ADVERTISEMENT

ಡೆಂಗಿ, ಚಿಕೂನ್‌ಗುನ್ಯಾ ಆತಂಕ: ಎಚ್ಚೆತ್ತುಕೊಳ್ಳದ ಪಾಲಿಕೆ

ತಿಮ್ಮಸಾಗರ ಬಡಾವಣೆ: ಪ್ರತಿ ಮನೆಯಲ್ಲಿ ಇಬ್ಬರಿಗೆ ಅನಾರೋಗ್ಯ

​ಪ್ರಜಾವಾಣಿ ವಾರ್ತೆ
Published 22 ಜುಲೈ 2019, 20:20 IST
Last Updated 22 ಜುಲೈ 2019, 20:20 IST
ತಿಮ್ಮಸಾಗರ ಬಡಾವಣೆಯ ಕಸ ಸ್ವಚ್ಛಗೊಳಿಸಿ, ವಾತಾವರಣ ಶುಚಿಯಾಗಿಡಬೇಕು ಎಂದು ಸಾರ್ವಜನಿಕರು ಸೋಮವಾರ ಆಗ್ರಹಿಸಿದರು
ತಿಮ್ಮಸಾಗರ ಬಡಾವಣೆಯ ಕಸ ಸ್ವಚ್ಛಗೊಳಿಸಿ, ವಾತಾವರಣ ಶುಚಿಯಾಗಿಡಬೇಕು ಎಂದು ಸಾರ್ವಜನಿಕರು ಸೋಮವಾರ ಆಗ್ರಹಿಸಿದರು   

ಹುಬ್ಬಳ್ಳಿ: ತಿಮ್ಮಸಾಗರ ಬಡಾವಣೆಯಲ್ಲಿ ಬಹುತೇಕ ಕಸದ ರಾಶಿ, ಸ್ವಲ್ಪ ಜೋರು ಮಳೆ ಬಂದರೂ ಮನೆಯೊಳಗೆ ಹರಿಯುವ ಚರಂಡಿ ನೀರು, ಬಡಾವಣೆಯ ಪ್ರತಿ ಮನೆಯಲ್ಲಿ ಒಬ್ಬರು, ಇಬ್ಬರಿಗೆ ಚಿಕೂನ್‌ಗುನ್ಯ, ಡೆಂಗಿ ಜ್ವರ ಶಂಕೆ!

ಹೌದು; ಕಳೆದ ಒಂದು ತಿಂಗಳಿಂದ ತಿಮ್ಮಸಾಗರ ಬಡಾವಣೆಯಲ್ಲಿ ಇದೇ ಪರಿಸ್ಥಿತಿಯಿದೆ. ಮನೆಯಲ್ಲಿ ಒಬ್ಬ ಸದಸ್ಯರು ಗುಣಮುಖರಾದರೆ, ಮತ್ತೊಬ್ಬರಿಗೆ ಜ್ವರ. ಇದರಿಂದ ಬಡಾವಣೆಯ ಜನ ರೋಸಿ ಹೋಗಿದ್ದಾರೆ. ಅವಳಿ ನಗರಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಕೆಲವರ ಮನೆಗಳಲ್ಲಿ ಚಿಕೂನ್‌ಗುನ್ಯ, ಡೆಂಗಿ ಶಂಕೆ ಇದ್ದರೆ, ಇನ್ನೂ ಕೆಲವರಲ್ಲಿ ಇದು ದೃಢಪಟ್ಟಿದೆ.

ಹತ್ತು ದಿನಗಳಿಗೊಮ್ಮೆ ನೀರು ಬರುವ ಕಾರಣ ತಿಮ್ಮಸಾಗರ ಬಡಾವಣೆಯ ಜನರಿಗೆ ನೀರು ಸಂಗ್ರಹಿಸಿಡುವುದು ಅನಿವಾರ್ಯ. ಸಂಗ್ರಹಿಸಿಟ್ಟ ನೀರಿನಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುವ ಪರಿಣಾಮ ಡೆಂಗಿ ಹಾಗೂ ಚಿಕೂನ್‌ಗುನ್ಯ ಹಾವಳಿ ಹೆಚ್ಚಾಗಿದೆ.

