ADVERTISEMENT

‘ಉತ್ಪಾದನೆ, ಸಂಸ್ಕರಣೆಯೇ ಬೆನ್ನೆಲುಬು’

‘ಇನ್‌ಕಾಮೆಕ್ಸ್ –2013’ ಕೈಗಾರಿಕಾ ವಸ್ತುಪ್ರದರ್ಶನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2013, 9:37 IST
Last Updated 14 ಸೆಪ್ಟೆಂಬರ್ 2013, 9:37 IST
ಹುಬ್ಬಳ್ಳಿ ಸಮೀಪದ ಅಮರಗೋಳದಲ್ಲಿ ‘ಇನ್‌ಕಾಮೆಕ್ಸ್–2013’ ಕೈಗಾರಿಕಾ ವಸ್ತುಪ್ರದರ್ಶದ  ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌,  ಕೆಸಿಸಿಐ ಅಧ್ಯಕ್ಷ ಎನ್‌.ಪಿ. ಜವಳಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ,  ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ  ಪಾಲ್ಗೊಂಡಿದ್ದರು.                       –ಪ್ರಜಾವಾಣಿ ಚಿತ್ರ
ಹುಬ್ಬಳ್ಳಿ ಸಮೀಪದ ಅಮರಗೋಳದಲ್ಲಿ ‘ಇನ್‌ಕಾಮೆಕ್ಸ್–2013’ ಕೈಗಾರಿಕಾ ವಸ್ತುಪ್ರದರ್ಶದ ಉದ್ಘಾಟನಾ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್‌, ಕೆಸಿಸಿಐ ಅಧ್ಯಕ್ಷ ಎನ್‌.ಪಿ. ಜವಳಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ, ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪಾಲ್ಗೊಂಡಿದ್ದರು. –ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ:  ‘ಕೈಗಾರಿಕಾ ಕ್ಷೇತ್ರದಲ್ಲಿ ಉತ್ಪಾ­ದನೆ ಮತ್ತು ಸಂಸ್ಕರಣೆ ಮಾಡುವವನು ನೈಜ ಉದ್ಯಮಿ. ಅಂಥವರು ಕೈಗಾರಿಕಾ ಕ್ಷೇತ್ರದ ಬೆನ್ನೆಲುಬು’ ಎಂದು ಗ್ರಾಮೀ­ಣಾ­ಭಿವೃದ್ಧಿ ಹಾಗೂ ಪಂಚಾಯತ್‌-­ರಾಜ್‌ ಸಚಿವ ಎಚ್‌.ಕೆ.ಪಾಟೀಲ ಅಭಿಪ್ರಾಯಪಟ್ಟರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಡಳಿತದ ಸಂಯುಕ್ತ ಆಶ್ರಯದಲ್ಲಿ ಅಮರಗೋಳದಲ್ಲಿರುವ ಹುಬ್ಬಳ್ಳಿ–ಧಾರವಾಡ ವಿವಿಧೋದ್ದೇಶ ವಸ್ತುಪ್ರದ­ರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ ಐದು ದಿನಗಳ  ‘ಇನ್‌ಕಾಮೆಕ್ಸ್–2013’ ಕೈಗಾರಿಕಾ ವಸ್ತುಪ್ರದರ್ಶನವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಉದ್ಯೋಗ ಇಲ್ಲದಿದ್ದವರಿಗೆ, ವ್ಯಾಪಾರ ಅರಸಿ ಅಡ್ಡಾಡುವವರಿಗೆ ಇದೊಂದು ಉತ್ತಮ ವೇದಿಕೆ. ಆ ಮೂಲಕ ಉದ್ಯಮಗ
ಳಿಗೆ ಉತ್ತೇಜನ ಸಿಗಲು ಸಾಧ್ಯ. ಉತ್ತರ ಕರ್ನಾಟಕ ಭಾಗದಲ್ಲಿ ಉದ್ಯಮ ಕ್ಷೇತ್ರದ ಪ್ರಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದನ್ನು ನೋಡಿದರೆ, ಉತ್ಪಾದಕರು ನಮ್ಮಲ್ಲಿ ಕಡಿಮೆಯಾಗುತ್ತಿದ್ದಾರೆಯೇ ಎಂಬ ಸಂದೇಹ ಮೂಡುತ್ತದೆ. ಬಂಡವಾಳ ಹೂಡಿಕೆದಾರರು ಉತ್ಪಾದನಾ, ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಉತ್ಸುಕತೆ ತೋರಿಸುತ್ತಿಲ್ಲ. ಸಂಗ್ರಹ ಮಾಡಿಟ್ಟುಕೊಂಡರೆ ಯಶಸ್ವಿ ಉದ್ಯಮಿ, ವ್ಯಾಪಾರಸ್ಥರಾಗಬಹುದು ಎಂಬ ಭಾವನೆ ಬಂದಂತಿದೆ’ ಎಂದರು.

