ಹುಬ್ಬಳ್ಳಿ: ವಿಚ್ಛೇದನ ಕೋರಿ ರಾಜ್ಯದ ಕೌಟುಂಬಿಕ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆ ಹೆಚ್ಚುತ್ತಿವೆ. ವಾರ್ಷಿಕ 40 ಸಾವಿರ ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಐದು ವರ್ಷಗಳಲ್ಲಿ 1.95 ಲಕ್ಷ ಅರ್ಜಿ ಸಲ್ಲಿಕೆಯಾಗಿವೆ. ನಿತ್ಯ ಸರಾಸರಿ ನೂರಕ್ಕೂ ಹೆಚ್ಚು ಅರ್ಜಿಗಳು ನ್ಯಾಯಾಲಯದ ಮೆಟ್ಟಿಲೇರುತ್ತಿವೆ.
2020ರಲ್ಲಿ 20,454 ಅರ್ಜಿಗಳು ಸಲ್ಲಿಕೆಯಾದರೆ, 2024ರ ಅಂತ್ಯದವರೆಗೆ 36,952 ಅರ್ಜಿಗಳು ಸಲ್ಲಿಕೆ ಆಗಿವೆ. ಕೋವಿಡ್ ನಂತರದ 2022ರಲ್ಲಿ ಅವುಗಳ ಸಂಖ್ಯೆ 66,863ಕ್ಕೆ ಏರಿಕೆಯಾಗಿತ್ತು. ಪ್ರಸ್ತುತ ವರ್ಷ ಫೆಬ್ರುವರಿ ಅಂತ್ಯದವರೆಗೆ 5,576 ಅರ್ಜಿಗಳು ಸಲ್ಲಿಕೆಯಾಗಿವೆ.
‘ಇಷ್ಟವಿಲ್ಲದ ಮದುವೆ, ಮಾನಸಿಕ–ದೈಹಿಕ ಕಿರುಕುಳ, ಅನೈತಿಕ ಸಂಬಂಧ, ವರದಕ್ಷಿಣೆ ಹಿಂಸೆ, ಕೌಟುಂಬಿಕ ಕಲಹ, ವೈಮನಸ್ಸು, ಸಂಶಯ, ಅವಮಾನ ಹೀಗೆ ಹಲವು ವಿಷಯಗಳಿಗೆ ಪತಿ–ಪತ್ನಿ ಮಧ್ಯೆ ಜಗಳ ಏರ್ಪಟ್ಟು ವಿಚ್ಛೇದನ ಹಂತದವರೆಗೆ ಹೋಗುತ್ತದೆ. ಪರಸ್ಪರ ಪ್ರೀತಿ, ವಿಶ್ವಾಸ, ಭಾವನೆ ಹಂಚಿಕೆ, ಗೌರವ, ಬದ್ಧತೆ, ಸಮಯ, ಗಮನ, ಇಚ್ಛೆ ಇಲ್ಲದಿರುವುದು ಸಂಸಾರದಲ್ಲಿ ಬಿರುಕು ಮೂಡಲು ಕಾರಣ’ ಎಂದು ಹೈಕೋರ್ಟ್ ವಕೀಲ ವಿಶ್ವನಾಥ ಬಿಚಗತ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ವಿಚ್ಛೇದನ ಅರ್ಜಿಗಳಲ್ಲಿ ಅನೈತಿಕ ಸಂಬಂಧದ ಆರೋಪವೇ ಹೆಚ್ಚಿರುತ್ತದೆ. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರಿನಂಥ ನಗರಗಳಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ. ನಗರ ಪ್ರದೇಶಗಳಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಮತ್ತು ವೈಯಕ್ತಿಕ ಸ್ವಾತಂತ್ರ್ಯ ಪದದ ದುರ್ಬಳಕೆ ಹೆಚ್ಚಾಗುತ್ತಿವೆ. ಕೆಲ ಬಾರಿ ಹೇಳಲಾಗದ, ಕೇಳಲಾಗದಷ್ಟು ಖಾಸಗಿ ಕಾರಣಗಳು ಕಕ್ಷಿದಾರರಿಂದ ಕೇಳುತ್ತೇವೆ’ ಎಂದರು.
‘ಮದುವೆಯಾದ ಒಂದೇ ದಿನಕ್ಕೆ ವಿಚ್ಛೇದನ ಕೋರಿ ಬೇರ್ಪಟ್ಟ ಜೋಡಿಗಳೂ ಇವೆ. ಮದುವೆ ಎಂದರೆ ಇಬ್ಬರನ್ನು ಆತ್ಮೀಯ ಬಂಧದಲ್ಲಿ ಸೇರಿಸುವುದು. ಸಾವಿನವರೆಗೂ ಆ ಬಂಧ ಇರುತ್ತದೆ. ಸವಾಲು, ಸಂಘರ್ಷಗಳನ್ನು ಹೊಂದಾಣಿಕೆಯಿಂದ ನಿಭಾಯಿಸುವುದೇ ಅದಕ್ಕಿರುವ ಏಕೈಕ ಪರಿಹಾರ’ ಎಂದು ಕೆಎಂಸಿ–ಆರ್‌ಐ ಆಸ್ಪತ್ರೆ ಮನಶಾಸ್ತ್ರಜ್ಞ ಡಾ. ಶಿವಾನಂದ ಹಿರೇಮಠ ತಿಳಿಸಿದರು.