ADVERTISEMENT

ನಗರದಲ್ಲಿ ಒಂದು ತಿಂಗಳಿಂದ ಮೇಲಿಂದ ಮೇಲೆ ಮಳೆ ಬರುತ್ತಿದೆ. ಚರಂಡಿ ನೀರು ರಸ್ತೆಯ ಮೇಲೆಲ್ಲ ಹರಿದಾಡುವ ಕಾರಣ ಎಲ್ಲೆಡೆಯೂ ಕಸದರಾಶಿಯಿದೆ. ಆದ್ದರಿಂದ ಅಲ್ಲಿನ ಅನೇಕ ಜನರಿಗೆ ಹಾಸಿಗೆ ಬಿಟ್ಟು ಏಳಲಾಗದ ಸ್ಥಿತಿ ಎದುರಾಗಿದೆ. ತಿಮ್ಮಸಾಗರ ದೇವಸ್ಥಾನದ ಭಾಗವು ಪಾಲಿಕೆಯ 9ನೇ ವಲಯದ 35ನೇ ವಾರ್ಡ್‌ನಲ್ಲಿ ಬರುತ್ತದೆ. ದೇವಸ್ಥಾನ ಎದುರು ಇರುವ ರಸ್ತೆಯಾಚೆಗಿನ ಮನೆಗಳಲ್ಲೆವೂ ವಲಯ ಐದರಲ್ಲಿ ಬರುತ್ತವೆ. ಇವು 45ನೇ ವಾರ್ಡ್‌ನಲ್ಲಿವೆ. ಆದ್ದರಿಂದ ಏನೇ ಅಭಿವೃದ್ಧಿ ಕೆಲಸಗಳು ಒಂದು ಬದಿಯಾದರೆ, ಇನ್ನೊಂದು ಬದಿ ಆಗುವುದಿಲ್ಲ!

ಒಂದೇ ಬಡಾವಣೆಯಲ್ಲಿ ಎದುರು ಬದುರು ಮನೆಗಳಿದ್ದರೂ ಪ್ರತ್ಯೇಕ ವಲಯ ಮತ್ತು ಬೇರೆ ಬೇರೆ ವಾರ್ಡ್‌ಗಳ ವ್ಯಾಪ್ತಿಯಲ್ಲಿ ಬರುವ ಕಾರಣ ಸ್ವಚ್ಛತೆ ಮರೀಚಿಕೆಯಾಗಿದೆ. ಮಳೆಯಿಂದ ಕಸದ ರಾಶಿಯೇ ಹರಿದುಬರುತ್ತಿದೆ. ಸ್ವಚ್ಛಗೊಳಿಸುವಂತೆ ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇದರಿಂದ ಪ್ರತಿ ಮನೆಯಲ್ಲಿ ಅನಾರೋಗ್ಯ ತಾಂಡವಾಡುತ್ತಿದೆ ಎಂದು ಸ್ಥಳೀಯರು ದೂರಿದರು.

‘ನಮ್ಮ ಮನೆಯಲ್ಲಿ 15 ದಿನಗಳಿಂದ ತಂಗಿ ಹಾಗೂ ತಮ್ಮನಿಗೆ ವೈರಲ್‌ ಫಿವರ್‌ ಬಂದಿದೆ. ಮನೆಯ ಸುತ್ತಲೂ ಕಸದ ರಾಶಿಯಿದೆ. ಇದನ್ನು ತೆಗೆಯುವಂತೆ ಹೇಳಿದರೂ ಪಾಲಿಕೆ ಅಧಿಕಾರಿಯೂ ಇತ್ತ ಕಡೆ ಬಂದಿಲ್ಲ’ ಎಂದು ಸ್ಥಳೀಯ ನಿವಾಸಿ ವೀಣಾ ಬದ್ದಿ ಬೇಸರ ತೋಡಿಕೊಂಡರು.

‘ಒಂದು ವಾರದಿಂದ ಹಾಸಿಗೆಯಲ್ಲಿ ಮಲಗಿದ್ದೇನೆ. ಕೈ–ಕಾಲುಗಳಲ್ಲಿ ಶಕ್ತಿಯಿಲ್ಲದ ಕಾರಣ ಎದ್ದು ಹೊರಬರಲು ಆಗುತ್ತಿಲ್ಲ. ಚಿಕೂನ್‌ಗುನ್ಯ ಶಂಕೆ ಇದೆ ಎಂದು ವೈದ್ಯರು ಹೇಳಿದ್ದಾರೆ’ ಎಂದು ಪೂಜಾ ನಾಯ್ಕ ಹೇಳಿದರು.

