ADVERTISEMENT

‘ಖಾದಿ ಕಾಯಕದಲ್ಲಿ ಮಹಿಳೆಯರು ತೊಡಗಿಸಿಕೊಳ್ಳಿ’

ಖಾದಿ ಗ್ರಾಮೋದ್ಯೋಗ ಸಂಘ: ಗಣಕೀಕೃತ ವ್ಯವಸ್ಥೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 7:52 IST
Last Updated 4 ಡಿಸೆಂಬರ್ 2013, 7:52 IST

ಹುಬ್ಬಳ್ಳಿ: ‘ಮಹಿಳೆಯರು ಮನೆಗಳಲ್ಲಿಯೇ ತಮ್ಮ ಬಿಡುವಿನ ವೇಳೆಯಲ್ಲಿ ಖಾದಿ ನೂಲುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದುವುದರ ಜೊತೆಗೆ ಖಾದಿ ಕ್ಷೇತ್ರವನ್ನೂ ಬೆಳೆಸಬೇಕು’ ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿ ಅಧ್ಯಕ್ಷ ಪಾಟೀಲ ಪುಟ್ಟಪ್ಪ ಸಲಹೆ ನೀಡಿದರು.

ಬೆಂಗೇರಿಯಲ್ಲಿನ ಕರ್ನಾಟಕ ಖಾದಿ ಗ್ರಾಮೋ­ದ್ಯೋಗ ಸಂಯುಕ್ತ ಸಂಘದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ‘ಗಾಂಧಿ ಬೇರು ಜಾಗತಿಕ ಮೇರು’ ಯೋಜನೆಯ ಅಡಿ ಸಂಪೂರ್ಣ ಗಣಕೀಕೃತ ವ್ಯವಸ್ಥೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇವತ್ತು ಸುಧಾರಿತ ತಂತ್ರಜ್ಞಾನವುಳ್ಳ ಯಂತ್ರಗಳನ್ನು ಬಳಸಿಕೊಂಡು ಮನೆಯಲ್ಲಿಯೇ ಖಾದಿ ತಯಾರಿಸಬಹು­ದಾಗಿದೆ. ಮಹಿಳೆಯರು ಈ ಅವಕಾಶವನ್ನು ಬಳಸಿಕೊಳ್ಳಬೇಕು. ಬೆಂಗೇರಿಯ ಖಾದಿ ಸಂಘವು ದೇಶದಲ್ಲಿಯೇ ಮಾದರಿ ಆಗಬೇಕು ಎಂಬುದು ನಮ್ಮ ಆಶಯ. ಈ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮ ಹಮ್ಮಿ­ಕೊಳ್ಳ­ಲಾ­ಗುತ್ತಿದೆ. ಖಾದಿ ನೂಲುವವರಿಗೆ ಕನಿಷ್ಠ ₨10,­000 ವೇತನ ನೀಡಲು ಪ್ರಯತ್ನ ನಡೆದಿದೆ ಎಂದರು.

ಮುಖ್ಯಮಂತ್ರಿ ಆಗಮನ: ರಾಷ್ಟ್ರಧ್ವಜ ಭವನ ನಿರ್ಮಾಣಕ್ಕೆ ಈ ತಿಂಗಳ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬೆಂಗೇರಿಯ ಖಾದಿ ಸಂಘವು ಮುಂಬರುವ ವರ್ಷ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ರಾಷ್ಟ್ರಪತಿಗಳನ್ನು ಕೋರಲಾಗುವುದು ಎಂದು ಅವರು ತಿಳಿಸಿದರು. 

ತೆರಿಗೆ ವಿನಾಯ್ತಿಗೆ ಮನವಿ:  ‘ಕರ್ನಾಟಕ ವಿದ್ಯಾವ­ರ್ಧಕ ಸಂಘ, ಗಾಂಧಿಭವನ ಮೊದಲಾದ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ನೀಡಿರುವಂತೆ ಬೆಂಗೇರಿ ಖಾದಿ ಗ್ರಾಮೋದ್ಯೋಗ ಸಂಘಕ್ಕೂ ತೆರಿಗೆಯಿಂದ ವಿನಾಯ್ತಿ ನೀಡಬೇಕು’ ಎಂದು ಕೋರಿ ಆಡಳಿತ ಮಂಡಳಿ ಸದಸ್ಯರು ಪಾಲಿಕೆ ಆಯುಕ್ತ ರಮಣದೀಪ್‌ ಚೌಧರಿ ಅವರಿಗೆ ಮನವಿ ಸಲ್ಲಿಸಿದರು. ಈ ಕುರಿತು ಪರಿಶೀಲನೆ ನಡೆಸಿ ಅಗತ್ಯ ನೆರವು ಒದಗಿಸು­ವುದಾಗಿ ಆಯುಕ್ತರು ಭರವಸೆ ನೀಡಿದರು.

