ADVERTISEMENT

‘ಬೇಂದ್ರೆ ಕಾವ್ಯ: ಪ್ರಜ್ಞಾಪೂರ್ವಕ ಕಡೆಗಣನೆ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2013, 8:36 IST
Last Updated 4 ನವೆಂಬರ್ 2013, 8:36 IST

ಹುಬ್ಬಳ್ಳಿ: ‘ವರಕವಿ ಬೇಂದ್ರೆಯವರ ಕಾವ್ಯದಲ್ಲಿ ಕಂಡು ಬರುವ ಮಾನವೀಯತೆಯ ದರ್ಶನವನ್ನು ವಿಶೇಷ ಹಿತಾಸಕ್ತಿಗಳು  ಪ್ರಜ್ಞಾಪೂರ್ವಕವಾಗಿ ಕಡೆಗಣಿಸುತ್ತಿವೆ’ ಎಂದು ಹಿರಿಯ ಸಾಹಿತಿ ಡಾ.ಕೆ.ರಾಘವೇಂದ್ರರಾವ್ ಹೇಳಿದರು.

ಇಲ್ಲಿನ ಬಸವೇಶ್ವರನಗರದಲ್ಲಿರುವ ‘ವಿಶ್ವಶ್ರಮ ಚೇತನ’ದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಬೇಂದ್ರೆ ಸಂಸ್ಮರಣೆ–33 ಕಾರ್ಯಕ್ರಮದಲ್ಲಿ ‘ಬೇಂದ್ರೆ ಹಾಗೂ ಮಾನವೀಯತೆಯ ದರ್ಶನ’ ಎಂಬ ವಿಷಯ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

‘ಬೇಂದ್ರೆಯವರ ಜಾಗತಿಕ ದೃಷ್ಟಿಕೋನ ಹಾಗೂ ಸಾಹಿತ್ಯಿಕ ಕೃತಿಗಳು ಚಾರಿತ್ರಿಕ ಸಂಘರ್ಷವನ್ನು ಪ್ರತಿನಿಧಿಸುತ್ತಾ ಮಾನವೀಯತೆಯ ದರ್ಶನದೆಡೆಗೆ ಸಾಗುತ್ತದೆ. ಅಲ್ಲದೇ, ಮಾನವೀಯತೆಯ ದರ್ಶನವು ಮಾನವ, ಪ್ರಕೃತಿ ಹಾಗೂ ದೇವರು ಈ ತ್ರಿವಳಿಯ ನಡುವೆ ಒಂದು ಕೊಂಡಿಯನ್ನು ಸ್ಥಾಪಿಸಲು ಸಂಘರ್ಷ ಮಾಡುತ್ತಿರುವ ಪ್ರಕ್ರಿಯೆಯಲ್ಲಿರುವುದನ್ನು ಸಹ ಅವರ ಕಾವ್ಯಗಳಲ್ಲಿ ದೃಢಪಡುತ್ತದೆ’ ಎಂದೂ ವಿಶ್ಲೇಷಿಸಿದರು.

’ಬೇಂದ್ರೆಯವರ ಈ ಮಾನವೀಯತೆಯ ದರ್ಶನದ ಬೆಳಕನ್ನು ಬೆಳಗುವ ಅನಿವಾರ್ಯತೆ ಪ್ರಗತಿಪರ ಚಿಂತಕರ ಕರ್ತವ್ಯವಾಗಿದೆ’ ಎಂದೂ ಅವರು ಪ್ರತಿಪಾದಿಸಿದರು.

ನಂತರ ಅವರು ಬೇಂದ್ರೆಯವರ ಆಯ್ದ ಒಲವಿನ ಕವನಗಳನ್ನು ಒಳಗೊಂಡ ಸಂಗ್ರಹ ‘ಒಲವೇ ನಮ್ಮ ಬದುಕು’ ಎಂಬ ಕೃತಿಯನ್ನು ಇದೇ ಸಂದರ್ಭದಲ್ಲಿ ಅವರು ಸಾಂಕೇತಿಕವಾಗಿ ಬಿಡುಗಡೆ ಮಾಡಿದರು.

ಬೇಂದ್ರೆ ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಕೆ.ಎಸ್‌.ಶರ್ಮಾ, ‘ಬೆಳಕಿನ ಮಹಾಪಥಿಕ­ರಾಗಿದ್ದ ಬೇಂದ್ರೆಯವರು ದೀಪಾವಳಿಯಂದೇ ಬೆಳಕಿನಲ್ಲಿ ಲೀನವಾದರು. ಅವರ ಅಮರ ಸಾಹಿತ್ಯ, ಚಿಂತನೆಗಳ ಬೆಳಕು ಜಗತ್ತನ್ನು ಇಂದಿಗೂ ಬೆಳಗುತ್ತಿದೆ’ ಎಂದು ಬಣ್ಣಿಸಿದರು.

ವಿಧಾನ ಪರಿಷತ್ತಿನ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿದರು.

ಸಾಹಿತಿ ರಾಮಚಂದ್ರ ಅವರು ಬೇಂದ್ರೆಯವರ ‘ಸೂಸಲ ನಗೆಯ ಸೂಕ್ತಿಗಳು’ ಎಂಬ ಕವನವನ್ನು ವಾಚನ ಮಾಡಿದರು. ಸಂಸ್ಥೆಯ ಸಹ ನಿರ್ದೇಶಕ ಡಾ.ವಾಮನ ಬೇಂದ್ರೆ, ಸುಮಿತ್ರಾ ಪೋತ್ನಿಸ್, ಡಾ.ಶ್ಯಾಮಸುಂದರ ಬಿದರಕುಂದಿ, ಅಮ್ಯಂಬಾಳ ಆನಂದ, ಎಂ.ಡಿ.ಗೋಗೇರಿ, ಜಗದೀಶ ಮಂಗಳೂರುಮಠ, ವಿಕಾಸ ಸೊಪ್ಪಿನ, ಪ್ರೊ.ಚಂದ್ರಶೇಖರ ಯಾದವಾಡ ಉಪಸ್ಥಿತರಿದ್ದರು.
ಪ್ರೊ.ರವೀಂದ್ರ ಶಿರೋಳ್ಕರ್ ಕಾರ್ಯಕ್ರಮ ನಿರೂಪಿಸಿದರು. ಸಂಜಯ ತ್ರಾಸದ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.