ADVERTISEMENT

2015ರ ವೇಳೆಗೆ ಬಿಆರ್‌ಟಿಎಸ್ ಸನ್ನದ್ಧ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 9:50 IST
Last Updated 9 ಅಕ್ಟೋಬರ್ 2012, 9:50 IST

ಹುಬ್ಬಳ್ಳಿ: `ಹುಬ್ಬಳ್ಳಿ-ಧಾರವಾಡ ನಡುವೆ ಬಸ್ ಕ್ಷಿಪ್ರ ಸಾರಿಗೆ ವ್ಯವಸ್ಥೆ (ಬಿಆರ್‌ಟಿಎಸ್)ಗೆ ಮಾರ್ಗ ನಿರ್ಮಾಣ ಕಾಮಗಾರಿ ಶೀಘ್ರವೇ ಆರಂಭವಾಗಲಿದ್ದು, 2015ರ ಜನವರಿ ವೇಳೆಗೆ ಈ ಮಾರ್ಗ ಬಳಕೆಗೆ ಸನ್ನದ್ಧವಾಗಲಿದೆ~ ಎಂದು ರಾಜ್ಯ ನಗರ ಪ್ರದೇಶ ಸಾರಿಗೆ ನಿರ್ದೇಶನಾಲಯದ (ಡಲ್ಟ್) ಕಮಿಷನರ್ ವಿ. ಮಂಜುಳಾ ಭರವಸೆ ವ್ಯಕ್ತಪಡಿಸಿದರು.

ಯೋಜನೆ ಅನುಷ್ಠಾನಕ್ಕೆ ಸ್ಥಾಪಿಸಲಾದ ಹುಬ್ಬಳ್ಳಿ-ಧಾರವಾಡ ಬಿಆರ್‌ಟಿಎಸ್ ಕಂಪೆನಿಯ ಮೂರನೇ ಆಡಳಿತ ಮಂಡಳಿ ಸಭೆಯಲ್ಲಿ ಸೋಮವಾರ ಅವರು ಮಾತನಾಡಿದರು. `ವಿಶ್ವಬ್ಯಾಂಕ್ ಈ ಯೋಜನೆ ಅನುಷ್ಠಾನಕ್ಕಾಗಿ 47 ದಶಲಕ್ಷ ಡಾಲರ್ ನೆರವು ನೀಡುವ ನಿರೀಕ್ಷೆ ಇದೆ~ ಎಂದು ಮಾಹಿತಿ ನೀಡಿದರು.

`ರಾಜ್ಯದ ಮೊದಲ ಬಿಆರ್‌ಟಿಎಸ್ ಯೋಜನೆಗೆ ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಒಪ್ಪಿಗೆ ನೀಡಿದ್ದು, ಒಟ್ಟಾರೆ ರೂ 692 ಕೋಟಿ ವೆಚ್ಚವಾಗಲಿದೆ. ರಸ್ತೆಯ ಎರಡೂ ಬದಿ ಬಿಆರ್‌ಟಿಎಸ್‌ಗಾಗಿ ತಲಾ 22.5 ಕಿ.ಮೀ. ಉದ್ದದ ಪ್ರತ್ಯೇಕ ಮಾರ್ಗಗಳು ನಿರ್ಮಾಣವಾಗಲಿದ್ದು, ಮಾರ್ಗದ ಉದ್ದಕ್ಕೂ ಡಿಪೊಗಳು ಮತ್ತು ನಿಲ್ದಾಣಗಳು ತಲೆ ಎತ್ತಲಿವೆ~ ಎಂದು ವಿವರಿಸಿದರು.

`ಬಿಆರ್‌ಟಿಎಸ್ ಮೂಲಕ ಸಾದಾ ಹಾಗೂ ಎಕ್ಸ್‌ಪ್ರೆಸ್ ಬಸ್ ಸೇವೆಗಳೆರಡೂ ಪ್ರಯಾಣಿಕರಿಗೆ ಲಭ್ಯವಾಗಲಿವೆ. ಮಾರ್ಗದ ಉದ್ದಕ್ಕೂ 30 ನಿಲ್ದಾಣಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಬಿಆರ್‌ಟಿಎಸ್‌ಗಾಗಿಯೇ ಒಂದು ಪ್ರತ್ಯೇಕ ಡಿಪೊ ಸಹ ನಿರ್ಮಾಣಗೊಳ್ಳಲಿದೆ~ ಎಂದು ಹೇಳಿದರು.

`ಮಾರ್ಗದ ಉದ್ದಕ್ಕೂ ನಿಲ್ದಾಣಗಳ ನಿರ್ಮಾಣ ಕಾಮಗಾರಿಗೆ ಡಿಸೆಂಬರ್‌ನಲ್ಲಿ ಟೆಂಡರ್ ಕರೆಯಲಾಗುವುದು~ ಎಂದ ಅವರು, `ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣವನ್ನು ಹೊಸೂರಿನ ಡಿಪೊ ಪ್ರದೇಶಕ್ಕೆ ಸ್ಥಳಾಂತರಿಸಿ, ಡಿಪೊವನ್ನು ನಿಲ್ದಾಣವಿರುವ ಪ್ರದೇಶದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ~ ಎಂದು ವಿವರಿಸಿದರು.