ಪತಿ–ಪತ್ನಿಯರ ನಡುವಿನ ವಿವಾದಗಳನ್ನು ಪರಿಹರಿಸಲು ನಿಪುಣ ಮಧ್ಯಸ್ಥಿಕೆದಾರರನ್ನು ಹೈಕೋರ್ಟ್ ನೇಮಕ ಮಾಡಿ ವಿಚ್ಛೇದನದಿಂದ ದೂರು ಉಳಿಯುವಂತೆ ಮಾಡುತ್ತಿದೆಎಚ್.ಕೆ. ಪಾಟೀಲ ಕಾನೂನು ಸಚಿವ
ಮದುವೆಯಾಗಿ ಮಕ್ಕಳು ದೊಡ್ಡವರಾದರೂ ಸಣ್ಣಪುಟ್ಟ ವಿಷಯಕ್ಕೆ ವೈಮನಸ್ಸಾಗಿ ವಿಚ್ಛೇದನಕ್ಕೆ ಮುಂದಾಗುತ್ತಾರೆ. ವೈಯಕ್ತಿಕ ಬದುಕಿನಲ್ಲಿ ಪತಿ ಅಥವಾ ಪತ್ನಿ ಇಣುಕಿದಾಗಲೂ ಸ್ವಾತಂತ್ರ್ಯ ಹರಣ ಎಂಬ ಕಾರಣ ನೀಡುತ್ತಾರೆ.ವಿಶ್ವನಾಥ ಬಿಚಗತ್ತಿ ಹೈಕೋರ್ಟ್ ವಕೀಲ.
ಯಶಸ್ವಿ ಮತ್ತು ತೃಪ್ತಿಕರ ದಾಂಪತ್ಯಕ್ಕೆ ಪ್ರೀತಿ ಜೊತೆ ನಂಬಿಕೆಯೂ ಅತಿ ಮುಖ್ಯ. ಪತಿ ಮತ್ತು ಪತ್ನಿ ಇಬ್ಬರೂ ಬಾಧ್ಯಸ್ಥರಾಗಿರಬೇಕು. ಕ್ಷಣಿಕ ಸುಖ ಆಕರ್ಷಣೆ ಹಣಕ್ಕೆ ಮರುಳಾಗಿ ಸಂಸಾರವನ್ನೇ ಹಾಳು ಮಾಡಿಕೊಳ್ಳುತ್ತಾರೆ.ಡಾ. ಶಿವಾನಂದ ಹಿರೇಮಠ ಮನಶಾಸ್ತ್ರಜ್ಞ ಕೆಎಂಸಿ–ಆರ್‌ಐ ಆಸ್ಪತ್ರೆ
‘ಸಂಬಂಧಗಳ ಗುಟ್ಟು ರಟ್ಟಾಗುತ್ತದೆ ಎಂದು ಮೊಬೈಲ್ ಫೋನ್ ಅನ್ನು ಪತಿ/ಪತ್ನಿಗೆ ನೀಡದಿರುವುದು ಪಾಸ್‌ವರ್ಡ್ ಇಟ್ಟು ರಹಸ್ಯ ಕಾಪಾಡಿಕೊಳ್ಳುವುದು ಹಿಂದಿನ ಪ್ರೇಯಸಿ ಅಥವಾ ಪ್ರಿಯಕರ ಜೊತೆ ಸಂಬಂಧ ಇಟ್ಟುಕೊಳ್ಳುವುದು ವಿಚ್ಛೇದನ ಕೋರಿ ಬಂದ ಅರ್ಜಿಗಳಲ್ಲಿ ಇಂತಹ ದೂರುಗಳು ಸಾಮಾನ್ಯವಾಗಿವೆ. ಪೊಲೀಸರು ಹಾಗೂ ಗುರು–ಹಿರಿಯರ ಮಧ್ಯಸ್ಥಿಕೆಯಲ್ಲಿ ಆಪ್ತ ಸಮಾಲೋಚನೆ ಮಧ್ಯಸ್ಥಿಕೆದಾರರ ಮೂಲಕ ದಂಪತಿಯನ್ನು ಒಂದಾಗಿಸಲು ನ್ಯಾಯಾಲಯ ಯತ್ನಿಸುತ್ತದೆ. ಹೊಂದಾಣಿಕೆ ಅಸಾಧ್ಯ ಆದಾಗ ಮಾತ್ರ ವಿಚ್ಛೇದನಕ್ಕೆ ಅನುವು ಮಾಡಿಕೊಡುತ್ತದೆ’ ಎಂದು ವಕೀಲ ಸಂಜೀವ ಬಡಸ್ಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.