ADVERTISEMENT

‘ನೋಟಾದಿಂದ ಪ್ರಜಾಪ್ರಭುತ್ವಕ್ಕೆ ಜಯ’

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 6:50 IST
Last Updated 24 ಮಾರ್ಚ್ 2014, 6:50 IST

ಹುಬ್ಬಳ್ಳಿ: ‘ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯವೇ ಟಿಕೆಟ್‌ ನೀಡಲು ಮಾನ­ದಂಡವಾಗಿದೆ. ಸ್ಪರ್ಧಿಸಿರುವ ಅಭ್ಯರ್ಥಿ­ಗಳಾರೂ ಯೋಗ್ಯರಲ್ಲ ಎಂಬುದು ಮನವರಿಕೆಯಾದರೆ ಎಲೆ­ಕ್ಟ್ರಾನಿಕ್‌ ಮತ­ಯಂತ್ರದಲ್ಲಿರುವ ’ನೋಟಾ’ ಗುಂಡಿಯನ್ನು ಬಳಸಿ’

– ಮತದಾನದ ಮಹತ್ವ ಕುರಿತು ಸಭಿಕರೊಬ್ಬರಿಂದ ತೂರಿಬಂದ ಪ್ರಶ್ನೆಗೆ ನಿವೃತ್ತ ಲೋಕಾಯುಕ್ತ  ನ್ಯಾಯ­ಮೂರ್ತಿ ಸಂತೋಷ ಹೆಗ್ಡೆ ನೀಡಿದ ಸಲಹೆ ಇದು.

ಕಾಂಪೀಟ್‌ ಇಂಡಿಯಾ (ಜೀತೊ ಭಾರತ್) ಹಾಗೂ ಕೆಎಲ್‌ಇ ಸಂಸ್ಥೆಯ ಐಎಂಎಸ್‌ಆರ್‌ ಸಂಯುಕ್ತ ಆಶ್ರಯ­ದಲ್ಲಿ ಭಾನುವಾರ  ಐಎಂ­ಎಸ್‌ಆರ್‌ ಸಭಾಂಗಣದಲ್ಲಿ ಆಯೋ­ಜಿಸಿದ್ದ ‘ಪ್ರಜಾ­ಪ್ರಭುತ್ವದಲ್ಲಿ ನಾಗರಿಕ ಸೇವೆ ಹಾಗೂ ಸಾರ್ವಜನಿಕ ಸೇವೆಯಲ್ಲಿ ಭ್ರಷ್ಟಾ­ಚಾರದ ಪಾತ್ರ’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಸಲಹೆ ನೀಡಿದರು.

‘ಟಿಕೆಟ್‌ ನೀಡಲಾಗುವ ಅಭ್ಯರ್ಥಿ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದರೆ ಸಾಕು, ಆತನ ವಿರುದ್ಧ  ಎಂತಹ ಗಂಭೀರ ಸ್ವರೂಪದ ಆರೋಪ­ಗಳಿದ್ದರೂ ರಾಜಕೀಯ ಪಕ್ಷಗಳು ತಲೆಕೆ­ಡಿಸಿಕೊಳ್ಳುವುದಿಲ್ಲ. ಈಗಿನ ವ್ಯವಸ್ಥೆ­ಯಲ್ಲಿ ಪ್ರಾಮಾಣಿಕತೆಗೆ ಬೆಲೆಯೂ ಇಲ್ಲ. ಭ್ರಷ್ಟಾಚಾರ, ಅಪ­ರಾಧ ಆರೋಪ ಹೊತ್ತ ಅಭ್ಯರ್ಥಿಗಳು ಕಣದಲ್ಲಿ ಇದ್ದಾಗ ‘ನೋಟಾ’ ಆಯ್ಕೆ­ಯನ್ನು ಬಳಸಿ. ಈ ಆಯ್ಕೆಯಿಂದಲೂ ಪ್ರಜಾಪ್ರಭುತ್ವಕ್ಕೆ ಗೆಲುವು ಸಿಗಲಿದೆ’ ಎಂದೂ ಪ್ರತಿಪಾದಿಸಿದರು.

