ADVERTISEMENT

‘ಇನ್‌ಕಾಮೆಕ್ಸ್–2013’ ಇಂದಿನಿಂದ

ಕೈಗಾರಿಕಾ ವಸ್ತು ಪ್ರದರ್ಶನ– ಅವಕಾಶಗಳ ಅನಾವರಣ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2013, 8:57 IST
Last Updated 13 ಸೆಪ್ಟೆಂಬರ್ 2013, 8:57 IST

ಹುಬ್ಬಳ್ಳಿ: ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ ‘ಇನ್ ಕಾಮೆಕ್ಸ್–2013’ ಎಂಬ ಕೈಗಾರಿಕಾ ವಸ್ತು ಪ್ರದರ್ಶನಕ್ಕೆ ಹುಬ್ಬಳ್ಳಿ–ಧಾರವಾಡ ವಿವಿಧೋದ್ದೇಶ ವಸ್ತು ಪ್ರದರ್ಶನ ಕೇಂದ್ರ ಸಿದ್ಧಗೊಂಡಿದೆ.

ಇದೇ 13ರಿಂದ ಐದು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನ, ವಿಚಾರ ಸಂಕಿರಣ, ವ್ಯಾಪಾರಾಭಿವೃದ್ಧಿಗಾಗಿ ಸಂವಾದ ಗೋಷ್ಠಿ, ಸಾಂಸ್ಕೃತಿಕ ಕಾರ್ಯ­ರ್ಕ್ರಮಗಳಿಗಾಗಿ 332 ಸುಸಜ್ಜಿತ ಮಳಿಗೆಗಳು ಸಿದ್ಧಗೊಂಡಿವೆ. ಅಲ್ಲದೇ, ಮಾಧ್ಯಮ ಕೇಂದ್ರ, ನಿಯಂತ್ರಣ ಕೊಠಡಿ, ವಸ್ತು ಪ್ರದರ್ಶನಕ್ಕೆ ಭೇಟಿ ನೀಡುವವ­ರಿಗಾಗಿ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಅಂತಿಮ ಸ್ಪರ್ಶ ನೀಡಲಾಗುತ್ತಿತ್ತು.

ಇನ್ನು, ಕೇಂದ್ರವನ್ನು ಪ್ರವೇಶಿಸು­ತ್ತಿದ್ದಂತೆಯೇ ಶಿಗ್ಗಾಂವ ತಾಲ್ಲೂಕಿನ ಗೋಟಗೋಡಿಯಲ್ಲಿ ದಾಸನೂರ ಸಮೂಹ ಸಂಸ್ಥೆ ಒಡೆತನ ’ಉತ್ಸವ ರಾಕ್ ಗಾರ್ಡನ್’ ವತಿಯಿಂದ ಜಾನು­ವಾರು­ಗಳ ಪ್ರತಿಕೃತಿಗಳನ್ನು ಬಳಸಿ­ಕೊಂಡು ಕೃಷಿ ಪರಿಸರವನ್ನು ಸೃಷ್ಟಿಸುವ ಕಾರ್ಯವೂ ಭರದಿಂದ ಸಾಗಿತ್ತು.

ಇನ್‌ಕಾಮೆಕ್ಸ್–2013’ ಹಿನ್ನೆ­ಲೆ­ಯಲ್ಲಿ ಕೈಗೊಂಡಿರುವ ಸಿದ್ಧತೆ ಕುರಿತು ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಈ ವಸ್ತು ಪ್ರದರ್ಶನ ಸಮಿತಿ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳ ಬೆಳವಣಿ­ಗೆಗೆ ಈ ಕಾರ್ಯಕ್ರಮ ವೇದಿಕೆಯಾಗ­ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ನಂತರ, ಕೇಂದ್ರದ ಆವರಣದಲ್ಲಿ ನಡೆದಿರುವ ಸಿದ್ಧತೆಗಳನ್ನು ಮಾಧ್ಯಮ ಪ್ರತಿನಿಧಿಗಳಿಗೆ ತೋರಿಸಿದರು.

‘ಕೈಗಾರಿಕಾ ವಸ್ತು ಪ್ರದರ್ಶನಕ್ಕಾಗಿ 332 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಇದರ ಜೊತೆಗೆ ಆಟೊಮೊಬೈಲ್‌ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರದರ್ಶನಕ್ಕಾಗಿ 12, ವೆಂಡರ್‌ ಡೆವಲೆಪ್ ಮೆಂಟ್– 12 ಹಾಗೂ ಆಹಾರೋತ್ಪನ್ನ ಕ್ಷೇತ್ರಕ್ಕಾಗಿ 13 ಮಳಿಗೆಗಳನ್ನು ಸ್ಥಾಪಿಸಲಾಗಿದೆ’ ಎಂದು ವಿವರಿಸಿದರು.

’ಉತ್ತರ ಕರ್ನಾಟಕದಲ್ಲಿರುವ ಕೈಗಾರಿಕೆಗಳು ಹಾಗೂ ಈ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಇರುವ  ಅವಕಾಶಗಳ ಕುರಿತು ‘ವೈಬ್ರಂಟ್ ನಾರ್ಥ್ ಕರ್ನಾಟಕ’ ಎಂಬ ವಿಶೇಷ ಪ್ರದರ್ಶನಕ್ಕಾಗಿ 18 ಮಳಿಗೆಗಳನ್ನು ಸ್ಥಾಪಿಸಲಾಗಿದೆ ಎಂದೂ ವಿವರಿಸಿದರು.

