
ಧಾರವಾಡ: ‘ಒತ್ತಡದ ಬದುಕಿನಲ್ಲಿ ನಗೆ ಬಹು ಮುಖ್ಯ. ಅದು ಜೀವನದ ಜಂಜಡದಿಂದ ಕೆಲ ಹೊತ್ತಾದರೂ ನಮ್ಮನ್ನು ಹಗುರಗೊಳಸುತ್ತದೆ’ ಎಂದು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹಿರಿಯ ಕಲಾವಿದ ಎಲ್.ಜಿ.ದೇವಾಂಗಮಠ ನಗೆ ನಾಟಕೋತ್ಸವ ಉದ್ಘಾಟಿಸಿ ಮಾತನಾಡಿ,‘ಬದಲಾದ ಸಂದರ್ಭದಲ್ಲಿ ಮನುಷ್ಯ ಅತ್ಯಂತ ಒತ್ತಡದಲ್ಲಿ ಬದುಕುತ್ತಿದ್ದಾನೆ. ಹೀಗಾಗಿಯೇ ಇಂದು ನಗೆ ನಾಟಕಗಳು, ನಗೆ ಹಬ್ಬದಂಥ ಕಾರ್ಯಕ್ರಮಗಳಿಗೆ ಬೇಡಿಕೆ ಹೆಚ್ಚುತ್ತಿದೆ. ನಾವು ನಗುವ ಮೂಲಕ ಸಮಾಜಕ್ಕೆ ನಗುವನ್ನು ಹಂಚುವ ಕೆಲಸವನ್ನು ಕಲಾವಿದರು ಮಾಡುತ್ತಿರುತ್ತಾರೆ. ಹೀಗೆ ಮಾಡುವ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ತಮ್ಮದೇ ಆದ ಕೊಡುಗೆ ನೀಡುತ್ತಾರೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ರಂಗಾಯಣ ನಿರ್ದೇಶಕ ಡಾ.ಪ್ರಕಾಶ ಗರುಡ ಮಾತ ನಾಡಿ, ‘ಜಾಗತಿಕ ರಂಗಭೂಮಿ ಸೇರಿ ದಂತೆ ಎಲ್ಲ ಪ್ರಕಾರದ ರಂಗಭೂಮಿ ಯಲ್ಲೂ ಹಾಸ್ಯಕ್ಕೆ ತನ್ನದೇ ಆದ ಮಹತ್ವದ ಸ್ಥಾನವಿದೆ. ಕನ್ನಡ ರಂಗಭೂಮಿಯಲ್ಲಿ ಹಾಸ್ಯಕ್ಕೆ ಅತ್ಯಂತ ಗಟ್ಟಿ ಬುನಾದಿ ಹಾಕಿದ್ದು ವೃತ್ತಿ ರಂಗಭೂಮಿ. ಹಿಂದೆ ಹಾಸ್ಯ ದೃಶ್ಯಗಳನ್ನು ನೋಡುವುದಕ್ಕಾಗಿಯೇ ಪ್ರೇಕ್ಷಕರು ನಾಟಕಗಳಿಗೆ ಬರುತ್ತಿದ್ದರು.
ಕಾಲಾನುಕ್ರಮದಲ್ಲಿ ವೃತ್ತಿ ಕಂಪೆನಿಗಳು ಹಾಸ್ಯದ ಪಾವಿತ್ರ್ಯ ಉಳಿಸಿಕೊಳ್ಳದ್ದರಿಂದಾಗಿ ಅದರ ಮಹತ್ವ ಕಡಿಮೆಯಾಯಿತು’ ಎಂದರು.
‘ಹವ್ಯಾಸಿ ರಂಗಭೂಮಿ ಹಾಸ್ಯ ರಸಕ್ಕೆ ಹೆಚ್ಚಿನ ಮಹತ್ವ ನೀಡಲಿಲ್ಲ. ಅದು ಪ್ರಯೋಗಶೀಲತೆಯತ್ತು ಹೆಚ್ಚು ಗಮನ ನೀಡಿತು. ಇಷ್ಟಾಗಿಯೂ ಕನ್ನಡ ರಂಗಭೂಮಿಯಲ್ಲಿ ಹಾಸ್ಯವೇ ಪ್ರಧಾನವಾಗಿರುವ ಮತ್ತು ಹಾಸ್ಯ, ವಿಡಂಬನೆಯ ಮೂಲಕ ಬದುಕಿನ ಸತ್ಯಗಳನ್ನು ಹೇಳುವ ಪ್ರಹಸನವೆಂಬ ಪ್ರಕಾರ ಹೆಚ್ಚು ಪ್ರಚಲಿತವಾಗಿದೆ’ ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ಡಾ.ಮಹೇಶ ಹೊರಕೇರಿ, ಬಿ.ವೈ,ವೈ.ನಾಯ್ಕ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.