ADVERTISEMENT

ಹಿಂದೂಗಳ ಕನಸು ಭಗ್ನ ಮಾಡಿದ ಬಿಜೆಪಿ: ಮುತಾಲಿಕ್

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2012, 6:00 IST
Last Updated 22 ಅಕ್ಟೋಬರ್ 2012, 6:00 IST

ಹುಬ್ಬಳ್ಳಿ: `ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಹಿಂದೂಶಕ್ತಿಯನ್ನು ಒಗ್ಗೂಡಿಸುವಲ್ಲಿ ಸಂಪೂರ್ಣ ವಿಫಲವಾಗಿದ್ದು, ಹಿಂದೂಗಳ ಕನಸನ್ನು ಭಗ್ನಗೊಳಿಸಿದೆ~ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಘಟಕದ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆರೋಪಿಸಿದರು.

ಹುಬ್ಬಳ್ಳಿಯ ಮೂರುಸಾವಿರ ಮಠದ ಆವರಣದಲ್ಲಿ ಭಾನುವಾರ ಶ್ರೀರಾಮ ಸೇನೆಯ ಹುಬ್ಬಳ್ಳಿ `ದುರ್ಗಾ ಸೇನಾ~ ಮಹಿಳಾ ಘಟಕ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

`ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ 50 ವರ್ಷಗಳ ಕಾಂಗ್ರೆಸ್ ದುರಾಡಳಿತವನ್ನು ಕೊನೆಗಾಣಿಸಿ ಹಿಂದೂಗಳ ರಕ್ಷಣೆಗೆ ನಿಲ್ಲುತ್ತದೆ ಎಂದು ನಂಬಿದ್ದೆವು. ಹಿಂದೂಪರ ಮಾತುಗಳನ್ನಾಡುತ್ತಾ ಗದ್ದುಗೆ ಏರಿದ ಬಿಜೆಪಿಯಿಂದ ಹಿಂದೂಗಳಿಗೆ ಭ್ರಮನಿರಸನ ಮಾಡಿದೆ~ ಎಂದರು.

`ದತ್ತಪೀಠ ನಿರ್ಮಿಸುವ ಮಾತು ಕೊಟ್ಟ ಬಿಜೆಪಿ ಸರ್ಕಾರ ದುರಸ್ತಿ ಕಾರ್ಯವನ್ನೂ ಮಾಡದೆ ಮೋಸ ಮಾಡಿದೆ. ದತ್ತಪೀಠಕ್ಕೆ ಹೋರಾಟ ಮಾಡಿದ ಸುಮಾರು 3,500 ಹಿಂದೂಗಳನ್ನು ಜೈಲಿಗೆ ಕಳಿಸಿದೆ. ಗೋಹತ್ಯೆ ತಡೆಯುವುದಾಗಿ ಅಧಿಕಾರಕ್ಕೆ ಬಂದ ಬಿಜೆಪಿ, ಕಸಾಯಿಖಾನೆಗಳನ್ನು ಕಾಂಗ್ರೆಸ್‌ಗಿಂತಲೂ ದ್ವಿಗುಣಗೊಳಿಸಿ ದ್ರೋಹ ಬಗೆದಿದೆ~ ಎಂದರು.

`ವಿಧಾನ ಸಭೆಯಲ್ಲಿ ಅಬಕಾರಿ ಮಂತ್ರಿ, ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ರೂ 3,000 ಕೋಟಿ ಇದ್ದ ವಾರ್ಷಿಕ ಅಬಕಾರಿ ಆದಾಯವನ್ನು, ರೂ 9,000 ಕೋಟಿಗೆ ಏರಿಸಿರುವುದಾಗಿ ಹೇಳಿಕೊಳ್ಳುವುದನ್ನು ಕೇಳಿದರೆ ನೋವಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕುಡುಕರ ಸಂಖ್ಯೆ ಹೆಚ್ಚಿದೆ. ಈ ವಂಚಕ ಸರ್ಕಾರದ ವಿರುದ್ಧ ಪ್ರತಿ ಮನೆಯಲ್ಲಿ ಮಾತೆಯರು ಹೋರಾಟ ನಡೆಸಬೇಕು. ಅದಕ್ಕಾಗಿ `ದುರ್ಗಾ ಸೇನಾ~ ಸಂಘಟನೆ ಸ್ಥಾಪಿಸಲಾಗಿದೆ~ ಎಂದು ಹೇಳಿದರು.

ಶ್ರೀರಾಮ ಸೇನಾ ಮಾಸಿಕ ಬಿಡುಗಡೆ:    `ಮತಾಂತರ, ಗೋಹತ್ಯೆ, ವರದಕ್ಷಿಣೆ ಪಿಡುಗು, ಅತ್ಯಾಚಾರ ಪ್ರಕರಣಗಳ ವಿರುದ್ಧ ಶ್ರೀರಾಮ ಸೇನೆಯ ಮಹಿಳಾ ಘಟಕ ದುರ್ಗಾ ಸೇನಾ ಹೋರಾಟ ನಡೆಸಲಿದೆ~ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

