ಹುಬ್ಬಳ್ಳಿ: ರಾಜನಗರದ ಕೆಎಸ್‌ಸಿಎಯ ಹಸಿರು ಅಂಗಣ, ದೇಶಪಾಂಡೆ ನಗರದ ಕರ್ನಾಟಕ ಜಿಮ್ಖಾನಾ ಮೈದಾನದ ಟರ್ಫ್ ಪಿಚ್ ಮುಂತಾದ ಸೌಲಭ್ಯಗಳನ್ನು ಹೊಂದಿರುವ ಹುಬ್ಬಳ್ಳಿ ಕ್ರಿಕೆಟ್ ಕ್ಷೇತ್ರಕ್ಕೆ ಈಗ ಮತ್ತೊಂದು ಗರಿಮೆಯ ಸೇರ್ಪಡೆಯಾಗಿದೆ. ವಿಶ್ವೇಶ್ವರನಗರದ ಹುಬ್ಬಳ್ಳಿ ಕ್ರಿಕೆಟ್ ಅಕಾಡೆಮಿಯಲ್ಲಿ (ಎಚ್‌ಸಿಎ) ಹೊನಲು ಬೆಳಕಿನ ಸೌಲಭ್ಯ ಬಂದಿದೆ.
ಹದಿನೈದು ವರ್ಷಗಳಿಂದ ಕ್ರಿಕೆಟ್ ತರಬೇತಿಯಲ್ಲಿ ತೊಡಗಿಕೊಂಡಿರುವ ಎಚ್‌ಸಿಎ ಆವರಣದ ನೆಟ್ಸ್‌ನಲ್ಲಿ ಎಲ್‌ಇಡಿ ಮತ್ತು ಹ್ಯಾಲೋಜೆನ್ ಬಲ್ಬ್‌ಗಳು ಪ್ರಖರ ಬೆಳಕು ಬೀರಲು ತೊಡಗಿದ್ದು ಈ ಸೌಲಭ್ಯದ ಅಧಿಕೃತ ಉದ್ಘಾಟನೆ ಇದೇ 21ರಂದು ಸಂಜೆ ಏಳು ಗಂಟೆಗೆ ನಡೆಯಲಿದೆ.
ಮೂರು ಟರ್ಫ್ ಪಿಚ್, ಎರಡು ಕಾಂಕ್ರೀಟ್ ಮತ್ತು ಒಂದು ಮ್ಯಾಟಿಂಗ್ ಪಿಚ್ ಇಲ್ಲಿದೆ. ಇವುಗಳ ಮೇಲೆ ಒಟ್ಟು ಹದಿನೆಂಟು ಎಲ್‌ಇಡಿ ಬಲ್ಬ್‌ಗಳನ್ನು ಅಳವಡಿಸಲಾಗಿದೆ. ಬೌಲಿಂಗ್ ಮಾಡುವ ಭಾಗದಲ್ಲಿ ಆರು ಹ್ಯಾಲೋಜೆನ್ ಬಲ್ಬ್‌ಗಳು ಬೆಳಕು ಬೀರುತ್ತವೆ. ಬೌಲಿಂಗ್ ಯಂತ್ರ, ಯಾಂತ್ರೀಕೃತ ರೋಲರ್ ಮತ್ತು ವಿಡಿಯೋ ಅನಾಲಿಸಿಸ್ ಸೌಲಭ್ಯ ಇರುವ ಕ್ಲಬ್‌ನಲ್ಲಿ ಹೊನಲು ಬೆಳಕು ಕೂಡ ಬಂದಿರುವುದು ರಾತ್ರಿಯೂ ಅಭ್ಯಾಸ ಮಾಡಲು ನೆರವಾಗಲಿದೆ. ಉತ್ತರ ಕರ್ನಾಟಕದ ಮೊದಲ ಹೊನಲು ಬೆಳಕಿನ ಸೌಲಭ್ಯ ಎಂಬ ಖ್ಯಾತಿಯೂ ಇಲ್ಲಿಗೆ ಬಂದಂತಾಗಿದೆ.