ಬಾಕ್ಸ್‌: 01

ಸೊಳ್ಳೆ ಉತ್ಪತ್ತಿ ತಪ್ಪಿಸಲು ಕ್ರಮ: ಬಿರಾದಾರ

ಪ್ರತಿ ವಲಯಕ್ಕೆ ಎರಡು ಫಾಗಿಂಗ್‌ ಯಂತ್ರಗಳಿವೆ. ಒಂದು ವಲಯದಲ್ಲಿ ನಾಲ್ಕರಿಂದ ಐದು ವಾರ್ಡ್‌ಗಳು ಇವೆ. ಪ್ರತಿ ಬಡಾವಣೆಯಲ್ಲಿ ಸಿಬ್ಬಂದಿ ಫಾಗಿಂಗ್‌ ಮಾಡುವಂತೆ ನೋಡಿಕೊಳ್ಳುವುದು ಆಯಾ ವಲಯದ ಮುಖ್ಯಸ್ಥರ ಜವಾಬ್ದಾರಿ. ಅವಳಿ ನಗರದಲ್ಲಿ ಡೆಂಗಿ ಮತ್ತು ಚಿಕೂನ್‌ಗುನ್ಯ ಹಾವಳಿ ಹೆಚ್ಚಾಗಿರುವುದು ನಿಜ ಎಂದು ಪಾಲಿಕೆ ಆರೋಗ್ಯಾಧಿಕಾರಿ ಪ್ರಭು ಬಿರಾದಾರ ಹೇಳಿದರು.

‘ನಿರಂತರ ಮಳೆಯಾದ ಕಾರಣ ಸೊಳ್ಳೆಗಳು ಹೆಚ್ಚಾಗಿವೆ. ಆದ್ದರಿಂದ ಫಾಗಿಂಗ್‌ ಚುರುಕುಗೊಳಿಸಿ ಸಂಗ್ರಹಿಸಿಟ್ಟ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ತಪ್ಪಿಸಲು ಒತ್ತು ನೀಡಲಾಗುತ್ತಿದೆ. ಅವಳಿ ನಗರದಲ್ಲಿ 18 ಪ್ರಕರಣಗಳು ಪತ್ತೆಯಾಗಿವೆ’ ಎಂದರು.

ಬಾಕ್ಸ್‌–02

ಮ್ಯಾಗ್ನೇಷಿಯಂ ಸಲ್ಫೆಟ್‌ ಬಳಕೆ ಉತ್ತಮ: ನಿಟಾಲಿ

ಒಂದೇ ಕಡೆ 7ಕ್ಕಿಂತ ಹೆಚ್ಚು ದಿನ ನೀರು ನಿಂತರೆ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಇದಕ್ಕೆ ಅವಕಾಶ ನೀಡದಿದ್ದರೆ ರೋಗ ಬರುವುದನ್ನು ತಡೆಯಬಹುದು ಎಂದು ವೈದ್ಯ ವಿ.ಬಿ. ನಿಟಾಲಿ ಸಲಹೆ ನೀಡಿದ್ದಾರೆ.

‘ಪ್ರತಿ ಸೊಳ್ಳೆ ಒಂದು ಸಾವಿರ ಮೊಟ್ಟೆಗಳನ್ನು ಇಡುತ್ತದೆ. ಸ್ವಚ್ಛ ನೀರಿನಲ್ಲಿ ಡೆಂಗಿ ಮತ್ತು ಹೊಲಸು ನೀರಿನಲ್ಲಿ ಮಲೇರಿಯಾ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ. ಏಳು ದಿನಕ್ಕಿಂತ ಹೆಚ್ಚು ಒಂದೇ ಕಡೆ ನೀರು ಸಂಗ್ರಹವಿದ್ದರೆ ಸಾವಿರ ಮೊಟ್ಟೆಗಳು ಸೊಳ್ಳೆಗಳಾಗಿ ಹಾರಾಡುತ್ತವೆ. ಆದ್ದರಿಂದ ನಿಂತ ನೀರಿನ ಬಗ್ಗೆ ಎಚ್ಚರ ಇರಬೇಕು. ಮುನ್ನಚ್ಚೆರಿಕೆಯಾಗಿ ಉಪ್ಪಿನ ಬಣ್ಣ ಹೊಂದಿರುವ ಮ್ಯಾಗ್ನೇಷಿಯಂ ಸಲ್ಫೆಟ್‌ ಕೈ, ಕಾಲು, ಮುಖಕ್ಕೆ ಹಚ್ಚಿಕೊಂಡರೆ ಸೊಳ್ಳೆಗಳು ಕಡಿಯುವುದಿಲ್ಲ’ ಎಂದರು.

ಡೆಂಗಿ, ಚಿಕುನ್‌ಗುನ್ಯಾ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು

* ಮನೆಯಲ್ಲಿ ಸೊಳ್ಳೆಪರದೆ, ಸೊಳ್ಳೆಬತ್ತಿಗಳನ್ನು ಬಳಸಬೇಕು

* ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು

* ಪ್ರತಿ ದಿನ ಮನೆಯ ಕಸ ವಿಲೇವಾರಿ ಮಾಡಬೇಕು

* ತುಂಬು ತೋಳಿನ ಬಟ್ಟೆಗಳನ್ನು ಧರಿಸಬೇಕು

* ಜ್ವರ ಕಾಣಿಸಿಕೊಂಡ ಕೂಡಲೇ ವೈದ್ಯರಿಂದ ಚಿಕಿತ್ಸೆ ಪಡೆಯಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.