`ಮಾತೃಶಕ್ತಿ ದೇಶದಲ್ಲಿ ಜಾಗೃತಗೊಳ್ಳದ ಹೊರತು ಮುಂದಿನ ಪೀಳಿಗೆಯಲ್ಲಿ ದೇಶಭಕ್ತಿ ಮೂಡಲು ಸಾಧ್ಯವಿಲ್ಲ. ಕತ್ತಿ ಹಿಡಿದು ಅನ್ಯಾಯದ ವಿರುದ್ಧ ಹೋರಾಡುವಂತೆ ಜೀಜಾಬಾಯಿ ತನ್ನ ಮಗ ಶಿವಾಜಿಗೆ ಬೋಧಿಸಿದಳು. ಇಂತಹ ತಾಯಿ ಮತ್ತೆ ಹುಟ್ಟಿ ಬರಬೇಕು. ತಮ್ಮ ಮಕ್ಕಳಿಗೆ ಹೋರಾಟದ ಕಿಚ್ಚು ಹೊತ್ತಿಸಬೇಕು. ನೂರಾರು ಶಿವಾಜಿಗಳು ಬರಬೇಕು. ಮಾತೃಶಕ್ತಿಯನ್ನು ಜಾಗೃತಿಗೊಳಿಸುವ ಉದ್ದೇಶದಿಂದ ದುರ್ಗಾ ಸೇನೆ ಬರುತ್ತಿದ್ದು ನಮ್ಮ ಸಹೋದರಿಯರು ಅನ್ಯಾಯದ ವಿರುದ್ಧ ದುರ್ಗೆಯಾಗಿ ತ್ರಿಶೂಲ ಬೀಸಲಿದ್ದಾರೆ~ ಎಂದರು.

`ದೇಶದಲ್ಲಿ ಮತಾಂತರ ಹೆಚ್ಚುತ್ತಿದೆ. ಜಾತ್ಯತೀತ ರಾಷ್ಟ್ರ ಎಂಬ ಹಿನ್ನೆಲೆಯಲ್ಲಿ ಭಾರತ ನೀಡಿರುವ ಔದಾರ್ಯವನ್ನು ಧರ್ಮ ಪ್ರಚಾರಕರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಿಂದೂ ದೇವತೆಗಳ ವಿರುದ್ಧ ವಂಗ್ಯವಾಡುತ್ತಿದ್ದಾರೆ. ಅಶ್ಲೀಲವಾಗಿ ಚಿತ್ರಿಸುತ್ತಿದ್ದಾರೆ. ಭಾರತ ಸಂವಿಧಾನ ಗೋವನ್ನು ಕೊಲ್ಲುವ ಅಧಿಕಾರವನ್ನು ಯಾರಿಗೂ ಕೊಟ್ಟಲ್ಲ. ಆದರೆ ನಮ್ಮ ರಾಜಕಾರಣಿಗಳು ಸಂವಿಧಾನದ ನೀತಿಗಳಿಗೆ ನೆಲೆ ಕೊಡದೆ ಗಾಳಿಗೆ ತೂರಿದ್ದಾರೆ~ ಹೇಳಿದರು.

ನಾಗನೂರು ಬಸವ ಮಠದ ಗೀತಾ ಬಸವಗುರು ಮಾತಾಜೀ `ಎಲ್ಲೋ ದೂರದಲ್ಲಿ ಇದ್ದ ಭಯೋತ್ಪಾದನೆ ಇಂದು ಹುಬ್ಬಳ್ಳಿಗೆ ಬಂದಿದೆ. ನಮ್ಮ ಮನೆಗಳ ಅಕ್ಕ-ಪಕ್ಕದಲ್ಲೇ ದುಷ್ಟಶಕ್ತಿಗಳಿವೆ. ಈ ಶಕ್ತಿಗಳ ಹುಟ್ಟಡಗಿಸುವ ಕೆಲಸವನ್ನು ಸಂಘಟಿತರಾಗಿ ನಡೆಸಬೇಕು. ಹಿಂದೂ ಸಂಸ್ಕೃತಿಯ ಹಿರಿಮೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವನ್ನು ಶಾಲಾ-ಕಾಲೇಜುಗಳಿಂದ ಆರಂಭಿಸಬೇಕು. ನಮ್ಮ ಮಕ್ಕಳ ಹೆಜ್ಜೆಗಳನ್ನು ಸರಿಪಡಿಸುವ ಕೆಲಸವನ್ನು ನಾವು ಮಾಡಬೇಕು~ ಎಂದರು. ಶ್ರೀರಾಮಸೇನೆ ವಕ್ತಾರರಾದ ಸ್ಫೂರ್ತಿ ಬೆನಕನವಾಡಿ ಮಾತನಾಡಿದರು.

ಇದೇ ಸಂದರ್ಭದಲ್ಲಿ `ಶ್ರೀ ರಾಮ ಸೇನಾ~ ಮಾಸಿಕ ಬಿಡುಗಡೆ ಮಾಡಲಾಯಿತು. ಹುಬ್ಬಳ್ಳಿಯ 49 ಕಾಲೊನಿಗಳಲ್ಲಿ ನಡೆದ ರಂಗೋಲಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಬಸವ ಪ್ರಕಾಶ ಸ್ವಾಮೀಜಿ, ಶ್ರೀರಾಮ ಸೇನಾ ರಾಜ್ಯ ಕಾರ್ಯದರ್ಶಿ ಕುಮಾರ ಹಕಾರಿ, ನಗರ ಘಟಕದ ಅಧ್ಯಕ್ಷ ಭೀಮಶಿ ಬೆಂಗೇರಿ, ಧಾರವಾಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಗಾಡಗೋಳಿ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.