ADVERTISEMENT

‘16 ವಸತಿ ಸಹಿತ ಕಾಲೇಜು ಪ್ರಾರಂಭ’

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2017, 8:37 IST
Last Updated 26 ನವೆಂಬರ್ 2017, 8:37 IST

ಧಾರವಾಡ: ‘ಪದವಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಶೇ 24 ಇದ್ದು, ಅದನ್ನು ಶೇ 40ಕ್ಕೆ ಏರಿಸಲು ರಾಜ್ಯದಲ್ಲಿ 16 ವಸತಿ ಸಹಿತ ಕಾಲೇಜು ಪ್ರಾರಂಭಿಸಲು ನಿರ್ಧರಿಸಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

ಕರ್ನಾಟಕ ಕಾಲೇಜಿನ ಶತಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶನಿವಾರ ಪಾಲ್ಗೊಂಡು ಅವರು ಮಾತನಾಡಿದರು. ‘ಪ್ರಾಥಮಿಕ ಶಿಕ್ಷಣಕ್ಕೆ ಶೇ 98ರಷ್ಟು ಮಕ್ಕಳು ದಾಖಲಾಗುತ್ತಾರೆ. ಆದರೆ, ಪದವಿ ಹಂತಕ್ಕೆ ಬರುವಾಗ ಈ ಪ್ರಮಾಣ ಶೇ 24ಕ್ಕೆ ಇಳಿದಿದೆ’ ಎಂದರು.

‘ಶತಮಾನೋತ್ಸವ ಸಂದರ್ಭದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗಾಗಿ ₹40ಕೋಟಿಯನ್ನು ಕರ್ನಾಟಕ ವಿಶ್ವವಿದ್ಯಾಲಯ ಕೇಳಿತ್ತು. ಆದರೆ ಈಗ ₹25 ಕೋಟಿ ಮಾತ್ರ ನೀಡಿದ್ದೇವೆ. ಶತಮಾನೋತ್ಸವದ ಸಮಾರೋಪದ ಸಂದರ್ಭದಲ್ಲಿ ಉಳಿದ ₹15ಕೋಟಿ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ADVERTISEMENT

ಸಂಕನೂರ ಕಿಡಿ: ಶತಮಾನೋತ್ಸವ ಕಾರ್ಯಕ್ರಮಕ್ಕೆ ವಿರೋಧಪಕ್ಷದ ನಾಯಕ ಜಗದೀಶ ಶೆಟ್ಟರ್‌ ಹಾಗೂ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಅವರನ್ನು ಆಹ್ವಾನಿಸದಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಎಸ್‌.ವಿ. ಸಂಕನೂರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಶಾಸಕ ಅರವಿಂದ ಬೆಲ್ಲದ ಹಾಗೂ ನಾನು ಈ ಕುರಿತು ಮಾತನಾಡಿ ಸಭಿಕರ ಸಾಲಿನಲ್ಲಿ ಕುಳಿತು ಪ್ರತಿಭಟಿಸಬೇಕು ಎಂದು ತೀರ್ಮಾನಿಸಿ ಇಲ್ಲಿಗೆ ಬಂದೆವು. ಆದರೆ, ವಿವಿ ಆಡಳಿತ ಮಂಡಳಿಯವರು ನಮ್ಮನ್ನು ಕರೆದಿದ್ದರಿಂದ ವೇದಿಕೆಯಲ್ಲಿ ಆಸೀನರಾಗಿದ್ದೇವೆ’ ಎಂದರು.

ಈ ಕುರಿತಂತೆ ಶುಕ್ರವಾರ ಅರವಿಂದ ಬೆಲ್ಲದ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಕಾರ್ಯಕ್ರಮದಲ್ಲಿ ಪ್ರತಿಭಟಿಸುವುದಾಗಿಯೂ ಹೇಳಿದ್ದರು. ಅದರಂತೆಯೇ ಕಾರ್ಯಕ್ರಮಕ್ಕೆ ಬಂದ ಅವರು ಸಭಿಕರ ಸಾಲಿನಲ್ಲಿ ಕುಳಿತರು. ಅವರ ಬಳಿ ಬಂದ ಕುಲಪತಿ ಡಾ.ಪ್ರಮೋದ ಗಾಯಿ ವೇದಿಕೆಗೆ ಆಹ್ವಾನಿಸಿದರು. ಇದಕ್ಕೆ ಇಬ್ಬರೂ ನಿರಾಕರಿಸಿದರು.ಆದರೆ, ಅವರನ್ನು ಮನವೊಲಿಸಿದ ಗಾಯಿ, ವೇದಿಕೆ ಆಹ್ವಾನಿಸಿ ಮುಂಭಾಗದ ಪ್ರಮುಖ ಆಸನದಲ್ಲಿ ಕೂರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿ ಡಾ. ಪ್ರಮೋದ ಗಾಯಿ ವಹಿಸಿದ್ದರು. ಪಾಟೀಲ ಪುಟ್ಟಪ್ಪ, ಚೆನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಡಾ. ಎಂ.ಐ.ಸವದತ್ತಿ, ಅರವಿಂದ ಬೆಲ್ಲದ, ವಿ.ಎಸ್.ಸಂಕನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.