ಧಾರವಾಡ: ‘ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದವರು (ಹುಡಾ) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 167 ಅನಧಿಕೃತ ಬಡಾವಣೆ (ಲೇಔಟ್) ಗುರುತಿಸಿದ್ದಾರೆ. ಈ ಬಡಾವಣೆಗಳ ತೆರವಿಗೆ ಕ್ರಮ ವಹಿಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಒಂಬತ್ತನೇ ಜನತಾ ದರ್ಶನದಲ್ಲಿ ಮಾತನಾಡಿದರು.
‘ಅನಧಿಕೃತ ಲೇಔಟ್‌ಗಳ ಬಗ್ಗೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಬೇಕು. ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕ ಜಾಗಗಳ ಒತ್ತುವರಿ, ಅನಧಿಕೃತ ಕಟ್ಟಡ, ಅನಧಿಕೃತ ವಸತಿ ವಿನ್ಯಾಸ ಹೆಚ್ಚಾಗಿದೆ. ಪಾಲಿಕೆ, ಜಿಲ್ಲಾಡಳಿತ, ಹುಡಾ, ಪೊಲೀಸ್ ಹಾಗೂ ಇತರ ಏಜೆನ್ಸಿಗಳ ಸಭೆ ನಡೆಸಬೇಕು. ಅನಧಿಕೃತ ಕಟ್ಟಡದ ಮಾಲೀಕರು, ಒತ್ತುವರಿದಾರರಿಗೆ ನೋಟಿಸ್ ನೀಡಬೇಕು’ ಎಂದರು ತಿಳಿಸಿದರು.
‘ಒತ್ತುವರಿದಾರರು ತಾವಾಗಿ ಒತ್ತುವರಿ ತೆರವುಗೊಳಿಸದಿದ್ದರೆ ಪಾಲಿಕೆಯಿಂದ ಒತ್ತುವರಿ ತೆರವು ಹಾಗೂ ಅನಧಿಕೃತ ಕಟ್ಟಡ, ಲೇಜೌಟ್ ತೆರವಿಗೆ ಕಾರ್ಯಚರಣೆ ಕೈಗೊಳ್ಳಬೇಕು. ಈ ನಿಟ್ಟಿನಲ್ಲಿ ಪೂರಕ ಸಿದ್ಧತೆ ಮಾಡಿಕೊಳ್ಳಬೇಕು. ಪಾಲಿಕೆ ವ್ಯಾಪ್ತಿಯಲ್ಲಿ ಹುಡಾದ 400 ಎಕರೆ ಹಾಗೂ ಪಾಲಿಕೆಯ 300 ಎಕರೆ ಉದ್ಯಾನ ಜಾಗ ಇದೆ. ಅರಣ್ಯ ಮತ್ತು ತೋಟಗಾರಿಕೆ ಇಲಾಖೆ ಸಹಕಾರದಲ್ಲಿ ಉತ್ತಮವಾಗಿ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಬೇಕು’ ಎಂದರು.
‘ಪ್ರತಿ ಜನತಾ ದರ್ಶನದಲ್ಲಿ ಪಾಲಿಕೆ ವ್ಯಾಪ್ತಿಯ ಅಹವಾಲುಗಳು ಹೆಚ್ಚು ಸಲ್ಲಿಕೆಯಾಗುತ್ತಿವೆ. ವಿವಿಧ ಸ್ಥಳೀಯ ಪ್ರಾಧಿಕಾರ, ಇಲಾಖೆಗಳಲ್ಲಿ ಸಮನ್ವಯ ಇಲ್ಲದಿರುವುದು ಇದಕ್ಕೆ ಕಾರಣ. ಪಾಲಿಕೆ ಆಯುಕ್ತರು, ವಲಯ ಸಹಾಯಕ ಆಯುಕ್ತರು ಪ್ರತಿದಿನ ಬೆಳಿಗ್ಗೆ 6 ಗಂಟೆಗೆ ವಾರ್ಡ್‌ಗಳಿಗೆ ತೆರಳಿ ಸಾರ್ವಜನಿಕ ಪರಿಶೀಲಿಸಬೇಕು’ ಎಂದು ಸೂಚನೆ ನೀಡಿದರು.
‘ಜನತಾ ದರ್ಶನದಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಗಮನಿಸಿದಾಗ ಆಯಾ ಇಲಾಖೆ ಅಧಿಕಾರಿಗಳು ಸಾರ್ವಜನಿಕರ ದೂರುಗಳನ್ನು ಸರಿಯಾಗಿ ಪರಿಶೀಲಿಸದಿರುವುದು ಕಂಡುಬರುತ್ತಿದೆ. ಕೆಲವು ಅಹವಾಲುಗಳು ಜನತಾ ದರ್ಶನದಲ್ಲಿ ಮತ್ತೆ ಮತ್ತೆ ಸಲ್ಲಿಕೆ ಆಗುತ್ತಿವೆ. ಅವುಗಳಿಗೆ ಬರಿ ಹಿಂಬರಹ ನೀಡಿ, ಹೊತ್ತು ಹಾಕಬೇಡಿ, ಪರಿಹಾರ ಸೂಚಿಸಿ ತ್ವರಿತವಾಗಿ ವಿಲೇವಾರಿ ಮಾಡಬೇಕು’ ಎಂದು ನಿರ್ದೇಶನ ನೀಡಿದರು.
ನೋಟಿಸ್ ಜಾರಿಗೆ ಸೂಚನೆ: ಕೆಲ ಅಧಿಕಾರಿಗಳು ಗೈರುಹಾಜರಾಗಿವುದಕ್ಕೆ ಸಚಿವರು ಕುಪಿತರಾದರು. ಸಭೆಯಿಂದ ಅರ್ಧಕ್ಕೆ ಹೋಗಿದ್ದ ಕೆಲವು ಅಧಿಕಾರಿಗಳನ್ನು ಮರಳಿ ಕರೆಸಿ, ಎಚ್ಚರಿಕೆ ನೀಡಿದರು. ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಗೋಪಾಲ ಬ್ಯಾಕೋಡ, ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಡಿಸಿಪಿ ಮಾನಿಂಗ ನಂದಗಾವಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.