ADVERTISEMENT

24ರಂದು ಚುನಾವಣೆ ನಡೆಯುವ ಸಾಧ್ಯತೆ: ವಿಜಯಲಕ್ಷ್ಮಿ ಹೊಸಕೋಟಿ ಉಪ ಮೇಯರ್?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 10:15 IST
Last Updated 14 ಮಾರ್ಚ್ 2012, 10:15 IST

ಹುಬ್ಬಳ್ಳಿ: ಉಪ ಮೇಯರ್ ಹುದ್ದೆಗೆ ಮೀಸಲಾತಿಯನ್ನು ಮರು ನಿಗದಿ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಮಹಾನಗರ ಪಾಲಿಕೆಗೆ ಸಿಕ್ಕಿದ್ದು, ಒಬಿಸಿ `ಬಿ~ ವರ್ಗದ ಮಹಿಳೆಗೆ ಆ ಸ್ಥಾನವನ್ನು ಕಾದಿರಿಸಲಾಗಿದೆ.
ಈ ಮೊದಲು ಉಪ ಮೇಯರ್ ಹುದ್ದೆಯನ್ನು ಪರಿಶಿಷ್ಟ ಪಂಗಡದ ಮಹಿಳೆಗೆ ಮೀಸಲು ಇಡಲಾಗಿತ್ತು.
 
ಆಡಳಿತ ಪಕ್ಷವಾದ ಬಿಜೆಪಿಯಲ್ಲಿ ಈ ವರ್ಗದ ಒಬ್ಬ ಮಹಿಳಾ ಸದಸ್ಯರೂ ಇಲ್ಲದ್ದರಿಂದ ಪಕ್ಷದ ನಾಯಕರು ಮೀಸಲಾತಿ ಬದಲಾಯಿಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಿದ್ದರು. ಮೀಸಲಾತಿಯನ್ನು ಒಬಿಸಿ `ಎ~ ವರ್ಗದ ಮಹಿಳೆಗೆ ಬದಲಾಯಿಸಲಾಗಿದೆ ಎನ್ನಲಾಗಿತ್ತಾದರೂ ಕೊನೆ ಗಳಿಗೆಯಲ್ಲಿ ಒಬಿಸಿ `ಬಿ~ ವರ್ಗದ ಮಹಿಳೆಗೆ ಮೀಸಲು ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈಗಾಗಲೇ ಒಂದು ಸಲ ಉಪ ಮೇಯರ್ ಹುದ್ದೆಯನ್ನು ಅಲಂಕರಿಸಿರುವ 19ನೇ ವಾರ್ಡ್ ಸದಸ್ಯೆ ಭಾರತಿ ಪಾಟೀಲ ಮತ್ತು 46ನೇ ವಾರ್ಡ್ ಸದಸ್ಯೆ ವಿಜಯಲಕ್ಷ್ಮಿ ಹೊಸಕೋಟಿ ಮೀಸಲಾತಿ ಸೌಲಭ್ಯ ಪಡೆದ ಈ ಪ್ರವರ್ಗದ ವ್ಯಾಪ್ತಿಗೆ ಬರುತ್ತಾರೆ.

ಭಾರತಿ, ಈಗಾಗಲೇ ಉಪ ಮೇಯರ್ ಆಗಿರುವುದರಿಂದ ವಿಜಯಲಕ್ಷ್ಮಿ ಹೊಸಕೋಟಿ ಆ ಹುದ್ದೆಯನ್ನು ಅಲಂಕರಿಸುವುದು ಖಚಿತ ಎಂದು ಪಕ್ಷದ ಮೂಲಗಳು ತಿಳಿಸಿವೆ.

