ADVERTISEMENT

‘ನೈತಿಕತೆ ಇದ್ದರೆ ರಾಜೀನಾಮೆ ಪಡೆಯಲಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 7:06 IST
Last Updated 25 ಸೆಪ್ಟೆಂಬರ್ 2013, 7:06 IST

ಹುಬ್ಬಳ್ಳಿ: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ಬದ್ಧತೆ ಇದ್ದಲ್ಲಿ ಗಣಿ ಅಕ್ರಮ­ದಲ್ಲಿ ಭಾಗಿಯಾಗಿರುವ ಸಚಿವ ಸಂತೋಷ್‌ ಲಾಡ್‌ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು’ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್‌.ಆರ್‌. ಹಿರೇಮಠ ಮಂಗಳವಾರ ಇಲ್ಲಿ ಒತ್ತಾಯಿಸಿದರು.

‘ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ಎಂ.ಎಲ್. ನಂ. 2290 ರಲ್ಲಿ ಗಣಿ­ಗಾರಿಕೆ ನಡೆಸುತ್ತಿರುವ ವಿ.ಎಸ್‌. ಲಾಡ್‌ ಅಂಡ್‌ ಸನ್ಸ್‌ ಕಂಪೆನಿಯಲ್ಲಿ ಸಚಿವ ಸಂತೋಷ್‌ ಲಾಡ್‌ ಕಾರ್ಯನಿರ್ವಾಹಕ ಪಾಲುದಾರ­ರಾಗಿರು­ವುದು ಸ್ಪಷ್ಟ. ಇದಕ್ಕಾಗಿ ಮಾಸಿಕ ₨ 9 ಲಕ್ಷ ವೇತನದ ಜೊತೆಗೆ, ಕಂಪೆನಿಯ ಒಟ್ಟು ಲಾಭದ ಶೇ 25ರಷ್ಟು ಪಾಲನ್ನು ಸಂತೋಷ್‌ ಪಡೆಯುತ್ತಿದ್ದಾರೆ. 2006 ಮಾರ್ಚ್‌ನಿಂದಲೂ ಅವರು ಈ ಹುದ್ದೆಯಲ್ಲಿದ್ದಾರೆ.

ಈ ಕಂಪೆನಿಯು 105.06 ಹೆಕ್ಟೇರ್‌ನಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ಪಡೆದಿದ್ದು, 30–40 ಎಕರೆ ಪ್ರದೇಶವನ್ನೂ ಅತಿಕ್ರಮಣ ಮಾಡಿದೆ. ಇಷ್ಟೆಲ್ಲಾ ದಾಖಲೆಗಳಿದ್ದರೂ ಸರ್ಕಾರ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ವರ್ಷಗಳ ಹಿಂದೆ ಬಳ್ಳಾರಿ­ಯಲ್ಲಿ ಗಣಿ ಅಕ್ರಮ ವಿರೋಧಿಸಿ ಪಾದಯಾತ್ರೆ ನಡೆಸಿದ್ದವರು ಇವರೇನಾ? ಎಂಬ ಅನುಮಾನ ಮೂಡುತ್ತಿದೆ. ಸರ್ಕಾರ ತನ್ನ ಜವಾ­ಬ್ದಾರಿ­­ಯಿಂದ ನುಣುಚಿಕೊಳ್ಳಲು ಯತ್ನಿಸುತ್ತಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.

ಲಾಡ್‌ ಕುರಿತು ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರ ಹೇಳಿಕೆಗೆ ಪ್ರತಿಕ್ರಿ­ಯಿಸಿದ ಅವರು ‘ಸುಪ್ರೀಂ ಕೋರ್ಟ್‌ ಆದೇಶದ ಅನ್ವಯ ಸರ್ಕಾರ 55 ಗಣಿ ಕಂಪೆನಿಗಳನ್ನು ‘ಬಿ’ ಯಿಂದ ‘ಸಿ’ ಕೆಟಗರಿಗೆ ವರ್ಗಾಯಿಸಿದೆ. ಈ ಆದೇಶದಲ್ಲಿನ 45ನೇ ಕಂಪೆನಿಯು ಯಾರಿಗೆ ಸೇರಿದ್ದು ಎಂಬುದು ಕಾನೂನು ಸಚಿವರಿಗೆ ತಿಳಿದಿಲ್ಲವೇ’ ಎಂದು ಪ್ರಶ್ನಿಸಿದರು. ­‘ಸಂತೋಷ್‌ ಲಾಡ್‌ ಅವರ ಗಣಿ ಅಕ್ರಮದ ಸಂಬಂಧ ತಾವು ರಾಜ್ಯ ಸರ್ಕಾರ. ಕಾಂಗ್ರೆಸ್‌ ಮುಖಂಡರೊಂದಿಗೆ ದಾಖಲೆ ಸಮೇತ ಚರ್ಚಿಸಲು ಸಿದ್ಧ. ಲಾಡ್‌ ಅವರನ್ನೂ ಸಭೆಗೆ ಆಹ್ವಾನಿಸಬೇಕು’ ಎಂದು ಸವಾಲು ಹಾಕಿದರು.

