ADVERTISEMENT

‘ದೊಡ್ಡ ಸಾಹಿತಿಗಳಿಂದ ಮಾರ್ಗದರ್ಶನ ಅಲಭ್ಯ’

​ಪ್ರಜಾವಾಣಿ ವಾರ್ತೆ
Published 2 ಜೂನ್ 2014, 10:52 IST
Last Updated 2 ಜೂನ್ 2014, 10:52 IST

ಸಿದ್ದಾಪುರ: ‘ಹಲವು ದಶಕಗಳ ಕಾಲ ಬರವಣಿಗೆಯಲ್ಲಿ ತೊಡಗಿಕೊಂಡ ಗೌರೀಶ ಕಾಯ್ಕಿಣಿ ಅವರ ಚೈತನ್ಯ ಅಗಾಧವಾದುದಾಗಿತ್ತು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಭಿಪ್ರಾಯಪಟ್ಟರು

ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಪಟ್ಟಣದ ಸಂಸ್ಕೃತಿ ಸಂಪದದ  ಆಶ್ರಯದಲ್ಲಿ ಸ್ಥಳೀಯ ಶಂಕರ ಮಠದಲ್ಲಿ ಭಾನುವಾರ ಏರ್ಪಡಿಸಿದ್ದ ಗೌರೀಶ ಕಾಯ್ಕಿಣಿ ಜನ್ಮ ಶತಮಾನೋತ್ಸವ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂಗೀತದಲ್ಲಿ ಅಥವಾ ನೃತ್ಯದಲ್ಲಿ ಪ್ರತಿಯೊಬ್ಬ ಕಲಾವಿದನೂ ಒಬ್ಬನಾದರೂ ಶಿಷ್ಯನನ್ನು ಬೆಳೆಸುವ ಪರಂಪರೆ ಕಂಡು ಬರುತ್ತಿದೆ. ಆದರೆ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ದೊಡ್ಡ ಸಾಹಿತಿಗಳು ಯುವಕರಿಗೆ ಮಾರ್ಗದರ್ಶನ ಮಾಡುತ್ತಿಲ್ಲ. ಅವರಿಗೆ ಯುವ ಜನಾಂಗದ ಬಗ್ಗೆ ಕಾಳಜಿಯಿಲ್ಲ. ಆದರೆ ಗೌರೀಶ ಕಾಯ್ಕಿಣಿ ಅಂತವರಾಗಿರಲಿಲ್ಲ. ಅವರು ನೀರೆರೆದ ಸಸಿಗಳು ನಾಡಿನ ದಿಗ್ಗಜ ಸಾಹಿತಿಗಳಾಗಿದ್ದಾರೆ’ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ‘ಗೌರೀಶ ಕಾಯ್ಕಿಣಿ ಗೋಕರ್ಣದ ಸಾಹಿತ್ಯ ಸಮುದ್ರವಾಗಿದ್ದರು. ಸಮುದ್ರದೊಳಗೆ ಏನಿದೆ ಎಂದು ಹೇಳುವುದು ಸಾಧ್ಯವಿಲ್ಲವೋ ಹಾಗೆಯೆ ಗೌರೀಶರ ಚಿಂತನೆಯನ್ನು ಅಂದಾಜು ಮಾಡುವುದು ಸಾಧ್ಯವಿಲ್ಲ. ಯಾವುದೇ ಸಂಗತಿಯನ್ನು ಪ್ರಶ್ನೆ ಮಾಡದೇ ಗೌರೀಶರು ಒಪ್ಪುತ್ತಿರಲಿಲ್ಲ.ಗೌರೀಶರಿಗೆ ಸಿಗಬೇಕಾದಷ್ಟು ಪ್ರಸಿದ್ಧಿ ಸಿಗಲಿಲ್ಲ’ ಎಂದರು.

‘ಗೌರೀಶರ ಬರಹಗಳು 10ಸಂಪುಟದಲ್ಲಿ ಬಂದ ನಂತರವೂ ಅವರ ಬಿಡಿ ಲೇಖನಗಳು ಹಾಗೆಯೆ ಉಳಿದವು. ವಿಚಾರವಾದ ಎಂದರೆ ಇಂದಿಗೂ ಗೌರೀಶರ ವಿಚಾರವಾದದ ಪುಸ್ತಕವನ್ನು ನೋಡಬೇಕು’ ಎಂದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಉಪಸ್ಥಿತರಿದ್ದರು.

ಸಾಹಿತ್ಯ ಅಕಾಡೆಮಿಯ ರಜಿಸ್ಟ್ರಾರ್ ಸಿ.ಎಚ್‌.ಭಾಗ್ಯ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ಧರಣೇಂದ್ರ ಕುರಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯಂತ ಕಾಯ್ಕಿಣಿ ನೆನಪಿನ ಕಾಣಿಕೆ ನೀಡಿದರು. ಗಣಪತಿ ಹಿತ್ಲಕೈ ವಂದಿಸಿದರು. ತಾರಾ ಹೆಗಡೆ ನಿರೂಪಿಸಿದರು.
‘ಶಾಸ್ತ್ರೀಯ ವಿಚಾರವಾದ’: ‘ಗೌರೀಶರು ವಿಚಾರವಾದವನ್ನು ಶಾಸ್ತ್ರೀಯವಾಗಿ ಅಧ್ಯಯನ ಮಾಡಿ, ಬರಹ ಗಳನ್ನು ನೀಡಿದ್ದಾರೆ ಎಂದು ಸಾಹಿತಿ ಆರ್.ಡಿ. ಹೆಗಡೆ ಆಲ್ಮನೆ ಅಭಿಪ್ರಾಯಪಟ್ಟರು.