14, 15 ಹಾಗೂ 16ರಂದು ನಡೆಯಲಿರುವ ’ವೆಂಡರ್‌ ಡೆವಲೆಪ್‌­ಮೆಂಟ್’ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ, ಮುಖ್ಯ ವೇದಿಕೆಯಲ್ಲದೇ ವಿಚಾರ ಸಂಕಿರಣ, ಸಂವಾದ ಗೋಷ್ಠಿಗಳಿ­ಗಾಗಿ ಎರಡು ಸಭಾಂಗಣಗಳನ್ನು ಸ್ಥಾಪಿಸಲಾಗಿದೆ. ಪ್ರದರ್ಶನಕ್ಕೆ ಭೇಟಿ ನೀಡುವವರು, ಅದರಲ್ಲೂ ವಿಶೇಷವಾಗಿ ಹಿರಿಯ ನಾಗರಿಕರು ವಿಶ್ರಾಂತಿ ತೆಗೆದು­ಕೊಳ್ಳಲು ಅನುಕೂಲವಾಗು­ವಂತೆ ಪ್ರತ್ಯೇಕ ಕೊಠಡಿಗಳನ್ನು ಸಹ ನಿರ್ಮಿಸ­ಲಾಗಿದೆ ಎಂದರು.

‘ಭದ್ರತೆಗೆ ಒತ್ತು ನೀಡಲಾಗಿದ್ದು, 24 ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗು­ತ್ತಿದೆ. ಅಲ್ಲದೇ, ಇಡೀ ವಸ್ತು ಪ್ರದರ್ಶನ ಸ್ಥಳದಲ್ಲಿನ ಪ್ರತಿಯೊಂದು ಚಟುವಟಿಕೆ ಮೇಲೆ ನಿಗಾ ಇಡುವ ಸಲುವಾಗಿ ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾ­ಗಿದ್ದು, 24 ಗಂಟೆಯೂ ಕಾರ್ಯ ನಿರ್ವಹಿಸಲಿದೆ’ ಎಂದರು.

‘ಮಹಿಳಾ ಉದ್ಯಮಶೀಲರಿಗೆ ಈ ಬಾರಿಯ ‘ಇನ್‌ಕಾಮೆಕ್ಸ್–2013’­ನಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಅಲ್ಲದೇ, ನಗರದ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜು, ಕೆಎಲ್ಇ ಎಂಜಿನಿಯರಿಂಗ್‌ ಹಾಗೂ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಿಂದ ತಲಾ 5ರಂತೆ ಒಟ್ಟು 15 ಪ್ರಾಜೆಕ್ಟ್‌ಗಳ ಪ್ರದರ್ಶನಕ್ಕಾಗಿ ಸಹ ವ್ಯವಸ್ಥೆ ಮಾಡಲಾಗಿದೆ’ ಎಂದು ವಿವರಿಸಿದರು.

ಮೈಕ್ರೊ ವೇವ್, ಕೈಗಾ, ಜಿಟಿಟಿಸಿ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಟಾಟಾ ಮೋಟರ್ಸ್, ಟಾಟಾ ಹಿಟಾಚಿ, ಟಾಟಾ ಮಾರ್ಕೊ­ಪೊಲೊ, ಮೈಸೂರು ಎಲೆಕ್ಟ್ರಿಕಲ್ಸ್, ನೈರುತ್ಯ ರೈಲ್ವೆ, ಹೆಸ್ಕಾಂ ಸೇರಿದಂತೆ ಹಲವಾರು ಪ್ರತಿಷ್ಠಿತ ಕಂಪೆನಿಗಳು, ಏಜೆನ್ಸಿಗಳು ಪಾಲ್ಗೊಳ್ಳುವವು ಎಂದೂ ವಿವರಿಸಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಎನ್‌.ಪಿ.ಜವಳಿ, ಉಪಾ­ಧ್ಯಕ್ಷರಾದ ವಸಂತ ಎನ್‌.­ಲದವಾ, ಅಂದಾನಪ್ಪ ಸಜ್ಜನರ, ಗೌರವ ಕಾರ್ಯದರ್ಶಿ ವಿಶ್ವನಾಥ ಗಿಣಿಮಾವ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಮಾಲತೇಶ ಜೀವಣ್ಣವರ ಸುದ್ದಿಗೋಷ್ಠಿಯಲ್ಲಿ ಇದ್ದರು.

ಎಚ್.ಕೆ.­ಪಾಟೀಲರಿಂದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೀನಾ ಪ್ರವಾಸದಲ್ಲಿದ್ದಾರೆ. ಹೀಗಾಗಿ ಇದೇ 13ರಂದು ಬೆಳಿಗ್ಗೆ 11 ಗಂಟೆಗೆ ‘ಇನ್ ಕಾಮೆಕ್ಸ್–2013’ಅನ್ನು ಗ್ರಾಮೀಣಾಭಿ­ವೃದ್ಧಿ ಹಾಗೂ ಪಂಚಾಯತ್ ರಾಜ್‌ ಸಚಿವ ಎಚ್‌.ಕೆ.ಪಾಟೀಲ ಅವರು ಉದ್ಘಾಟಿಸು­ವರು ಎಂದು ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಎನ್‌.ಪಿ. ಜವಳಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.