‘ರೆಡ್ಡಿ ಬಿಡುಗಡೆ ಕನಸು’
ಆಂಧ್ರಪ್ರದೇಶದ ವೈಎಸ್‌ಆರ್ ಕಾಂಗ್ರೆಸ್‌ ಮುಖಂಡ ಜಗನ್‌ಮೋಹನ್‌ ರೆಡ್ಡಿ ಬಿಡುಗಡೆ ಹಾಗೂ ಸಿಬಿಐ ನಡೆ ಕುರಿತು ಪ್ರತಿಕ್ರಿಯಿಸಿದ ಹಿರೇಮಠ ‘ಜಗನ್‌ಮೋಹನ್‌ ಹಾಗೂ ಜನಾರ್ದನ ರೆಡ್ಡಿ ಪ್ರಕರಣಗಳು ಭಿನ್ನ. ಜನಾರ್ದನ ರೆಡ್ಡಿ ವಿರುದ್ಧ ಸದ್ಯ ಸಿಬಿಐ 29 ಪ್ರಕರಣ ದಾಖಲಿಸಿದ್ದು, ಇವುಗಳ ವಿಚಾರಣೆಗೆ ವರ್ಷಗಳು ಬೇಕಾಗುತ್ತವೆ. ಹೀಗಾಗಿ ರೆಡ್ಡಿ ಬಿಡುಗಡೆ ಸದ್ಯಕ್ಕೆ ಅಸಾಧ್ಯ’ ಎಂದರು.

ಿಮ್ಖಾನಾ ಮೈದಾನ ಸರ್ಕಾರದ ವಶಕ್ಕೆ ಪಡೆಯಿರಿ’
‘ದೇಶಪಾಂಡೆ ನಗರದ ಜಿಮ್ಖಾನ ಮೈದಾನದಲ್ಲಿ ರಿಕ್ರಿ­ಯೇಷನ್‌ ಕ್ಲಬ್‌ನಿಂದ ಕಾನೂನಿಗೆ ವಿರುದ್ಧವಾಗಿ   ಕಟ್ಟಡ ನಿರ್ಮಾಣವಾಗಿರುವುದು ಸ್ಪಷ್ಟ. ಸರ್ಕಾರವು ಇಡೀ ಮೈದಾನವನ್ನು ತನ್ನ ವಶಕ್ಕೆ ಪಡೆಯಬೇಕು’ ಎಂದು ಎಸ್‌.ಆರ್‌. ಹಿರೇಮಠ ಒತ್ತಾಯಿಸಿದರು.

‘ಕ್ಲಬ್‌ ಸಂಬಂಧ ವರದಿ ತರಿಸಿಕೊಂಡು ಪರಿಶೀಲಿಸು­ವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್‌ ಹೇಳಿದ್ದರು. ಆದರೆ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಲಾಡ್‌ಗೆ ಜನರ ಬಗ್ಗೆ ಕಾಳಜಿ ಇದ್ದರೆ ಸರ್ಕಾ­ರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು’ ಎಂದು ಆಗ್ರಹಿಸಿದರು. ‘ಸರ್ಕಾರವು ಕ್ಲಬ್‌ ಸಂಬಂಧ ತನ್ನ ನಿಲುವು ತಿಳಿಸುವ ಮುನ್ನವೇ ರಿಕ್ರಿಯೇಶನ್‌ ಕ್ಲಬ್‌ನ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿರುವುದು ಸರಿ­ಯಲ್ಲ. ಅವರಿಗೆ ನೈತಿಕತೆ ಇದ್ದಲ್ಲಿ ತಾವಾಗಿಯೇ ಸಾರ್ವ­ಜನಿಕ ಆಸ್ತಿಯನ್ನು ಸರ್ಕಾರದ ವಶಕ್ಕೆ ನೀಡಬೇಕು’ ಎಂದರು.

‘ಕಿಮ್ಸ್‌ನ ಗುತ್ತಿಗೆ ನೌಕರರ ಕಷ್ಟಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ್ದ ಸಚಿವ ಲಾಡ್‌, ಶಾಸಕರೊಬ್ಬರ ಮನೆಯಲ್ಲಿ ಗುತ್ತಿಗೆದಾರರ ಜೊತೆ ಮಾತುಕತೆ ನಡೆಸಿ­ದ್ದಾರೆ. ಇಡೀ ಪ್ರಕರಣದಲ್ಲಿ ಲಾಡ್‌ ವರ್ತನೆ ನಾಚಿಕೆಗೇಡು. ಸಚಿವರು ಕಾರ್ಮಿಕರ ನೆರವಿಗೆ ಧಾವಿಸಬೇಕು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.