ರಾಜಕೀಯ ಪ್ರವೇಶ ಸಂಬಂಧ ಬಂದ ಪ್ರಶ್ನೆಗೆ, ‘ಯಾವುದಾದರೂ ಒಂದು ರಾಜಕೀಯ ಪಕ್ಷ ಸೇರಿದ್ದೇ ಆದರೆ, ನಾನು ಆ ಪಕ್ಷದ ಭ್ರಷ್ಟಾ­ಚಾರವನ್ನು ಬಯಲಿಗೆಳೆಯುವ ಇಲ್ಲವೇ ವಿರೋಧಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತೇನೆ. ಈ ಕಾರ್ಯವನ್ನು ಹೊರಗಿನ ಶಕ್ತಿಯೊಂದೇ ಮಾಡಬೇಕು. ಹೀಗಾಗಿ ರಾಜಕೀಯ ನನ್ನ ಆದ್ಯತೆಯ ಕ್ಷೇತ್ರವಲ್ಲ’ ಎಂದು ಉತ್ತರಿಸಿದರು.

ನಿಗದಿತ ಸಮಯಕ್ಕಿಂತ ಎರಡೂವರೆ ಗಂಟೆ ಸಂವಾದ ಕಾರ್ಯಕ್ರಮ ತಡ­ವಾಗಿ ಆರಂಭವಾಯಿತು. ಹೀಗಾಗಿ ಗಡಿಯಾರ ನೋಡುತ್ತಲೇ ಮಾತು ಆರಂಭಿಸಿದ ಸಂತೋಷ ಹೆಗ್ಡೆ, ‘ಈಗಿನ ದಿನಮಾನದಲ್ಲಿ ಹಣ ಹಾಗೂ ಅಧಿಕಾರವೇ ಮುಖ್ಯವಾಗಿದ್ದು, ಮೌಲ್ಯ­ಗಳು ಕಣ್ಮರೆಯಾಗುತ್ತಿವೆ’ ಎಂದು ವಿಷಾದಿಸಿದರು.

ಲೋಕಾಯುಕ್ತ ಕಾಯ್ದೆಯ ಉದ್ದೇಶಿತ ತಿದ್ದುಪಡಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ‘ಈ ತಿದ್ದುಪಡಿಯಿಂದಾಗಿ ಲೋಕಾ­ಯುಕ್ತ ಸಂಸ್ಥೆಯು ಒಂದು ಉದ್ಯೋಗ ಒದಗಿಸುವ ಬ್ಯೂರೋ ಆಗಲಿದೆ’ ಎಂದೂ ವ್ಯಂಗ್ಯವಾಡಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುಧೀರ್‌ ಗುಪ್ತಾ, ಐಎಂಎಸ್ಆರ್‌ ನಿರ್ದೇಶಕ ಡಾ.ರೂಡಗಿ ಮತ್ತಿತರರು ಉಪಸ್ಥಿತರಿದ್ದರು.

‘ಹೂ ಆ್ಯಮ್‌ ಐ? ಹೆಸರಿಡುವೆ’
‘‘ಜನಲೋಕಪಾಲ ಮಸೂದೆಗಾಗಿ ಹೋರಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸಚಿವರೊಬ್ಬರು ‘ನಾನು ನಿಮ್ಮೊಂದಿಗೆ ಚರ್ಚಿಸುವುದಿಲ್ಲ’ ನೀವು ಯಾರು’’ ಎಂದು ದಬಾಯಿಸಿದರು. ‘ಆದರೆ, ನಮ್ಮಿಂದ ಆಯ್ಕೆಯಾಗಿರುವ ಆ ಸಚಿವ ತಾನೊಬ್ಬ ಜನಸೇವಕ ಎಂಬುದನ್ನೇ ಮರೆತಿದ್ದರು. ಹೀಗಾಗಿ ಒಂದು ವೇಳೆ ನಾನು ನನ್ನ ಆತ್ಮಚರಿತ್ರೆಯನ್ನು ಬರೆದರೆ ಅದಕ್ಕೆ ‘ಹೂ ಆ್ಯಮ್‌ ಐ?’ ಎಂದು ಹೆಸರಿಡುವೆ ಎಂದು ಅವರು  ಹೇಳಿದಾಗ, ಸಭಾಂಗಣ ಕರ ತಾಡನದಿಂದ ತುಂಬಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.