷ್ಟೋ ನಿವೇಶನಗಳು ಖಾಲಿ ಉಳಿದಿದ್ದು, ಆ ಮನೆಗಳನ್ನು ಅತ್ಯಂತ ಅವಶ್ಯ ಇರುವ ನಿವೇಶನರಹಿತ ಕುಟುಂಬಗಳಿಗೆ ವಿತರಿಸಬೇಕು. ಮೂಲ ನಿವಾಸಿಗಳಿಂದ ಬರುತ್ತಿರುವ ಬೆದರಿಕೆಗೆ ಕಡಿವಾಣ ಹಾಕಿ, ಹಾಲಿ ನಿವಾಸಿಗಳಿಗೆ ಭದ್ರತೆ ಒದಗಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

ಮನವಿ ಸ್ವೀಕರಿಸಿದ ಅರವಿಂದ ಬೆಲ್ಲದ ಮಾತನಾಡಿ ‘ಅಮರಗೋಳದಲ್ಲಿ ಆಶ್ರಯ ಕಾಲೊನಿ ಇರುವುದು ಬಡವರಿಗಾಗಿಯೇ ಹೊರತು ಬಾಡಿಗೆ ಕೊಡಲು ಅಲ್ಲ. ಅಂತಹ ಪ್ರಕರಣಗಳನ್ನು ಪತ್ತೆ ಮಾಡುವುದಕ್ಕಾಗಿಯೇ ಪಾಲಿಕೆಯಿಂದ ಸರ್ವೇ ಮಾಡಿಸಲಾಗಿದೆ. ಸದ್ಯದಲ್ಲೇ ನೈಜ ಬಡವರನ್ನು ಗುರುತಿಸಿ ನಿವೇಶನಗಳನ್ನು ಒದಗಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ. ಮೂಲನಿವಾಸಿಗಳಿಂದ ಬೆದರಿಕೆಗಳು ಬಂದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಬೇಕು’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಮಲ್ಲಿಕಾರ್ಜುನ ಹೊರಕೇರಿ ‘ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದು ನಿಮ್ಮ ಬೆಂಬಲಕ್ಕೆ ಇರುತ್ತೇನೆ’ ಎಂದು ಭರವಸೆ ನೀಡಿದರು. ಕರ್ನಾಟಕ ರಾಜ್ಯ ನಿವೇಶನ ರಹಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ನಾಗರಾಜ ಗುರಿಕಾರ, ಎಸ್‌ಯುಸಿಐ ಸಮಿತಿ ಕಾರ್ಯದರ್ಶಿ ಗಂಗಾಧರ ಬಡಿಗೇರ, ನಿವೇಶನ ರಹಿತರ ಹೋರಾಟ ಸಮಿತಿಯ ಸಹ ಸಂಚಾಲಕರಾದ ರಾಜು ಹಿರೇಒಡೆಯರ್, ಅಮರಗೋಳ ಆಶ್ರಯ ಕಾಲೊನಿ ನಿವಾಸಿಗಳ ಹೋರಾಟ ಸಮಿತಿಯ ಯಲ್ಲಪ್ಪ ನಾಗಣ್ಣವರ, ರೇಣುಕಾ ಭೋಸಲೆ, ಕಲ್ಲಮ್ಮ ಗಿರಿಜಾಯಿ, ಮಂಜುನಾಥ ಕರಮಡಿ, ಶಬಾನಾಬಾನು ರಹೀಂಖಾನವರ, ಶಾಂತಮ್ಮ ಮೆಣಸಿನಕಾಯಿ, ಮಹಾದೇವಿ ನಿಯೋಗದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.