ADVERTISEMENT

ಹೆಲ್ಮೆಟ್‌ಗೆ ಕೆಜೆಪಿ ವಿರೋಧ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 6:47 IST
Last Updated 15 ಡಿಸೆಂಬರ್ 2012, 6:47 IST

ಹುಬ್ಬಳ್ಳಿ: `ಹೆಲ್ಮೆಟ್ ಕಡ್ಡಾಯ ಮಾಡಿರುವುದರಿಂದ ದ್ವಿಚಕ್ರ ಸವಾರರಿಗೆ ವೇಗವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪೊಲೀಸ್ ಇಲಾಖೆ ಈ ನಿರ್ಧಾರದಿಂದ ತಕ್ಷಣ ಹಿಂದೆಸರಿಯಬೇಕು' ಎಂದು ಕೆಜೆಪಿ ಮುಖಂಡ ಚಂದ್ರಶೇಖರ ಗೋಕಾಕ ಹೇಳಿದರು.

ಹೆಲ್ಮೆಟ್ ವಿರೋಧಿಸಿ ಕೆಜೆಪಿ ಕಾರ್ಯಕರ್ತರು ನಗರದ ಚನ್ನಮ್ಮ ಸರ್ಕಲ್‌ನಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರತಿಭಟನೆ ಕಾಲಕ್ಕೆ   ಅವರು ಮಾತನಾಡಿದರು.

`ಹೆಲ್ಮೆಟ್ ಧರಿಸಿ ನಗರದಲ್ಲಿ ದ್ವಿಚಕ್ರ ಚಲಾಯಿಸಲು ಕಷ್ಟವಾಗುತ್ತಿದೆ. ಮಹಾ ನಗರದಲ್ಲಿ ಸಾಕಷ್ಟು ಒಳರಸ್ತೆ ಮತ್ತು ಹೆಚ್ಚಿನ ವಾಹನ ದಟ್ಟಣೆ ಉಂಟಾಗು ವುದರಿಂದ ಹೆಲ್ಮೆಟ್ ಧರಿಸಿ ಹೋಗಲು ಸಾಧ್ಯವಾಗುವುದಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ, ಹೆಲ್ಮೆಟ್ ಕಡ್ಡಾಯ ಧಾರಣೆಯಿಂದ ರಿಯಾಯಿತಿ ನೀಡಬೇಕು' ಎಂದು ಆಗ್ರಹಿಸಿದರು.

`ಹೆಲ್ಮೆಟ್ ಕಡ್ಡಾಯದಿಂದ ಕಳ್ಳತನ, ಡಕಾಯಿತಿ, ಕೋಮು ಗಲಭೆ ನಡೆಸು ವವರಿಗೆ, ಉಗ್ರರಿಗೆ  ಓಡಾಡಲು ಅವಕಾಶ ನೀಡಿದಂತಾಗುತ್ತದೆ. ಹೀಗಾಗಿ ನಗರ ವ್ಯಾಪ್ತಿಯಲ್ಲಿ ಹೆಲ್ಮೆಟ್ ಕಡ್ಡಾಯ ತೆಗೆದುಹಾಕಿ, ನಗರ ಬಿಟ್ಟು 15 ಕಿ.ಮೀ ದೂರ ಚಲಿಸು ವವರಿಗೆ ಕಡ್ಡಾಯಗೊಳಿಸಬೇಕು' ಎಂದರು.

`ಈ ಪ್ರತಿಭಟನೆಗೆ ಪೊಲೀಸ್ ಇಲಾಖೆ ಸೂಕ್ತವಾಗಿ ಸ್ಪಂದಿಸದಿದ್ದರೆ, ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು. ಅಲ್ಲದೆ ಎಲ್ಲ ಪೊಲೀಸ್ ಠಾಣೆಗಳಲ್ಲಿ ಹೆಲ್ಮೆಟ್ ಕಳ್ಳತನ ಅಥವಾ ಹೆಲ್ಮೆಟ್ ನಾಪತ್ತೆ ಪ್ರಕರಣ ದೂರು ನೀಡಲಾಗುವುದು' ಎಂದರು.

`ಹೆಲ್ಮೆಟ್ ಕಡ್ಡಾಯದ ಹಿಂದೆ ಕಂಪೆನಿಗಳ ಲಾಬಿ ಇದೆ' ಎಂದರು.

ಪಾಲಿಕೆ ಸದಸ್ಯರಾದ ವೆಂಕಟೇಶ ಮೇಸ್ತ್ರಿ, ಅಜ್ಜಪ್ಪ ಬೆಂಡಿಗೇರಿ, ವಿಷ್ಣು ಪವಾರ, ಉದ್ಯಮಿ ರಮೇಶ ಬಾಫಣ ಮತ್ತಿತರರು ಇದ್ದರು. ಸಹಾಯಕ ಪೊಲೀಸ್ ಕಮಿಷನರ್ (ಉತ್ತರ) ಎ.ಆರ್.ಬಡಿಗೇರ ಅವರಿಗೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.