ADVERTISEMENT

‘ಇಂಥವರನ್ನೇ ಸಂಪುಟಕ್ಕೆ ಸೇರಿಸಿಕೊಳ್ಳಿ ಎಂದು ಹೇಳಿಲ್ಲ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2013, 7:02 IST
Last Updated 2 ಡಿಸೆಂಬರ್ 2013, 7:02 IST

ಧಾರವಾಡ: ‘ಗಣಿ ಅದಿರು ಲೂಟಿ ಮಾಡಿದವರು, ಸರ್ಕಾರಿ ಜಮೀನು ಒತ್ತುವರಿ ಮಾಡಿದವರನ್ನು ಸಂಪುಟಕ್ಕೆ  ಸೇರಿಸಿಕೊಳ್ಳಬೇಡಿ ಎಂದು ಒತ್ತಾಯಿಸಿ­ದ್ದೇನೆಯೇ ಹೊರತು, ಇಂಥವರನ್ನೇ ಸಂಪುಟಕ್ಕೆ ತೆಗೆದುಕೊಳ್ಳಿ ಎಂದು ಮನವಿ ಮಾಡಿಲ್ಲ. ಅಲ್ಲದೇ, ಕಳಂಕಿತ ಶಾಸಕರ ಬಗ್ಗೆ ಪೂರಕ ದಾಖಲೆ ಇದ್ದ ನಂತರವಷ್ಟೇ ಅಂಥವರನ್ನು ಸಂಪುಟಕ್ಕೆ ಸೇರಿಸಿಕೊಳ್ಳ­ಬಾರದು ಎಂದು ಆಗ್ರಹಪಡಿಸಿದ್ದೇನೆ’ ಎಂದು ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ ಎಸ್‌.ಆರ್‌. ಹಿರೇಮಠ ಸ್ಪಷ್ಟಪಡಿಸಿದರು.

‘ಸಂತೋಷ ಲಾಡ್‌ ವಿರುದ್ಧ ಗಣಿ ಅಕ್ರಮ ಆರೋಪದ ಹಿನ್ನೆಲೆಯಲ್ಲಿ ಅವರ ರಾಜೀನಾಮೆಗೆ ಒತ್ತಾಯಿಸಿದ್ದೆ. ಎಸ್‌.ಎಂ.ಕೃಷ್ಣ ಮುಖ್ಯಮಂತ್ರಿ­ಯಾಗಿದ್ದ ಸಮಯದಲ್ಲಿ ಡಿ.ಕೆ.ಶಿವಕುಮಾರ್‌ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಸಂಸ್ಥೆಯನ್ನು ಬಳಕೆ ಮಾಡಿಕೊಂಡು 10.80 ಲಕ್ಷ ಟನ್‌ ಅದಿರನ್ನು ಯಾವ ರೀತಿ ಅಕ್ರಮವಾಗಿ ಲೂಟಿ ಮಾಡಿದ್ದಾರೆ ಎಂಬುದನ್ನು ದಾಖಲೆ ಸಮೇತ ನಾವು ಸುಪ್ರೀಂಕೋರ್ಟ್‌ ಮುಂದೆ ಇಟ್ಟಿದ್ದೇನೆ. ಮಾಜಿ ಸ್ಪೀಕರ್‌ ರಮೇಶಕುಮಾರ್ ಅರಣ್ಯ ಇಲಾಖೆಗೆ ಸೇರಿದ 60 ಎಕರೆ ಜಮೀನನ್ನು ಒತ್ತುವರಿ ಮಾಡಿದ್ದರ ಬಗ್ಗೆ ಸರ್ಕಾರ ನೇಮಿಸಿದ್ದ ವಿ.ಬಾಲಸುಬ್ರ­ಮ­ಣಿಯನ್ ನೇತೃತ್ವದ ಕಾರ್ಯಪಡೆ ತನ್ನ ವರದಿ­ಯಲ್ಲಿ ಉಲ್ಲೇಖಿಸಿದೆ. ಅವರನ್ನು ಸಂಪುಟಕ್ಕೆ ಸೇರಿಸಿ­ಕೊಂಡರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂಬ ಉದ್ದೇಶದಿಂದ ಸಂಪುಟಕ್ಕೆ  ಸೇರಿಸಿಕೊಳ್ಳಬೇಡಿ ಎಂದಿದ್ದೆ.

