ADVERTISEMENT

‘ನೃತ್ಯ ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 6:39 IST
Last Updated 2 ಜನವರಿ 2014, 6:39 IST

ಧಾರವಾಡ: ‘ರಾಜ್ಯದ ಕನ್ನಡ ಶಾಲೆಗಳಲ್ಲಿ ನೃತ್ಯ ಶಿಕ್ಷಕರನ್ನು ನೇಮಕ ಮಾಡಿಕೊಂಡರೆ ಮಕ್ಕಳಲ್ಲಿ ಏಕಾಗ್ರತೆ, ಶೈಕ್ಷಣಿಕ ಉನ್ನತಿ ಹಾಗೂ ಗುಣಮಟ್ಟದ ಕಲಿಕೆ ಹೆಚ್ಚಿಸಬಹುದಾಗಿದೆ’ ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾಭವನದಲ್ಲಿ ಗ್ರಾಮೀಣ ಅಭಿವೃದ್ಧಿ ಹಾಗೂ ಸಮೂಹ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಬಸವ ಜಯಂತಿ ಶತಮಾನೋತ್ಸವ–ವರ್ಷಾಚರಣೆ ಹಾಗೂ ಗುರಪ್ಪ ಬೆಲ್ಲದ ದತ್ತಿ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಚನ ವರ್ಷೋತ್ಸವ–ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಡಾ.ಬಸವರಾಜ ಮಲಶೆಟ್ಟಿ, ‘ನಮ್ಮ ದೇಸಿ ಮೂಲ ಕುಣಿತಗಳು ಪರಿಷ್ಕಾರಗೊಂಡು ನಾಟ್ಯಕ್ಷೇತ್ರ ಶ್ರೀಮಂತಗೊಂಡಿದೆ. ಕುಣಿತ ದುಡಿಯುವ ವರ್ಗದ ಕಲೆ. ಇಂದು ನಾಟ್ಯಕ್ಷೇತ್ರದ ಎಲ್ಲ ಆಯಾಮಗಳಲ್ಲೂ ಚಿಂತನೆ ನಡೆದಿದೆ. ವಚನಗಳನ್ನು ನೃತ್ಯದ ಮೂಲಕ ಅನುಭಾವ ಅರಿವಿಗೆ ತಂದುಕೊಡುವ ಪ್ರಯತ್ನ ಮೆಚ್ಚವಂತಹದ್ದು’  ಎಂದರು.

ಸಾನಿದ್ಯ ವಹಿಸಿದ್ದ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ, ‘ನಾಟ್ಯ ಶಿವತಾಂಡವದಿಂದ ಪ್ರಾರಂಭವಾಗಿದ್ದು, ಶಿವ ಪಾರ್ವತಿ ಅವರ ಒಡ್ಡೋಗಲದಲ್ಲಿ ನಾಟ್ಯದ ಅನುಭಾವವಾಗಿದೆ. ಹುಬ್ಬಳ್ಳಿ–-ಧಾರವಾಡ ನಗರ ಪ್ರದೇಶದಲ್ಲಿ ನಾಟ್ಯಕ್ಷೇತ್ರಕ್ಕೆ ಸರ್ಕಾರ ನಾಟ್ಯ ಭವನ ನಿರ್ಮಾಣ ಮಾಡಬೇಕು’ ಎಂದರು.

ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಣ್ಣ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಡಾ. ಶ್ರೀಶೈಲ ಹುದ್ದಾರ, ಹಿರಿಯ ಕವಿ ಡಾ.ಚೆನ್ನವೀರ ಕಣವಿ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಶಂಕರ ಹಲಗತ್ತಿ, ಕಿರಣ ಶಿಂಧೆ, ಕೃಷ್ಣ ಜೋಶಿ, ಪ್ರಶಾಂತ ಬೆಲ್ಲದ, ಮಹೇಶ ಬೆಲ್ಲದ ಇತರರು ಇದ್ದರು. ಪ್ರೊ.ಬಾಹುಬಲಿ ಜೈನರ ಪ್ರಾರ್ಥಿಸಿದರು. ಡಾ.ಗೌರಿ ಪಾಟೀಲ ಸ್ವಾಗತಿಸಿದರು. ಸುನೀಲ ಕುಲಕರ್ಣಿ ಪರಿಚಯಿಸಿದರು. ನೃತ್ಯ ಶಿಕ್ಷಕರನ್ನು ಸನ್ಮಾನಿಸಲಾಯಿತು. ಸುನೀಲ ಕುಲಕರ್ಣಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.