ADVERTISEMENT

‘ನದಿಗಳ ಜೋಡಣೆಯಿಂದ ಬಹೂಪಯೋಗ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 5:05 IST
Last Updated 17 ಸೆಪ್ಟೆಂಬರ್ 2013, 5:05 IST

ಹುಬ್ಬಳ್ಳಿ: ‘ದೇಶ ಹಾಗೂ ರಾಜ್ಯದಲ್ಲಿ ನದಿ ಜೋಡಣೆ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಂಡರೆ ಕುಡಿಯುವ ನೀರಿನ ಲಭ್ಯತೆ ಸೇರಿದಂತೆ ಅನೇಕ ರೀತಿಯ ಪ್ರಯೋಜನಗಳು ಆಗಲಿವೆ’ ಎಂದು ಜಲ ಸಂಪನ್ಮೂಲ ಎಂಜಿನಿಯರ್‌ ಹಾಗೂ ಮಹದಾಯಿ ನದಿ ಜೋಡಣಾ ಯೋಜನೆ ಮಾಸ್ಟರ್‌ ಪ್ಲಾನ್ ಸಮಿತಿ ಸದಸ್ಯ ಎಸ್‌.ಬಿ.ಕೊಯಿಮತ್ತೂರ ಅಭಿಪ್ರಾಯಪಟ್ಟರು.

ಗೋಕುಲ ರಸ್ತೆಯ ಕೆಎಲ್‌ಇ ತಂತ್ರಜ್ಞಾನ ಸಂಸ್ಥೆಯಲ್ಲಿ ಸೋಮವಾರ ನಡೆದ ಎಂಜಿನಿಯರುಗಳ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಹಿಮಾಲಯ ತಪ್ಪಲಿನ ನದಿಗಳಿಂದ ವಿವಿಧ ಕಾರಣಗಳಿಂದ ಉಂಟಾಗುವ ಪ್ರವಾಹದಿಂದಾಗಿ ಭಾರಿ ಹಾನಿ ಉಂಟಾಗುತ್ತದೆ. ಸಾಕಷ್ಟು ನೀರು ಪೋಲಾಗಿಯೂ ಹೋಗುತ್ತದೆ. ಇದನ್ನು ತಪ್ಪಿಸಲು ಸುಮಾರು ₨ ಆರು ಲಕ್ಷ ಕೋಟಿಗೂ ಹೆಚ್ಚು ವೆಚ್ಚದಲ್ಲಿ ನದಿ ಜೋಡಣೆಯನ್ನು ಮಾಡುವ ಯೋಜನೆಯಿಂದ ದೇಶದ ವಿವಿಧ ಪ್ರದೇಶಗಳಲ್ಲಿ ನೀರಿನ ಬರ ನೀಗಿಸಬಹುದಾಗಿದೆ. ನದಿ ಜೋಡಣೆ ಯೋಜನೆಯಲ್ಲಿ ರಾಜ್ಯದ ನೇತ್ರಾವತಿ ಮತ್ತು ಬೇಡ್ತಿ ನದಿಗಳಿಗೆ ತಿರುವ ನೀಡುವ ಪ್ರಸ್ತಾಪವೂ ಇದೆ’ ಇದರಿಂದ ರಾಜ್ಯದಲ್ಲೂ ಕುಡಿಯುವ ನೀರು ಸಮೃದ್ಧವಾಗಲಿದೆ’ ಎಂದು ಅವರು ಹೇಳಿದರು.

2025ರ ವೇಳೆ ಪ್ರಪಂಚದಲ್ಲಿ ನೀರಿನ ಬರ ತಿವ್ರವಾಗಿ ಕಾಡಲಿದೆ ಎಂದು ವರದಿಯೊಂದು ಹೇಳಿದೆ. ಇಂಥ ಪರಿಸ್ಥಿತಿಯನ್ನು ಎದುರಿಸಲು ಇಂದೇ ಸಜ್ಜಾಗಬೇಕಾಗಿದೆ. ನೀರನ್ನು ವೈಜ್ಞಾನಿಕವಾಗಿ ಬಳಕೆ ಮಾಡುವ ವಿಧಾನಗಳನ್ನು ಕಂಡುಕೊಳ್ಳಬೇಕಾಗಿದೆ. ಪೋಲಾಗುವ ನೀರನ್ನು ಹಿಡಿದಿಡಲು ಕಲಿಯಬೇ­ಕಾಗಿದೆ ಎಂದು ಹೇಳಿದ ಕೊಯಿಮತ್ತೂರ, ಮಹಾ­ದಾಯಿ ನದಿ ಜೋಡಣೆಯಿಂದ ಹುಬ್ಬಳ್ಳಿ–ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಅಭಿಪ್ರಾಯಪಟ್ಟರು.

