ADVERTISEMENT

ಹುಬ್ಬಳ್ಳಿ ಧಾರವಾಡ: ಅಪಘಾತದಲ್ಲಿ ಐದು ವರ್ಷಗಳಲ್ಲಿ 529 ಮಂದಿ ಸಾವು!

ರಸ್ತೆ ಅಪಘಾತ: 2,270 ಪ್ರಕರಣ ದಾಖಲು, ವಿಶೇಷ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2023, 23:31 IST
Last Updated 2 ಜೂನ್ 2023, 23:31 IST
ಹುಬ್ಬಳ್ಳಿ ಸ್ಟೇಷನ್‌ ರಸ್ತೆಯಲ್ಲಿ ಶುಕ್ರವಾರ ಹೆಲ್ಮೆಟ್‌ ಇಲ್ಲದ ಬೈಕ್‌ ಸವಾರರೊಬ್ಬರನ್ನು ಸಂಚಾರ ಪೊಲೀಸರು ತಡೆದರು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ
ಹುಬ್ಬಳ್ಳಿ ಸ್ಟೇಷನ್‌ ರಸ್ತೆಯಲ್ಲಿ ಶುಕ್ರವಾರ ಹೆಲ್ಮೆಟ್‌ ಇಲ್ಲದ ಬೈಕ್‌ ಸವಾರರೊಬ್ಬರನ್ನು ಸಂಚಾರ ಪೊಲೀಸರು ತಡೆದರು /ಪ್ರಜಾವಾಣಿ ಚಿತ್ರ: ಗೋವಿಂದರಾಜ ಜವಳಿ   

ನಾಗರಾಜ್‌ ಬಿ.ಎನ್.

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರದ ವಿವಿಧೆಡೆ ಕಳೆದ ಐದು ವರ್ಷಗಳಲ್ಲಿ ನಡೆದ ವಾಹನ ಅಪಘಾತಗಳಲ್ಲಿ ಬರೋಬ್ಬರಿ 529 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅವುಗಳಲ್ಲಿ 100ಕ್ಕೂ ಹೆಚ್ಚು ಮಂದಿ ಹೆಲ್ಮೆಟ್ ಧರಿಸದೆ, ಬೈಕ್ ಸವಾರಿ ಮಾಡಿದವರಾಗಿದ್ದಾರೆ!

ಸಂಚಾರ ನಿಯಮಗಳನ್ನು ಪಾಲಿಸದೆ ವಾಹನಗಳನ್ನು ಚಲಾಯಿಸಿರುವುದರಿಂದ ನಡೆದಿರುವ ಅಪಘಾತ ಪ್ರಕರಣಗಳಿವು. ಅತಿವೇಗದ ಚಾಲನೆ, ಬೇಜವಾಬ್ದಾರಿ ಚಾಲನೆ, ಮದ್ಯಪಾನ ಮಾಡಿ ಚಾಲನೆ, ಸೀಟ್‌ಬೆಲ್ಟ್‌ ಧರಿಸದೆ ಚಾಲನೆ ಹಾಗೂ ಹೆಲ್ಮೆಟ್ ಧರಿಸದೆ ಬೈಕ್‌ಗಳನ್ನು ಚಲಾಯಿಸಿದ ಪರಿಣಾಮ ಅಪಘಾತಗಳಾಗಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರ ವಿರುದ್ಧ ಪ್ರತಿದಿನ ದಂಡ ವಸೂಲಿ ಮಾಡುತ್ತಿದ್ದರೂ, ನಿಯಮ ಉಲ್ಲಂಘನೆ ಪ್ರಕರಣಗಳ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ.

ADVERTISEMENT

ಕಮಿಷನರೇಟ್‌ ಘಟಕದ ವ್ಯಾಪ್ತಿಯಲ್ಲಿ ನಾಲ್ಕು ಸಂಚಾರ ಠಾಣೆಗಳಿದ್ದು, ಪ್ರತಿದಿನ ಮೂರು–ನಾಲ್ಕು ಅಪಘಾತ ಪ್ರಕರಣಗಳು ದಾಖಲಾಗುತ್ತವೆ. 2018ರಿಂದ 2023 (ಮೇ 31)ವರೆಗೆ ಒಟ್ಟು 2,270 ಅಪಘಾತಗಳು ಸಂಭವಿಸಿವೆ. 2,259 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ 500ಕ್ಕೂ ಹೆಚ್ಚು ಮಂದಿ ಕೈ, ಕಾಲು ಕಳೆದುಕೊಂಡು ಶಾಶ್ವತ ಅಂಗವಿಕಲರಾಗಿದ್ದಾರೆ. ಹೆಲ್ಮೆಟ್‌ ಇಲ್ಲದೆ ಮೃತಪಟ್ಟವರಲ್ಲಿ ಯುವಕರ ಸಂಖ್ಯೆಯೇ ಜಾಸ್ತಿಯಿದೆ. ಉತ್ತರ ಮತ್ತು ಪೂರ್ವ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯ ನಗರದ ಬಿಆರ್‌ಟಿಎಸ್‌ ಕಾರಿಡಾರ್‌ ಸೇರಿದಂತೆ ಗದಗ ಮುಖ್ಯ ರಸ್ತೆ, ಗೋಕುಲ ರಸ್ತೆ, ತಾರಿಹಾಳ ಬೈಪಾಸ್‌ಗಳಲ್ಲಿಯೇ ಅತಿ ಹೆಚ್ಚು ಅಪಘಾತಗಳಾಗಿವೆ.