ಸಂಘದ ಕಾರ್ಯದರ್ಶಿ ಎಚ್‌.ವಿ. ಅಂಟಿನ, ಕಾಂಗ್ರೆಸ್‌ ಮುಖಂಡ ಮಹೇಂದ್ರ ಸಿಂಘಿ, ಪಾಲಿಕೆ ಸದಸ್ಯ ಬೀರಪ್ಪ ಖಂಡೇಕರ, ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘಗಳ ಸಲಹಾ ಸಮಿತಿಯ ಉಮೇಶ ಬಳಿಗಾರ, ಆಡಳಿತ ಮಂಡಳಿ ಸದಸ್ಯ ಎನ್‌.ಕೆ. ಕಾಗಿನೆಲ್ಲಿ, ಮನೋಜ ಪಾಟೀಲ, ರಮೇಶ ಕುಲಗೋಡ, ಅಕ್ಕಮಹಾದೇವಿ ಮಾಗಡಿ, ಆರ್.ಆರ್‌. ಹೊರಟ್ಟಿ ಇತರರು ಹಾಜರಿದ್ದರು.

ಹಿರೇಮಠ ಬೆಂಬಲಕ್ಕೆ ಪಾಪು: (ಹುಬ್ಬಳ್ಳಿ ವರದಿ): ‘ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ವಿರುದ್ಧ ಕಾಂಗ್ರೆಸ್‌ ಶಾಸಕ ಕೆ.ಆರ್‌. ರಮೇಶಕುಮಾರ್‌ ಅವರು ಹಕ್ಕುಚ್ಯುತಿ ಮಂಡಿಸಿರುವುದು ಸರಿಯಲ್ಲ. ಇದರಿಂದ ಶಾಸಕರೇ ಪೇಚಿಗೆ ಸಿಲುಕಲಿದ್ದಾರೆ’ ಎಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅಭಿಪ್ರಾಯಪಟ್ಟರು.

ನಗರದಲ್ಲಿ ಮಂಗಳವಾರ ಪತ್ರಕರ್ತರ ಜೊತೆ ಮಾತನಾಡಿದ ಪಾಪು ‘ಹಿರೇಮಠ ಅವರು ದಾಖಲೆಗಳ ಸಮೇತವಾಗಿಯೇ ಆರೋಪ ಮಾಡಿದ್ದಾರೆ. ಭೂ ಕಬಳಕೆಯಾಗಿರುವುದು ಕಾರ್ಯಪಡೆ ವರದಿಯಲ್ಲೂ ಉಲ್ಲೇಖವಾಗಿದೆ. ಹೀಗಿರುವಾಗ ರಮೇಶ್‌ಕುಮಾರ್‌ ಹಕ್ಕುಚ್ಯುತಿ ಮಂಡಿಸುವ ಮೂಲಕ ತಾವೇ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಹಿರೇಮಠ ಅವರಿಗೆ ಈಗ ಪ್ರತಿವಾದ ಮಂಡಿಸುವ ಅವಕಾಶ ಸಿಗುವುದರಿಂದ ಅವರು ಇನ್ನಷ್ಟು ದಾಖಲೆಗಳ ಸಮೇತ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲಿದ್ದು, ಶಾಸಕರು ಪೇಚಿಗೆ ಸಿಲುಕಬೇಕಾಗುವುದು’ ಎಂದರು.

ಎಸ್‌.ಆರ್‌. ಹಿರೇಮಠ ಅವರ ಹಣದ ಮೂಲಗಳ ಬಗ್ಗೆ ಸರ್ಕಾರವು ತನಿಖೆಗೆ ಆದೇಶಿಸಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪಾಪು, ಅದರಿಂದ ಏನೂ ಪ್ರಯೋಜನ ಆಗದು ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.