`ಮಾಜಿ ಮೇಯರ್ ಆಗಿರುವ ಪತಿ ವಿಜಯಾನಂದ ಹೊಸಕೋಟಿ ಅವರ ಮಾರ್ಗದರ್ಶನವೂ ವಿಜಯಲಕ್ಷ್ಮಿ ಅವರ ಪರವಾಗಿ ಕೆಲಸ ಮಾಡಿದೆ. ಪಕ್ಷದ ನಾಯಕರ ಜೊತೆ ವಿಜಯಾನಂದ ಹೊಂದಿರುವ ಉತ್ತಮ ಸಂಬಂಧ ಅವರಿಗೆ ಉಪ ಮೇಯರ್ ಹುದ್ದೆ ತಪ್ಪದಂತೆ ನೋಡಿಕೊಳ್ಳಲಿದೆ~ ಎಂದು ಆ ಮೂಲಗಳು ಸ್ಪಷ್ಟಪಡಿಸಿವೆ.

ಪಾಲಿಕೆಯ ಇನ್ನಿಬ್ಬರು ಬಿಜೆಪಿ ಸದಸ್ಯೆಯರು ತಾವೂ ಒಬಿಸಿ `ಬಿ~ ಪ್ರವರ್ಗಕ್ಕೆ ಸೇರಿದ್ದಾಗಿ ತಿಳಿಸಿದ್ದು, ಈ ಕುರಿತಂತೆ ದಾಖಲಾತಿ ಹಾಜರುಪಡಿಸುವಂತೆ ಮುಖಂಡರು ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಧಾರವಾಡದಲ್ಲಿ ಸಭೆ: ಇಡೀ ಹುಬ್ಬಳ್ಳಿ ಸೋಮವಾರ ರಂಗಿನಾಟದಲ್ಲಿ ಮುಳುಗಿದ್ದರೆ ಧಾರವಾಡದಲ್ಲಿ ಶಾಸಕರಾದ ಚಂದ್ರಕಾಂತ ಬೆಲ್ಲದ ಮತ್ತು ಸೀಮಾ ಮಸೂತಿ ಪಾಲಿಕೆ ಸದಸ್ಯರ ಸಭೆ ನಡೆಸಿ, ಮೇಯರ್ ಚುನಾವಣೆ ಕುರಿತಂತೆ ಚರ್ಚೆ ನಡೆಸಿದರು. ಧಾರವಾಡಕ್ಕೆ ಮತ್ತೊಂದು ಅವಧಿಗೆ ಮೇಯರ್ ಹುದ್ದೆಯನ್ನು ಕೊಡಬೇಕು ಎಂದು ಸಭೆಯಲ್ಲಿ ಒಕ್ಕೊರಲ ಒತ್ತಾಯ ಮಾಡಲಾಗಿದೆ.

ಮಹಾಪೌರರ ಗೌನು ತೊಡುವ ಆಕಾಂಕ್ಷಿಗಳಾದ ಪ್ರಕಾಶ ಗೋಡಬೋಲೆ ಮತ್ತು ಶಿವು ಹಿರೇಮಠ ಸೇರಿದಂತೆ ಪಕ್ಷದ ಬಹುತೇಕ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.`ಮೊದಲು ಧಾರವಾಡಕ್ಕೆ ಮೇಯರ್ ಪಟ್ಟ ನಿಗದಿಯಾಗುವಂತೆ ನೋಡಿಕೊಳ್ಳೋಣ. ಆಮೇಲೆ ಅಭ್ಯರ್ಥಿ ಯಾರೆಂಬುದನ್ನು ನಿರ್ಧರಿಸೋಣ~ ಎಂಬ ಸಲಹೆಯನ್ನು ಬೆಲ್ಲದ ನೀಡಿದರು ಎನ್ನಲಾಗಿದೆ.