ಗೌರೀಶ ಕಾಯ್ಕಿಣಿ ಜನ್ಮ ಶತಮಾನೋತ್ಸವದ ಗೋಷ್ಠಿಯಲ್ಲಿ ‘ಗೌರೀಶರ ವಿಚಾರವಾದ’ ಕುರಿತು ಅವರು ಪ್ರಬಂಧ ಮಂಡಿಸಿ, ಮಾತನಾಡಿದರು.

‘ಗೌರೀಶರು ಒಂದು ಕಾಲಘಟ್ಟದಲ್ಲಿ ಬರೆದರೂ ವಿಚಾರವಾದಿಯಾಗಿ ಎಲ್ಲ ಕಾಲಕ್ಕೂ ಪ್ರತಿಕ್ರಿಯಿಸಿದ್ದಾರೆ. ಗೌರೀಶರ ಸಾಹಿತ್ಯ ವ್ಯಾಪಕವಾಗಿದ್ದರೂ ಅವರು ಪ್ರಮುಖವಾಗಿ ವೈಚಾರಿಕ ಬರಹಗಾರರು’ ಎಂದರು.

‘ಗೌರೀಶರ ಕಾವ್ಯ ಚಿಂತನೆ’ ಕುರಿತು ಡಾ.ವಿ.ಎನ್‌.ಹೆಗಡೆ ಮತ್ತು ‘ಗೌರೀಶರ ರೂಪಕಗಳು, ನಾಟಕಗಳು’ ಕುರಿತು ಡಾ.ಶಾಲಿನಿ ರಘುನಾಥ ಪ್ರಬಂಧ ಮಂಡಿಸಿದರು.

ಗೌರೀಶರ ನೆನಪು ಜಂಗಮವಾಗಲಿ: ಕಾಯ್ಕಿಣಿ  
ಸಿದ್ದಾಪುರ:
ಗೌರೀಶ ಕಾಯ್ಕಿಣಿ ಅವರ ನೆನಪುಗಳು ಸ್ಥಾವರವಾಗುವುದಕ್ಕಿಂತ ಜಂಗಮವಾಗಬೇಕು ಎಂದು ಕವಿ ಜಯಂತ ಕಾಯ್ಕಿಣಿ ಹೇಳಿದರು.

ಗೌರೀಶ ಕಾಯ್ಕಿಣಿ ಜನ್ಮ ಶತಮಾನೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಗೌರೀಶರು ಪಾಂಡಿತ್ಯದ ಶುಷ್ಕ ಜೀವನದಲ್ಲಿ ಇರದೇ, ಬದುಕಿನಲ್ಲಿ ಬೆರೆತುಕೊಂಡಿದ್ದರು.ಓದು ಅವರ ದೊಡ್ಡ ಹವ್ಯಾಸವಾಗಿತ್ತು.ಜನಸೇವಕ ಪತ್ರಿಕೆಯಲ್ಲಿ ಯಾವುದೂ ಪ್ರತಿಫಲಾಪೇಕ್ಷೆ ಇಲ್ಲದೇ ಅವರು 18 ವರ್ಷಗಳಷ್ಟು ಕಾಲ ಅಂಕಣಗಳನ್ನು ಬರೆದದ್ದು ಸಾಮಾನ್ಯ ಸಂಗತಿಯಲ್ಲ’ ಎಂದರು.

ಧಾರವಾಡದ ಕರ್ನಾಟಕ ವಿವಿಯ ಕನ್ನಡ ಅಧ್ಯಯನ ಪೀಠದ ಅಧ್ಯಕ್ಷೆ ಡಾ.ಶಾಂತಾ ಇಮ್ರಾಪೂರ  ಮಾತನಾಡಿ, ‘ಕಳೆದ 100 ವರ್ಷದ ಸಾಹಿತ್ಯ ಚರಿತ್ರೆಯನ್ನು ಕವಿಗಳು,ವಿಚಾರವಂತರು ಸೇರಿದಂತೆ ಎಲ್ಲರೂ ಶ್ರೀಮಂತಗೊಳಿಸಿದ್ದಾರೆ’ ಎಂದರು.

‘ಗೌರೀಶರ ಸಾಹಿತ್ಯ ಉಪೇಕ್ಷೆಗೆ ಒಳಗಾಗಿದೆ. ಗೌರೀಶರ ಐದು ಸಾವಿರ ಪುಟಕ್ಕಿಂತಲೂ ಹೆಚ್ಚು ಸಾಹಿತ್ಯ ಸಮಗ್ರವಾಗಿ ಸಿಗುತ್ತಿರುವುದು ದೊಡ್ಡ ಸಾಧನೆ. ಇದರಿಂದ ಹೊಸ ಅಧ್ಯಯನ ನಡೆಸುವ ಜವಾಬ್ದಾರಿ ನಮ್ಮ ಮೇಲಿದೆ. ಶಂಬಾ ಅಥವಾ ಗೌರೀಶ ಕಾಯ್ಕಿಣಿ ಅವರಂತವರ ಸಾಹಿತ್ಯದ ಕಡೆಗೆ ಯಾಕೆ(ಸಾಹಿತಿಗಳು) ಮನಸ್ಸು  ಕೊಡುತ್ತಿಲ್ಲ’ ಎಂದು ಪ್ರಶ್ನಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ, ಸದಸ್ಯ ಧರಣೇಂದ್ರ ಕುರಕುರಿ ಉಪಸ್ಥಿತರಿದ್ದರು. ಶಂಕರ ಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು.

ಎಸ್‌.ಕೆ.ಕೊಪ್ಪ ಸ್ವಾಗತಿಸಿದರು. ಟಿ.ಎಂ.ರಮೇಶ ವಂದಿಸಿದರು. ತಾರಾ ಹೆಗಡೆ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT