ADVERTISEMENT

ಹೂಡಿಕೆ ನೆಪದಲ್ಲಿ ₹21.86 ಲಕ್ಷ ವಂಚನೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 5:01 IST
Last Updated 16 ಆಗಸ್ಟ್ 2022, 5:01 IST

ಹುಬ್ಬಳ್ಳಿ: ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್‍ನಲ್ಲಿ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ಪಡೆಯಬಹುದು ಎಂದು ಗೋಕುಲ ರಸ್ತೆಯ ಶ್ರೀಗಿರಿಯಲಿಂಗ ಮತ್ತು ಅವರ ಪುತ್ರ ಈಶಾನ್‌ ಅವರನ್ನು ನಂಬಿಸಿದ ವ್ಯಕ್ತಿ, ಆನ್‌ಲೈನ್‌ನಲ್ಲಿ ₹21.86 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.

ಯೂಟ್ಯೂಬ್‌ನಲ್ಲಿ ಜಾಹೀರಾತು ನೋಡಿದ್ದ ಈಶಾನ್‌, ಟೆಲಿಗ್ರಾಮ್‌ನಲ್ಲಿ ಖಾತೆ ತೆರೆದು ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಲಾಭವಾಗಿದ್ದರಿಂದ ಕ್ಯೂಟೆಕ್ಸ್ ಆ್ಯಪ್‌ನಲ್ಲಿ ಸಾಲ ನೀಡಿದ್ದ ವಂಚಕ, ₹35 ಲಕ್ಷ ಹಣ ಹೂಡಿಕೆ ಮಾಡಲು ಪ್ರೇರೇಪಿಸಿದ್ದ. ಇದರಿಂದ ಚಿಂತೆಗೀಡಾಗಿ ಅನಾರೋಗ್ಯಕ್ಕೊಳಗಾಗಿದ್ದ ಈಶಾನ್‌, ತಂದೆಗೆ ವಿಷಯ ತಿಳಿಸಿದ್ದರು.

ಮಗನ ಆರೋಗ್ಯವೇ ಮುಖ್ಯ ಎಂದು ತಂದೆ ಶ್ರೀಗಿರಿಲಿಂಗ ಅವರು, ತಮ್ಮ ಹಾಗೂ ಪತ್ನಿಯ ಖಾತೆಗಳಿಂದ ಕ್ಯೂಟೆಕ್ಸ್ ಬೈನರಿ ಟ್ರೇಡಿಂಗ್ ಕಂಪನಿಗೆ ₹19.87 ಲಕ್ಷ ಹೂಡಿಕೆ ಮಾಡಿದ್ದರು. ಆಗ ವಂಚಕ ಅಷ್ಟೂ ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಜೀವ ಬೆದರಿಕೆ: ಹೊಸೂರಿನ ವಿದ್ಯಾರ್ಥಿ ಗೌತಮ್‌ ದಾಂಡೇಲಿ ಅವರ ಇನ್‌ಸ್ಟಾಗ್ರಾಂ ಮತ್ತು ಮೊಬೈಲ್‌ ನಂಬರ್‌ಗೆ, ಅಲ್ಲಿಯದೇ ನಿವಾಸಿ ಸಹದೇವ ಹಿರೆಕೇರೂರ ಎಂಬಾತ ಜೀವ ಬೆದರಿಕೆ ಹಾಕಿರುವ ಕುರಿತು ಉಪನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚೇತನ ಹಿರೇಕೆರೂರ ಅವರ ಬೆಂಬಲದಿಂದ ಸಹದೇವ ಅವಾಚ್ಯವಾಗಿ ನಿಂದಿಸಿ, ಜೀವಬೆದರಿಕೆ ಹಾಕಿರುವ ಧ್ವನಿ ಸಂದೇಶ(ವೈಸ್‌ ಮಸೆಜ್‌) ಕಳುಹಿಸಿದ್ದಾರೆ ಎಂದು ಗೌತಮ್‌ ಸಹೋದರ ನಿಖಿಲ್‌ ದಾಂಡೇಲಿ ದೂರಿನಲ್ಲಿ ತಿಳಿಸಿದ್ದಾರೆ.

ಇಬ್ಬರ ಬಂಧನ: ಕಾರಿನ ಸೈಲೆನ್ಸರ್‌ ಪೈಪ್‌ ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಕಸಬಾಪೇಟೆ ಠಾಣೆ ಪೊಲೀಸರು ಬಂಧಿಸಿ, 13 ಸೈಲೆನ್ಸರ್‌ ಪೈಪ್‌ಗಳು, ಬೈಕ್‌ ಹಾಗೂ ₹1,500 ವಶಪಡಿಸಿಕೊಂಡಿದ್ದಾರೆ. ಸೈಲೆನ್ಸರ್‌ ಪೈಪ್‌ ಕಳವು ಆಗಿರುವ ಕುರಿತು ಕಸಬಾಪೇಟೆ ಪೊಲೀಸ್‌ ಠಾಣೆಯಲ್ಲಿ ನಾಲ್ಕು, ಬೆಂಡಿಗೇರಿ ಪೊಲೀಸ್‌ ಠಾಣೆಯಲ್ಲಿ ಮೂರು, ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಎರಡು, ಎಪಿಎಂಸಿ ಪೊಲೀಸ್‌ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಇನ್‌ಸ್ಪೆಕ್ಟರ್‌ ಎ.ಎಂ. ಬನ್ನಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.