‘ಕೈಗಾರಿಕೆ ಆರಂಭಿಸುವುದಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ­ಯಿಂದ ಭೂಮಿ ಪಡೆಯುವ ಕೆಲವರು ಅದನ್ನು ಕೈಗಾರಿಕೆ ಸ್ಥಾಪನೆಗೆ ಬಳಸು­ತ್ತಿಲ್ಲ. ಅಂಥವರು ಕೈಗಾರಿಕೆ ಆರಂಭಿಸು­ವಂತೆ ಒತ್ತಾಯಿಸಬೇಕು. ಇಲ್ಲದಿದ್ದರೆ ಭೂಮಿ ಹಿಂತೆಗೆದು­ಕೊಳ್ಳುವುದಾಗಿ ಷರತ್ತು ಹಾಕಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

'ಗಾಮನಗಟ್ಟಿಯಲ್ಲಿರುವ 650 ಎಕರೆ ಭೂಮಿಯನ್ನು ಕೈಗಾರಿಕಾ ವಲಯಕ್ಕೆ ಮೀಸಲಿಡಲಾಗಿದೆ. ಅಲ್ಲಿ ವಿವಿಧೋದ್ಧೇಶ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ನಿಟ್ಟಿನಲ್ಲಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಏಜೆನ್ಸಿಯಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

‘ಎಪಿಎಂಸಿ ಅಧ್ಯಕ್ಷರು ಪ್ರಾಂಗಣ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ರೂ10.20 ಲಕ್ಷ ಅನುದಾನ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಗಮನಕ್ಕೆ ತರುವ ಮೂಲಕ ನನ್ನಿಂದ ಸಾಧ್ಯವಾಗುವ ಪ್ರಯತ್ನ ಮಾಡುತ್ತೇನೆ. ಹುಬ್ಬಳ್ಳಿ– ಬೆಳಗಾವಿ ಮಧ್ಯೆ ರೈಲು ಹಳಿ ನಿರ್ಮಿಸುವ ಬಗ್ಗೆಯೂ ಈ ಭಾಗದ ಉದ್ಯಮಿಗಳಿಂದ ಬೇಡಿಕೆ ಬಂದಿದೆ. ಈ ಬಗ್ಗೆಯೂ ಮುಖ್ಯಮಂತ್ರಿ ಮತ್ತು ರೈಲ್ವೆ ಸಚಿವರ ಜೊತೆ ಚರ್ಚಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಕಳಸಾ ಬಂಡೂರಿ ನಾಲಾ ಜೋಡಣೆ ಯೋಜನೆಯ ಮೂಲಕ ಮಹದಾಯಿ ನದಿಪಾತ್ರದಿಂದ ಮಲಪ್ರಭಾ ನದಿಗೆ ಮಂದಿನ ಒಂದು ವರ್ಷದಲ್ಲಿ 1.5 ಟಿಎಂಸಿ ಅಡಿಯಷ್ಟು ನೀರು ತರಲಾಗುವುದು. ಈ ಕುರಿತಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.
ಸಂಸದ ಪ್ರಹ್ಲಾದ ಜೋಶಿ ಮಾತ­ನಾಡಿ, ಹೊಸ ಕೈಗಾರಿಕಾ ವಲಯಗಳ ಅಭಿವೃದ್ಧಿ ದೃಷ್ಟಿಯಿಂದ ಇಂಡಸ್ಟ್ರೀ­ಯಲ್‌ ಟೌನ್‌ಶಿಪ್‌ ಕಾಯ್ದೆ ಅನು­ಷ್ಠಾನ ಅಗತ್ಯ. ಕೈಗಾರಿಕೆಗಳಿಗೆ ಭೂಮಿ ಮೀಸಲಿಡಬೇಕು. ಅವಳಿನಗರದ ಕೈಗಾರಿಕೆ­ಗಳಿಗೆ ಅನುಕೂಲ ಮಾಡಿಕೊ­ಡುವ ಉದ್ದೇಶದಿಂದ ಧಾಬೋಲ್‌– ಬಿಡದಿ ಗ್ಯಾಸ್‌ ಪೈಪ್‌ಲೈನ್‌ನ್ನು ನಗರದಲ್ಲಿ ಅಳವಡಿಸಬೇಕು’ ಎಂದು ಆಗ್ರಹಿಸಿದರು.

‘ಹಳೆ ಮೈಸೂರು ಭಾಗದ ಜನಪ್ರತಿನಿಧಿಗಳಂತೆ ನಾವೂ ಈ ಭಾಗದ ಅಭಿವೃದ್ಧಿಗೆ ಕಟಿಬದ್ಧರಾಗಬೇಕು’ ಎಂದು ವಿಧಾನಪರಿಷತ್ತು ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.


ಅಧ್ಯಕ್ಷತೆ ವಹಿಸಿದ್ದ ಮಾಜಿ ಮುಖ್ಯ­ಮಂತ್ರಿ ಜಗದೀಶ ಶೆಟ್ಟರ್‌, ‘ ಕೈಗಾರಿ­ಕೆಗಳನ್ನು ಉತ್ತರ ಕರ್ನಾಟಕದ ಕಡೆಗೆ ಸೆಳೆಯುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನಗಳಾಗಬೇಕು’ ಎಂದರು.

ವಿಧಾನಪರಿಷತ್ತು ಸದಸ್ಯ ಶ್ರೀನಿವಾಸ ಮಾನೆ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ. ಎಪಿಎಂಸಿ ಅಧ್ಯಕ್ಷ ಸುರೇಶ ದಾಸನೂರ, ಜಿಲ್ಲಾಧಿಕಾರಿ ಸಮೀರ್‌ ಶುಕ್ಲಾ, ಪಾಲಿಕೆ ಆಯುಕ್ತ ರಮಣದೀಪ ಚೌಧರಿ, ಕೆಸಿಸಿಐ ಅಧ್ಯಕ್ಷ ಎನ್‌.ಪಿ. ಜವಳಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT