ADVERTISEMENT

ಹುಬ್ಬಳ್ಳಿ: 27 ರಿಂದ ಹಿಂದೂಶಕ್ತಿ ಸಂಗಮ

​ಪ್ರಜಾವಾಣಿ ವಾರ್ತೆ
Published 7 ಜನವರಿ 2012, 9:25 IST
Last Updated 7 ಜನವರಿ 2012, 9:25 IST

ಬೀದರ್: ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರು ಯಾರು ಎನ್ನುವುದು ತನಿಖೆಯಿಂದಲೇ ಬಯಲಾಗಲಿದೆ ಎಂದು ಆರ್‌ಎಸ್‌ಎಸ್  ಗುಲ್ಬರ್ಗ ವಿಭಾಗೀಯ ಪ್ರಚಾರ ಪ್ರಮುಖ ರಘುನಂದನ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದೂ ಸಮಾಜದ್ರೋಹಿ ಪಾಠ ಕಲಿಸಲ್ಲ ಎಂದು ಪ್ರಮೋದ್ ಮುತಾಲಿಕ್ ಹೇಳಿಕೆ ಕುರಿತು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ತಿಳಿಸಿದರು.

ಪಾಕಿಸ್ತಾನ ಧ್ವಜ ಹಾರಿಸಿದ ಪ್ರಕರಣ ನಿಗೂಢವಾಗಿದೆ. ಈ ಕುರಿತು ಈಗಾಗಲೇ ತನಿಖೆ ನಡೆಯುತ್ತಿದೆ ಎಂದು ಹೇಳಿದರು.

ಹುಬ್ಬಳ್ಳಿಯಲ್ಲಿ ಸಮಾವೇಶ:
ಹುಬ್ಬಳ್ಳಿಯಲ್ಲಿ ಜನವರಿ 27 ರಿಂದ ಮೂರು ದಿನಗಳ ಕಾಲ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತ ಪ್ರಥಮ ಹಿಂದೂಶಕ್ತಿ ಸಂಗಮ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು. 

ಸಂಘಕ್ಕೆ 75 ವರ್ಷ ತುಂಬಿರುವ ಹಾಗೂ ಕರ್ನಾಟಕದ ಉತ್ತರ ಪಾಂತದಲ್ಲಿ ಸಂಘದ ಕಾರ್ಯಚಟುವಟಿಕೆಗಳನ್ನು ವಿಸ್ತರಿಸುವುದಕ್ಕಾಗಿ ಸಮಾವೇಶ ಸಂಘಟಿಸಲಾಗಿದೆ ಎಂದು ತಿಳಿಸಿದರು.

ಮೂರು ದಿನಗಳ ಸಮಾವೇಶದಲ್ಲಿ ಉತ್ತರ ಪ್ರಾಂತದ ವಿವಿಧೆಡೆಯಿಂದ ಸುಮಾರು 30 ಸಾವಿರ ಸ್ವಯಂ ಸೇವಕರು ಪಾಲ್ಗೊಳ್ಳಲಿದ್ದಾರೆ. ಬೀದರ್ ಜಿಲ್ಲೆಯಿಂದ 2,500 ಸ್ವಯಂ ಸೇವಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಸಮಾವೇಶಕ್ಕೆ ಅಂದಾಜು 4 ಕೋಟಿ ರೂಪಾಯಿ ಖರ್ಚು ಬರಲಿದೆ. ಸಮಾವೇಶದ ಖರ್ಚನ್ನು ಸ್ವಯಂ ಸೇವಕರಿಂದ ಸಂಗ್ರಹಿಸಲಾಗುವುದು. ಶಿಬಿರದಲ್ಲಿ ಭಾಗವಹಿಸುವ ಪ್ರತಿ ಸ್ವಯಂ ಸೇವಕರಿಗೆ 100 ರೂಪಾಯಿ ಶುಲ್ಕ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿಯ ತಾರಿಹಾಲ್ ಸಮೀಪದ 140 ಎಕರೆ ವಿಶಾಲ ಪ್ರದೇಶದಲ್ಲಿ ಸಮಾವೇಶ ಜರುಗಲಿದೆ. ಇಲ್ಲಿ 15 ನಗರಗಳನ್ನು ಸ್ಥಾಪಿಸಲಾಗಿದ್ದು, ಒಂದೊಂದು ನಗರದಲ್ಲಿ ಎರಡುವರೆ ಸಾವಿರ ಸ್ವಯಂ ಸೇವಕರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಿವರಿಸಿದರು.
ಹುಬ್ಬಳ್ಳಿಗೆ  ಪ್ರಯಾಣ ಬೆಳೆಸುವುದಕ್ಕಾಗಿ ಈಗಾಗಲೇ 25 ಬಸ್ ಹಾಗೂ 25 ಟ್ರಕ್‌ಗಳನ್ನು ಬುಕ್ ಮಾಡಲಾಗಿದೆ.

ಸ್ವಯಂ ಸೇವಕರೆ ಇದರ ಖರ್ಚು ಭರಿಸಲಿದ್ದಾರೆ. ಜನವರಿ 26 ರಂದು ದೇಶದ ಸಂಸ್ಕೃತಿ ಪ್ರತಿಬಿಂಬಿಸು ಪ್ರದರ್ಶಿಸಿ ಏರ್ಪಡಿಸಲಾಗಿದೆ. 27 ರಂದು ಸಮಾವೇಶದ ಉದ್ಘಾಟನೆ, 28 ರಂದು ಗಣವೇಷಧಾರಿಗಳ ಪಥ ಸಂಚಲನ, 29 ರಂದು ವಿವಿಧ ಗೋಷ್ಠಿ ಹಾಗೂ ಸಮಾರೋಪ ಸಮಾರಂಭ ಜರುಗಲಿದೆ. ಸ್ವಯಂ ಸೇವಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಸಂಘದ ವಿಭಾಗೀಯ ಕಾರ್ಯವಾಹ ಶಿವಲಿಂಗ ಕುಂಬಾರ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬಿಜೆಪಿ ಖಂಡನೆ

ಬೀದರ್: ಸಿಂದಗಿಯಲ್ಲಿ ಪಾಕಿಸ್ತಾನ ಧ್ವಜ ಹಾರಿಸಿದವರೆ ಆರ್‌ಎಸ್‌ಎಸ್‌ನವರು ಎಂಬ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಖಂಡಿಸಲಾಗುತ್ತದೆ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ವಿಜಯಕುಮಾರ ಎಸ್. ಪಾಟೀಲ್ ಗಾದಗಿ ತಿಳಿಸಿದ್ದಾರೆ.

ಆರ್.ಎಸ್.ಎಸ್. ದೇಶಭಕ್ತ ಸಂಘಟನೆಯಾಗಿದೆ. ಸಂಘಟನೆಯ ಕುರಿತು ಮಾಜಿ ಮುಖ್ಯಮಂತ್ರಿಗಳು ಲಘುವಾಗಿ ಮಾತನಾಡಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.