ಬೆಂಗಳೂರಿನಿಂದ ಬಳ್ಳಾರಿವರೆಗೆ ಗಣಿ ಅಕ್ರಮದ ವಿರುದ್ಧ ಪಾದಯಾತ್ರೆ ಮಾಡಿದ್ದ ಸಿದ್ದರಾಮಯ್ಯ ತಮ್ಮ ಸಂಪುಟದಲ್ಲಿ ಕಳಂಕಿತರಿಗೆ ಸ್ಥಾನ ನೀಡುವುದಿಲ್ಲ ಎಂದಿ­ದ್ದರು. ಈ ಮಾತನ್ನು ಅವರು ಉಳಿಸಿಕೊಳ್ಳಬೇಕು’ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ನೆನಪಿಸಿದರು.

‘ಇಲ್ಲಿಯವರೆಗೂ ನಾನು ಯಾರ ಪರವೂ ಲಾಬಿ ಮಾಡಿಲ್ಲ. ಇಂಥವರಿಗೆ ನೌಕರಿ ಕೊಡಿ ಎಂಬ ಶಿಫಾರ­ಸನ್ನೂ ಮಾಡಿಲ್ಲ. ನಾನು ವಿಮಾನದಲ್ಲಿ ಓಡಾಡುತ್ತೇನೆ ಹಾಗೂ ದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತೇನೆ ಎಂದು ಇತ್ತೀಚೆಗೆ ಬೆಳಗಾವಿ­ಯಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಸಭೆಯಲ್ಲಿ ಕೆಲವರು ಆರೋಪ ಮಾಡಿದ್ದಾರೆ. ಕೋರ್ಟ್‌ ಕೆಲಸ­ಕ್ಕಾಗಿ ದೆಹಲಿಗೆ ಹೋದಾಗ ಗಾಂಧಿ ಶಾಂತಿ ಪ್ರತಿಷ್ಠಾನಕ್ಕೆ ಸೇರಿದ ಕೊಠಡಿಗಳಲ್ಲಿ ಉಳಿದು­ಕೊಳ್ಳುತ್ತೇನೆ. ಅದರ ಬಾಡಿಗೆ ದಿನಕ್ಕೆ ಕೇವಲ ₨ 600. ಸಾರ್ವಜನಿಕರ ಗಮನವನ್ನು ಬೇರೆಡೆ ಸೆಳೆಯಲು ವೃಥಾ ಆರೋಪ ಮಾಡುತ್ತಿದ್ದಾರೆ’ ಎಂದು ಹಿರೇಮಠ ವಿಷಾದಿಸಿದರು.

ಇನ್ನು ಮುಂದೆ ವಾರಕ್ಕೆ ಒಂದು ಬಾರಿ ಪತ್ರಿಕಾಗೋಷ್ಠಿ ನಡೆಸಿ ಭೂಕಬಳಿಕೆಯ ಒಂದೊಂದು ಪ್ರಕರಣವನ್ನು ಬಹಿರಂಗಪಡಿಸುತ್ತೇನೆ. ಬೆಂಗಳೂರಿನ ಕೆ.ಆರ್‌.ಪುರ ಬಳಿಯ ಪಟ್ಟಂದೂರು ಅಗ್ರಹಾರ ಗ್ರಾಮದ ಸರ್ವೆ ನಂ 42ರಲ್ಲಿ ಜಾಯ್‌ ಐಸ್ ಕ್ರೀಂ ಎಂಬ ಸಂಸ್ಥೆಗೆ 3.23 ಎಕರೆ ಜಮೀನನ್ನು ಮಾರುಕಟ್ಟೆ ದರದ ಅರ್ಧ ಬೆಲೆಗೆ ನೀಡಿದ್ದಾರೆ. ಕಡಿಮೆ ಬೆಲೆಗೆ ನೀಡಿದ್ದರ ಕಾರಣವನ್ನೂ ಕಂದಾಯ ಇಲಾಖೆ ಕಾರ್ಯದರ್ಶಿ ನೀಡಿಲ್ಲ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.