`ಹು-ಧಾ ಬಿಆರ್‌ಟಿಎಸ್ ಕಂಪೆನಿಯ ರೂ 20 ಕೋಟಿ ಮೊತ್ತದ ಷೇರು ಬಂಡವಾಳದಲ್ಲಿ ರಾಜ್ಯ ಸರ್ಕಾರ ಶೇ 70ರಷ್ಟನ್ನು ಭರಿಸಲಿದೆ. ಆ ಪೈಕಿ ರೂ 10 ಕೋಟಿಯನ್ನು ಆಗಲೇ ಬಿಡುಗಡೆ ಮಾಡಲಾಗಿದೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ರೂ ಮೂರು ಕೋಟಿ, ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ (ಹುಡಾ) ಮತ್ತು ಪಾಲಿಕೆ ತಲಾ ರೂ 1.5 ಕೋಟಿ ತಮ್ಮ ಪಾಲಿನ ಬಂಡವಾಳವನ್ನು ಸಂದಾಯ ಮಾಡಿವೆ~ ಎಂದು ಮಾಹಿತಿ ನೀಡಿದರು.

`ಕಂಪೆನಿಯ ಪ್ರಾಥಮಿಕ ವೆಚ್ಚಕ್ಕಾಗಿ ಸರ್ಕಾರ ಹೆಚ್ಚುವರಿಯಾಗಿ ರೂ 5 ಕೋಟಿ ಮೊತ್ತವನ್ನು ಬಿಡುಗಡೆ ಮಾಡಿದ್ದು, ಅಗತ್ಯವಾದ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ~ ಎಂದು ಮಂಜುಳಾ ಹೇಳಿದರು.

`ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ಒಟ್ಟಾರೆ 68 ಎಕರೆ ಜಮೀನು ಅಗತ್ಯವಿದ್ದು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್‌ಡಿಸಿಎಲ್) ಮೂಲಕ ಈ ಭೂಮಿಯನ್ನು ಪಡೆಯಲು ನಿರ್ಧರಿಸಲಾಗಿದೆ. ಯೋಜನೆಗೆ ಬೇಕಾದ ಭೂಮಿ ಒಟ್ಟಾರೆ ಹತ್ತು ಕಂದಾಯ ಗ್ರಾಮಗಳಲ್ಲಿ ಹರಿದು ಹಂಚಿಹೋಗಿದೆ. ಈಗಾಗಲೇ ಏಳು ಗ್ರಾಮಗಳಲ್ಲಿ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ~ ಎಂದು ವಿವರಿಸಿದರು. `ಪರಸ್ಪರ ಸಹಮತದ ಮೂಲಕ ಪರಿಹಾರ ಮೊತ್ತ ನಿರ್ಧರಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ಶೀಘ್ರವೇ ಗುಂಪು ಸಭೆಗಳನ್ನು ಸಂಘಟಿಸಲಾಗುತ್ತದೆ~ ಎಂದು ಮಂಜುಳಾ ತಿಳಿಸಿದರು.

`ಬಿಆರ್‌ಟಿಎಸ್ ಯೋಜನೆ ಅನುಷ್ಠಾನಕ್ಕೆ ಬಂದಮೇಲೆ ಅವಳಿನಗರದ ನಡುವಿನ ಪ್ರಯಾಣಕ್ಕೆ 20ರಿಂದ 25 ನಿಮಿಷ ಸಾಕಾಗಲಿದೆ~ ಎಂದು ಎನ್‌ಡಬ್ಲ್ಯುಕೆಆರ್‌ಟಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಸಾವಕಾರ ಭರವಸೆ ವ್ಯಕ್ತಪಡಿಸಿದರು.

ಮೇಯರ್ ಡಾ. ಪಾಂಡುರಂಗ ಪಾಟೀಲ, ಉಪ ಮೇಯರ್ ಭಾರತಿ ಪಾಟೀಲ, ಶಾಸಕ ವೀರಭದ್ರಪ್ಪ ಹಾಲಹರವಿ, ಹುಡಾ ಅಧ್ಯಕ್ಷ ಲಿಂಗರಾಜ ಪಾಟೀಲ, ಕೆಆರ್‌ಡಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಬಿ.ಎಚ್. ಅನಿಲಕುಮಾರ್, ಎನ್‌ಡಬ್ಲ್ಯುಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಮನೋಜ್ ಜೈನ್, ಜಿಲ್ಲಾಧಿಕಾರಿ ಸಮೀರ್ ಶುಕ್ಲಾ, ಪಾಲಿಕೆ ಕಮಿಷನರ್ ವೈ.ಎಸ್. ಪಾಟೀಲ, ಪ್ರಾದೇಶಿಕ ಸಾರಿಗೆ ಕಮಿಷನರ್ ಮೊಹಮ್ಮದ್ ಸುಲೇಮಾನ್, ಬಿಆರ್‌ಟಿಎಸ್ ನೋಡಲ್ ಅಧಿಕಾರಿ ಗಣೇಶ ರಾಠೋಡ್ ಮತ್ತಿತರರು ಹಾಜರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.