‘ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಸರ್‌.ಎಂ.ವಿಶ್ವೇಶ್ವರಯ್ಯ ಅವರು ಅನೇಕ ಪ್ರಯೋಗಗಳನ್ನು ಮಾಡಿದ್ದಾರೆ. ನೆರೆ ತಡೆಗೆ ಅವರು ಕಂಡುಕೊಂಡ ಮಾರ್ಗಗಗಳು ಗಮನಾರ್ಹ. ಕೈಗಾರಿಕೀಕರಣದ ಬಗ್ಗೆಯೂ ಆಸಕ್ತಿ ಹೊಂದಿದ್ದ ಅವರು ಇಡೀ ದೇಶಕ್ಕೆ ಕೈಗಾರಿಕಾ ಕ್ರಾಂತಿಯ ಕರೆ ನೀಡಿದ್ದರು. ರಾಜ್ಯದ ಅಭಿವೃದ್ಧಿಯ ಮೂಲಕ ದೇಶದ ಅಭಿವೃದ್ಧಿ ಸಾಧ್ಯ ಎಂದು ಅವರು ನಂಬಿದ್ದರು. ಶಿಕ್ಷಣ ಕ್ಷೇತ್ರದಲ್ಲೂ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದ್ದಾರೆ’ ಎಂದು ಕೊಯಿಮತ್ತೂರ ಹೇಳಿದರು.  

ಎಂಜಿನಿಯರಿಂಗ್‌ ಕ್ಷೇತ್ರಕ್ಕೆ ಪ್ರವೇಶಿಸಲಿರುವ ಯುವಕರು ಕಲಿತ ವಿದ್ಯೆಯನ್ನು ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಬಳಸಿಕೊಳ್ಳಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

ಸಂಸ್ಥೆಯ ಪ್ರಾಚಾರ್ಯ ಡಾ. ಬಿ.ಎಸ್‌.ಅನಾಮಿ ಅಧ್ಯಕ್ಷತೆ ವಹಿಸಿದ್ದರು. ಶೈಕ್ಷಣಿಕ ವಿಭಾಗದ ಡೀನ್‌ ಆರ್‌.ಆರ್‌.ಬುರಬುರೆ ಹಾಗೂ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಪ್ರೊ. ಎಸ್‌.ಜಿ.ಜೋಶಿ ಉಪಸ್ಥಿತರಿದ್ದರು.

ಎಂಜಿನಿಯರಿಂಗ್‌ ದಿನಾಚರಣೆಯ ಬಗ್ಗೆ ಮಹಾಂತೇಶ ಸಜ್ಜನರ ಮಾತನಾಡಿದರು. ಮಧುಮತಿ ಅತಿಥಿಗಳ ಪರಿಚಯ ಮಾಡಿದರು. ಶ್ವೇತಾ ನಾಡಕರ್ಣಿ ಹಾಗೂ ಶ್ವೇತಾ ಭಟ್‌ ನಿರೂಪಿಸಿದರು.

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ
ಸಾಗರ: ಸಾಗರ ಫೊಟೋಗ್ರಫಿಕ್‌ ಸೊಸೈಟಿಯು ರಾಜ್ಯಮಟ್ಟದ 13ನೇ ಛಾಯಾಚಿತ್ರ ಸ್ಪರ್ಧೆ ಏರ್ಪಡಿಸಿದ್ದು, 35 ವರ್ಷದೊಳಗಿನ ಛಾಯಾಗ್ರಾಹಕರು ಸ್ಪರ್ಧೆಗೆ ಛಾಯಾಚಿತ್ರ ಕಳುಹಿಸಲು ಕೋರಲಾಗಿದೆ. ಅದರೊಂದಿಗೆ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ಎರಡು ವಿಭಾಗಗಳಿವೆ. ‘ಗ್ರಾಮೀಣ ಜೀವನ’ ಹಾಗೂ ‘ಸಂತೋಷದ ಕ್ಷಣ’ ವಿಷಯಕ್ಕೆ ಸಂಬಂಧಿಸಿದಂತಹ ಛಾಯಾಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ಒಂದೊಂದು ವಿಭಾಗದಲ್ಲಿ, 8X 12 ಇಂಚು ಅಳತೆಯ ಗರಿಷ್ಠ 4 ಛಾಯಾಚಿತ್ರಗಳನ್ನು ಕಳುಹಿಸ­ಬಹುದು.  ಯಾವುದೇ ಪ್ರವೇಶ ಶುಲ್ಕವಿಲ್ಲ. ಇದೇ 15 ಛಾಯಾಚಿತ್ರಗಳನ್ನು ಕಳುಹಿಸಲು ಕೊನೆಯ ದಿನ. ಹೆಚ್ಚಿನ ಮಾಹಿತಿಗೆ 08183–229243 ಹಾಗೂ 94802–80977 ಸಂಪರ್ಕಿಸಲು ಕೋರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.