ಮೇಯರ್ ಚುನಾವಣೆ ಹತ್ತಿರವಾದಂತೆ ಆಕಾಂಕ್ಷಿಗಳ ಪಟ್ಟಿ ಉದ್ದವಾಗುತ್ತಿದ್ದು, ವರಿಷ್ಠರು ಆ ಪಟ್ಟಿಗೆ ಕತ್ತರಿ ಪ್ರಯೋಗವನ್ನೂ ಆರಂಭಿಸಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಹುಬ್ಬಳ್ಳಿಯಿಂದ ಡಾ.ಪಾಂಡುರಂಗ ಪಾಟೀಲ, ಸುಧೀರ್ ಸರಾಫ್, ಧಾರವಾಡದಿಂದ ಪ್ರಕಾಶ ಗೋಡಬೋಲೆ ಮತ್ತು ಶಿವು ಹಿರೇಮಠ ಅವರ ಹೆಸರು ಮಾತ್ರ ಮುಂಚೂಣಿಯಲ್ಲಿದೆ.

ಉಪ ಮೇಯರ್ ಸ್ಥಾನದ ಅಭ್ಯರ್ಥಿ ವಿಜಯಲಕ್ಷ್ಮಿ ಹೊಸಕೋಟಿ ಜನತಾ ಪರಿವಾರದಿಂದ ಬಂದವರು. ಮೇಯರ್ ಹುದ್ದೆಯನ್ನು ಇಂತಹದ್ದೇ ಹಿನ್ನೆಲೆಯಿಂದ ಬಂದವರಿಗೆ ನೀಡಬಾರದು ಎಂಬ ವಾದವೂ ಪಕ್ಷದ ವಲಯದಲ್ಲಿ ಕೇಳಿ ಬಂದಿದೆ. ಪಾಂಡುರಂಗ ಪಾಟೀಲರನ್ನು ಮೇಯರ್ ಹುದ್ದೆ ಅಲಂಕರಿಸದಂತೆ ತಡೆಯಲು ಬೇರೆ ದಾರಿಯಿಲ್ಲದೆ ಈ ದಾಳ ಉರುಳಿಸಲಾಗಿದೆ ಎಂಬ ಮಾತುಗಳು ತೇಲಾಡುತ್ತಿವೆ.

ದಿನಾಂಕ ಇಂದು ನಿಗದಿ: ಉಪ ಮೇಯರ್ ಹುದ್ದೆ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ಅಧಿಸೂಚನೆ ತಲುಪಿದ್ದು, ಚುನಾವಣಾ ದಿನಾಂಕವನ್ನು ನಿಗದಿಮಾಡುವಂತೆ ಕೇಳಿಕೊಳ್ಳಲು ಬುಧವಾರ ಬೆಳಗಾವಿಯಲ್ಲಿ ಪ್ರಾದೇಶಿಕ ಆಯುಕ್ತರನ್ನು ಭೇಟಿ ಮಾಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಾದೇಶಿಕ ಆಯುಕ್ತರು ಬುಧವಾರವೇ ಸಮ್ಮತಿ ನೀಡಿದರೂ ಏಳು ದಿನಗಳ ನೋಟಿಸ್ ಅವಧಿ ಮತ್ತು ಸದಸ್ಯರಿಗೆ ನೋಟಿಸ್ ತಲುಪಿಸಲು ಬೇಕಾದ ಕನಿಷ್ಠ 2-3 ದಿನಗಳ ಕಾಲಾವಕಾಶ ಸೇರಿದರೆ ಹತ್ತು ದಿನಗಳ ಬಳಿಕ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ನಡೆಯಲಿದೆ. ಇದೇ 23ರಂದು ಯುಗಾದಿ ಹಬ್ಬ. ಹೀಗಾಗಿ 24 ಇಲ್ಲವೆ 26ರಂದು ಚುನಾವಣೆ ನಿಗದಿಯಾಗುವ ಸಾಧ್ಯತೆ ಇದೆ.

ಚುನಾವಣಾ ದಿನಾಂಕ ಅಧಿಕೃತವಾಗಿ ಗೊತ್ತಾದ ನಂತರವೇ ಮುಂದಿನ ಪ್ರಕ್ರಿಯೆಯನ್ನು ಆರಂಭಿಸಲಾಗು ವುದು ಎಂದು ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಮಹೇಶ ಟೆಂಗಿನಕಾಯಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.