ಎಚ್‌ಸಿಎ ಆವರಣದಲ್ಲಿ ಹೆಚ್ಚು ಜಾಗ ಇಲ್ಲ. ಕೇವಲ ಹತ್ತು ಗುಂಟೆ ಜಾಗದಲ್ಲಿ ಪಿಚ್‌ಗಳು, ಕಚೇರಿ ಇತ್ಯಾದಿ ಇದೆ. ಹೀಗಾಗಿ ಹೆಚ್ಚು ಮಂದಿಗೆ ಅಭ್ಯಾಸ ಮಾಡಲು ಸಾಧ್ಯವಾಗುತ್ತಿಲ್ಲ. ಬೇಸಿಗೆ ಶಿಬಿರ ಸದ್ಯದಲ್ಲೇ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಹಗಲು ತರಬೇತಿ ನೀಡಿ ಕ್ಲಬ್ ಸದಸ್ಯರು ರಾತ್ರಿ ಕೂಡ ಅಭ್ಯಾಸ ಮಾಡಬಹುದು ಎಂಬ ಉದ್ದೇಶದಿಂದ ಈ ಸೌಲಭ್ಯ ಕಲ್ಪಿಸಲಾಗಿದೆ. ಭವಿಷ್ಯದಲ್ಲಿ ಹುಬ್ಬಳ್ಳಿ ಕ್ರಿಕೆಟ್ ಬೆಳವಣಿಗೆಗೆ ಇದು ಸಹಕಾರಿಯಾಗಲಿದೆ ಎಂಬುದು ಕ್ಲಬ್ ಪದಾಧಿಕಾರಿಗಳ ಅನಿಸಿಕೆ.
ಕ್ಲಬ್‌ನ ಸಂಸ್ಥಾಪಕರಲ್ಲಿ ಒಬ್ಬರಾಗಿರುವ ವಿಜಯ ಕಾಮತ್ ಅವರ ಕನಸಿನ ಕೂಸಾದ ಹೊನಲು ಬೆಳಕಿನ ಸೌಲಭ್ಯವನ್ನು ಕಾರ್ಯರೂಪಕ್ಕೆ ತಂದವರು ಹೆಸ್ಕಾಂ ಉದ್ಯೋಗಿ ಮಂಜುನಾಥ ದೊಡಮನಿ. ‘ಪಿಚ್ ಮೇಲೆ ಅಳವಡಿಸಿರುವ ಬಲ್ಬ್‌ಗಳು ಹಗಲು ಬೆಳಕಿನಷ್ಟೇ ಪರಿಣಾಮ ಬೀರಬಲ್ಲವು. ಅಭ್ಯಾಸ ನಡೆಸುವ ಪಿಚ್ ಮೇಲಿನ ಬಲ್ಬ್‌ಗಳನ್ನು ಮಾತ್ರ ಉರಿಸುವ ಸೌಲಭ್ಯ ಇದೆ. ಇತರ ಬಲ್ಬ್‌ಗಳನ್ನು ಬಳಸದೇ ಇರುವುದರಿಂದ ವಿದ್ಯುತ್ ಪೋಲಾಗುವುದನ್ನು ತಪ್ಪಿಸಬಹುದಾಗಿದೆ’ ಎನ್ನುತ್ತಾರೆ ಮಂಜುನಾಥ.
‘ಇದು ` 1 ಲಕ್ಷದ ಯೋಜನೆ. ಬೆಂಗಳೂರು ಬಿಟ್ಟರೆ ಬೇರೆಲ್ಲೂ ಇಂಥ ಸೌಲಭ್ಯ ಇಲ್ಲ. ಹುಡುಗರಿಗೆ ಇದನ್ನು ಅರ್ಪಿಸುತ್ತಿದ್ದೇವೆ, ಬಳಸಿಕೊಂಡು ಬೆಳೆಯುವುದು. ಹುಬ್ಬಳ್ಳಿ ಕ್ರಿಕೆಟ್ ಬೆಳೆಸುವುದು ಅವರಿಗೆ ಬಿಟ್ಟ ವಿಚಾರ’ ಎಂದು ವಿಜಯ ಕಾಮತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.