ADVERTISEMENT

ಹೆಲ್ಮೆಟ್ ಕಡ್ಡಾಯ: ತಪಾಸಣೆ ತೀವ್ರ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2012, 10:57 IST
Last Updated 11 ಡಿಸೆಂಬರ್ 2012, 10:57 IST

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದನ್ನು ಸೋಮವಾರದಿಂದ ಕಡ್ಡಾಯಗೊಳಿಸಲಾಗಿದೆ. ಟ್ರಾಫಿಕ್ ಪೊಲೀಸರು ತಪಾಸಣೆ ಬಿಗಿಗೊಳಿಸಿದ್ದು, ಮೊದಲ ದಿನವೇ 300 ಪ್ರಕರಣ ದಾಖಲಿಸಿ, ಮೂರು ಸಾವಿರ ರೂಪಾಯಿ ದಂಡ ವಸೂಲಿ ಮಾಡಲಾಗಿದೆ.

ಸೋಮವಾರ ಮಧ್ಯಾಹ್ನ ತಪಾಸಣೆ ತೀವ್ರಗೊಂಡಿತ್ತು. ಚನ್ನಮ್ಮ ವೃತ್ತ, ಕಾಟನ್ ಮಾರ್ಕೆಟ್, ಪಿ.ಬಿ. ರಸ್ತೆ, ಗೋಕುಲ ರಸ್ತೆ ಸೇರಿದಂತೆ ವಿವಿಧ ಭಾಗಗಳಲ್ಲಿ ಪೊಲೀಸರು ಹೆಲ್ಮೆಟ್ ರಹಿತ ಸವಾರರನ್ನು `ಹಿಡಿಯುವ' ಕಾರ್ಯಾಚರಣೆಯಲ್ಲಿ ತೊಡಗಿದ್ದರು.

ಹೆಲ್ಮೆಟ್ ಕಡ್ಡಾಯದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ವಾರದ ಹಿಂದೆಯೇ ಸೂಕ್ತ ಕ್ರಮಕ್ಕೆ ಮುಂದಾಗಿತ್ತು. ಹೆಲ್ಮೆಟ್ ಕಡ್ಡಾಯಗೊಳ್ಳುತ್ತಿರುವ ಕುರಿತು ಸಿ.ಡಿ. ಸಿದ್ಧಪಡಿಸಿ, ಅವಳಿನಗರದ ಪ್ರಮುಖ ವೃತ್ತಗಳಲ್ಲಿ ಧ್ವನಿವರ್ಧಕ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಇಂಟರ್‌ಸೆಪ್ಟರ್‌ಗಳಲ್ಲೂ ಪೊಲೀಸರು ಮಾಹಿತಿ ನೀಡುತ್ತಿದ್ದಾರೆ.

`ಹೆಲ್ಮೆಟ್ ಧರಿಸದೇ ಮೊದಲ ಬಾರಿಗೆ ಸಿಕ್ಕಿ ಬೀಳುವವರಿಗೆ ರೂ. 100 ದಂಡ ವಿಧಿಸಲಾಗುವುದು. ಹೀಗೆ ದಂಡ ಕಟ್ಟುವವರ ವಿವರಗಳನ್ನು ಸಂಚಾರ ಪೊಲೀಸರು ಬ್ಲ್ಯಾಕ್ ಬೆರ‌್ರಿಗಳಲ್ಲಿ ದಾಖಲಿಸಲಿದ್ದಾರೆ. ಮೂರಕ್ಕಿಂತ ಹೆಚ್ಚು ಬಾರಿ ಸಿಕ್ಕಿಬಿದ್ದು ದಂಡ ಕಟ್ಟುವವರ ಚಾಲನಾ ಪರವಾನಗಿಯನ್ನು ರದ್ದುಪಡಿಸಲು ಸಾರಿಗೆ ಇಲಾಖೆ ಕಚೇರಿಗೆ ಶಿಫಾರಸು ಮಾಡಲಾಗವುದು' ಎಂದು ಪೊಲೀಸ್ ಕಮಿಷನರ್ ಬಿ.ಎ. ಪದ್ಮನಯನ `ಪ್ರಜಾವಾಣಿ'ಗೆ ತಿಳಿಸಿದರು.

ದ್ವಿಚಕ್ರವಾಹನ ಅಪಘಾತದಲ್ಲಿ ಶೇ 90ರಷ್ಟು ಜನರು ತಲೆಗೆ ಹೊಡೆತ ಬಿದ್ದು ಸಾವಿಗೀಡಾಗುತ್ತಾರೆ. ಹೆಲ್ಮೆಟ್ ಬಳಸಿದಲ್ಲಿ ಈ ಪ್ರಮಾಣವನ್ನು ಕಡಿಮೆ ಮಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ 2006ರಲ್ಲಿಯೇ ಹೆಲ್ಮೆಟ್ ಧರಿಸುವುದನ್ನು ಕಡ್ಡಾಯಗೊಳಿಸಿದೆ. ಈಗ ಆ ಕಾನೂನನ್ನು ಸಮರ್ಪಕ ರೀತಿಯಲ್ಲಿ ಜಾರಿಗೊಳಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

`ಹೆಲ್ಮೆಟ್ ಧರಿಸದೇ ಚಾಲನೆ ಮಾಡುವವರಲ್ಲಿ ಕಾಲೇಜು ವಿದ್ಯಾರ್ಥಿಗಳು, ಯುವಜನರೇ ಹೆಚ್ಚು. ಹೀಗಾಗಿ ಕಾಲೇಜುಗಳ ಸಮೀಪವೂ ತಪಾಸಣೆ ಮಾಡಲಾಗುತ್ತದೆ. ತಪಾಸಣೆ ಸಂದರ್ಭ ಹೆಲ್ಮೆಟ್ ಜೊತೆಗೆ ಚಾಲನಾ ಪರವಾನಗಿ, ವಾಹನ ದಾಖಲಾತಿ, ವಿಮೆಯನ್ನೂ ಪರೀಕ್ಷಿಸಲಾಗುತ್ತದೆ. ಹೀಗಾಗಿ ಚಾಲಕರು ಅಗತ್ಯ ದಾಖಲಾತಿಗಳನ್ನು ತಮ್ಮಂದಿಗೆ ಇಟ್ಟುಕೊಳ್ಳಬೇಕು' ಎಂದು  ಹುಬ್ಬಳ್ಳಿ ವಲಯ ಎಸಿಪಿ (ಸಂಚಾರ) ಎನ್.ಎಸ್. ಪಾಟೀಲ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.