ಹುಬ್ಬಳ್ಳಿ: ‘ಕೇವಲ ವಕೀಲರನ್ನು ಸೃಷ್ಟಿಸುವುದನ್ನು ಮಾತ್ರ ಉದ್ದೇಶವಾಗಿರಿಸಿಕೊಳ್ಳದೆ ಸುಸಂಸ್ಕೃತ ಭಾರತ ನಿರ್ಮಾಣಕ್ಕೆ ಕಾನೂನು ಶಿಕ್ಷಣ ನೆರವಾಗಬೇಕು’ ಎಂದು ಸುಪ್ರಿಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಹೇಳಿದರು.
ನವನಗರದ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ರಾಜ್ಯ ಉಚ್ಛ ಶಿಕ್ಷಣ ಮಂಡಳಿಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
‘ಕಾನೂನು ಶಿಕ್ಷಣ ಜನರ ಆಶೋತ್ತರಗಳಿಗೆ ಸ್ಪಂದಿಸಿ ಬದಲಾವಣೆಗಳಿಗೆ ಕಾರಣವಾಗಬೇಕು. ಸಂವಿಧಾನದ ಮೂಲ ಆಶಯಕ್ಕೆ ತಕ್ಕಂತೆ ಕಾರ್ಯಪ್ರವೃತ್ತವಾಗಬೇಕು. ಈ ಶತಮಾನದ ಹೊಸ ಸವಾಲುಗಳನ್ನು ಎದುರಿಸಲು ಮುಂದಾಗಬೇಕು. ಕಾನೂನು ಶಿಕ್ಷಕರು ಸಮಾಜದ ಬೇರೆ ಬೇರೆ ಕ್ಷೇತ್ರಗಳೊಂದಿಗೆ ಸಮಾಲೋಚಿಸಿ ಸುಧಾರಣೆಗೆ ತಕ್ಕ ಸೂತ್ರಗಳನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ಸಂಸ್ಥಾಪಕ ಕುಲಪತಿ ಪ್ರೊ. ಎನ್. ಆರ್. ಮಾಧವ ಮೆನನ್, ಉಚಿತ ಮತ್ತು ಕಡ್ಡಾಯ ಶಿಕ್ಷಣದ ಉಲ್ಲೇಖ ಸಂವಿಧಾನದಲ್ಲೇ ಇದ್ದರೂ ಅದನ್ನು ಜಾರಿಗೊಳಿಸಲು ರಾಜಕಾರಣಿಗಳು ಒಲವು ತೋರಿಸದ ಕಾರಣ ದೇಶ ಇನ್ನೂ ಸಂಪೂರ್ಣ ಸಾಕ್ಷರತೆ ಸಾಧಿಸುವಲ್ಲಿ ಯಶಸ್ವಿಯಾಗಲಿಲ್ಲ, ಇದರಿಂದ ಎಲ್ಲ ವ್ಯವಸ್ಥೆಗಳ ಮೇಲೆ ದುಷ್ಪರಿಣಾಮ ಉಂಟಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾನೂನು ವಿವಿ ಕುಲಪತಿ ಪ್ರೊ. ಟಿ.ಆರ್.ಸುಬ್ರಹ್ಮಣ್ಯ ಮಾತನಾಡಿ ಕಾನೂನು ಶಿಕ್ಷಣದ ಸುಧಾರಣೆಯಲ್ಲಿ ಪ್ರತಿಯೊಬ್ಬರೂ ತೊಡಗಿಸಿಕೊಳ್ಳಬೇಕು ಎಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಕೋಲ್ಕತ್ತದ ಎನ್‌ಯುಜೆಎಸ್‌ನ ಕುಲಪತಿ ಪ್ರೊ. ಪಿ. ಈಶ್ವರ ಭಟ್, ಬೆಂಗಳೂರು ಎನ್ಎಲ್ಎಸ್ಐಯು ಕುಲಪತಿ ಆರ್. ವೆಂಕಟರಾವ್, ಕಾನೂನು ವಿವಿ ಕುಲಸಚಿವರಾದ ಟಿ. ವಿ. ಮಂಜುನಾಥ, ಡಾ. ಬಿ.ಎಸ್. ರೆಡ್ಡಿ, ಡೀನ್ ಮತ್ತು ಕಾನೂನು ಶಾಲೆಯ ನಿರ್ದೇಶಕ ಡಾ. ಸಿ.ಎಸ್.ಪಾಟೀಲ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.