ADVERTISEMENT

ಹುಬ್ಬಳ್ಳಿಯಲ್ಲಿ ರಂಗಪಂಚಮಿ ಇಂದು: ಬಿಗಿಭದ್ರತೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2012, 10:15 IST
Last Updated 12 ಮಾರ್ಚ್ 2012, 10:15 IST

ಹುಬ್ಬಳ್ಳಿ: ಬಣ್ಣಗಳ ಓಕುಳಿಯ ರಂಗಪಂಚಮಿಗೆ ಹುಬ್ಬಳ್ಳಿ ಸಿಂಗಾರಗೊಂಡಿದೆ. ಕಾಮನನ್ನು ದಹಿಸುವ, ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವ ಹಬ್ಬಕ್ಕೆ ಸೋಮವಾರ ಸಂಭ್ರಮದ ತೆರೆ ಬೀಳಲಿದೆ.

ಹಬ್ಬದ ಸಂಭ್ರಮಕ್ಕೆ ಕುಂದುಂಟಾಗದಂತೆ, ಸಮಾಜದ ಶಾಂತಿಗೆ ಭಂಗ ಬರದಂತೆ ಪೊಲೀಸ್ ಇಲಾಖೆ ಸಹ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದು, ರಂಗಪಂಚಮಿ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿದೆ. ಹೋಳಿ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದ್ದು, ಹಳೇಹುಬ್ಬಳ್ಳಿಯ ಕೆಲವೆಡೆ ನಿಷೇದಾಜ್ಞೆ ಕೂಡ ಜಾರಿಯಾಗಿದೆ.

ಹೋಳಿ ಸಂದರ್ಭ ಗಲಾಟೆ ತಪ್ಪಿಸುವ ಸಲುವಾಗಿ ಒಂದು ಓಣಿಯ ಜನರು ಮತ್ತೊಂದು ಓಣಿಯಲ್ಲಿ ಬಣ್ಣ ಎರಚುವುದಕ್ಕೆ ಪೊಲೀಸರು ನಿರ್ಬಂಧ ಹೇರಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಸಹ ಇಡಲಾಗಿದೆ. ಉದ್ಯೋಗಿಗಳು, ಅಪರಿಚಿತರಿಗೆ ಬಣ್ಣ ಹಾಕದಂತೆ ಪೊಲೀಸರು ಮನವಿ ಮಾಡಿದ್ದಾರೆ.

ಚನ್ನಪೇಟೆ, ವಿಠಲಪೇಟೆ, ನಾರಾಯಣ ಸೋಫಾ, ಕಸಬಾಪೇಟೆ, ದಾಜಿಬಾನಪೇಟೆ ಮೊದಲಾದ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಲಾಗಿದೆ.

ನಿಷೇಧಾಜ್ಞೆ: ರಂಗಪಂಚಮಿ ಹಿನ್ನೆಲೆಯಲ್ಲಿ ಸೋಮವಾರ ನಗರದ ವಿವಿಧೆಡೆ ಬೆಳಿಗ್ಗೆ 6ರಿಂದ ರಾತ್ರಿ 12ರ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಕಮರಿಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾಳಮ್ಮನ ಅಗಸಿಯಿಂದ ಡಾಕಪ್ಪ ವೃತ್ತದವರೆಗೆ, ಅಲ್ಲಿಂದ ಕೌಲಪೇಟೆ ಮಸೀದಿವರೆಗೆ, ಕೌಲಪೇಟೆಯಿಂದ ಕೆಇಬಿ ಕಚೇರಿ ಕ್ರಾಸ್‌ವರೆಗೆ ಹಾಗೂ ಕಸಬಾಪೇಟೆ ಠಾಣೆ ವ್ಯಾಪ್ತಿಯಲ್ಲಿ ಪೊಲೀಸ್ ಠಾಣೆ ಮುಖ್ಯರಸ್ತೆಯಿಂದ ಪಡದಯ್ಯನ ಹಕ್ಕಲ ಕ್ರಾಸ್ ಹಾಗೂ ಅಹ್ಮದ್‌ನಗರ ಮಸೀದಿವರೆಗೆ ಹಾಗೂ ಹುಬ್ಬಳ್ಳಿ ಶಹರ ಠಾಣೆ ವ್ಯಾಪ್ತಿಯಲ್ಲಿ ತುಳಜಾಭವಾನಿ ವೃತ್ತದಿಂದ ಪೆಂಡಾರಗಲ್ಲಿ ಸಣ್ಣ ಮಸೀದಿವರೆಗೆ ಹಾಗೂ ತುಳಜಾಭವಾನಿ ಕ್ರಾಸ್‌ನಿಂದ ಪೆಂಡಾರಗಲ್ಲಿ ದೊಡ್ಡ ಮಸೀದಿವರೆಗಿನ ಮುಖ್ಯರಸ್ತೆಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ.

ಮದ್ಯ ಮಾರಾಟ ನಿಷೇಧ:
ಹೋಳಿ ಮಾರಾಟದ ಹಿನ್ನೆಲೆಯಲ್ಲಿ ನಗರದಲ್ಲಿನ ಮದ್ಯ ಮಾರಾಟದ ಅಂಗಡಿಗಳನ್ನು ಸೋಮವಾರ ಬಂದ್ ಮಾಡುವಂತೆ ಪೊಲೀಸರು ಸೂಚಿಸಿದ್ದು, ನಗರದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.