ತಾರಿಹಾಳ ಬೈಪಾಸ್‌ ರಸ್ತೆ ಪಕ್ಕ ರಾತ್ರಿವೇಳೆ ಗೂಡ್ಸ್‌, ಕಂಟೇನರ್‌ ವಾಹನಗಳು ಕೆಟ್ಟು ನಿಂತಿರುತ್ತವೆ. ಬೈಪಾಸ್‌ ರಸ್ತೆಯೆಂದು ಕೆಲವರು ವಾಹನಗಳನ್ನು ವೇಗವಾಗಿ ಚಲಾಯಿಸಿ, ನಿಂತಿರುವ ವಾಹನಗಳಿಗೆ ಡಿಕ್ಕಿ ಹೊಡೆಯುತ್ತಾರೆ. ಇನ್ನು ಕೆಲವರು ಮದ್ಯಪಾನ, ಮಾದಕ ವಸ್ತುಗಳ ಸೇವನೆ ಮಾಡಿ ನಿಯಂತ್ರಣ ಕಳೆದುಕೊಂಡು ರಸ್ತೆಯ ವಿಭಜಕಕ್ಕೋ, ಎದುರಿಗೆ ಇರುವ ವಾಹನಗಳಿಗೋ ಡಿಕ್ಕಿ ಹೊಡೆಯುತ್ತಾರೆ. ಆ ರಸ್ತೆಯಲ್ಲಿ ಸಂಚರಿಸುವ ಬಹುತೇಕ ಬೈಕ್‌ ಸವಾರರು ಹೆಲ್ಮೆಟ್‌ಗಳನ್ನೇ ಧರಿಸುವುದಿಲ್ಲ. ಅಪಘಾತಗಳಾದಾಗ ತಲೆಗೆ ಗಂಭೀರ ಪೆಟ್ಟು ಬೀಳುವುದಿಂದ ಮೃತಪಡುತ್ತಾರೆ. ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳನ್ನು ತಪ್ಪಿಸಬಹುದು ಎಂದು ಪೊಲೀಸರು ಹೇಳುತ್ತಾರೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಕಮಿಷನರ್‌ ರಮನ್‌ ಗುಪ್ತಾ, ‘ಇತ್ತೀಚೆಗೆ ಅವಳಿನಗರದಲ್ಲಿ ವಾಹನ ಸವಾರರಿಂದ ಸಂಚಾರ ನಿಯಮಗಳ ಉಲ್ಲಂಘನೆ ಹೆಚ್ಚಾಗುತ್ತಿವೆ. ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಮಾಡುವವರ ಸಂಖ್ಯೆಯೂ ಹೆಚ್ಚಾಗಿವೆ. ಸಿಗ್ನಲ್‌ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳಿಂದ ಅವರನ್ನು ಪತ್ತೆಹಚ್ಚಿ, ನೋಟಿಸ್‌ ಕಳುಹಿಸಿದರೂ ನಿಯಂತ್ರಣಕ್ಕೆ ಬರುತ್ತಿಲ್ಲ. ಕೆಲವು ಬೈಕ್‌ ಸವಾರರು 10–15 ಬಾರಿ ಸಂಚಾರ ನಿಯಮ ಉಲ್ಲಂಘಿಸಿರುವುದು ಸಹ ಕಂಡುಬಂದಿದೆ’ ಎಂದರು.

‘ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಮೇ 31ರಿಂದ ಅವಳಿನಗರದಲ್ಲಿ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿದ್ದೇವೆ. ಮುಖ್ಯವಾಗಿ ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಮಾಡುವವರನ್ನು ತಡೆದು ಜಾಗೃತಿ ಮೂಡಿಸುತ್ತಿದ್ದೇವೆ. ಯಾಕಾಗಿ ಹೆಲ್ಮೆಟ್‌ ಧರಿಸಬೇಕು ಎಂದು ತಿಳಿಸಿ ಹೇಳುತ್ತಿದ್ದೇವೆ. ನಮಗೆ ದಂಡ ಮುಖ್ಯವಲ್ಲ, ಸಾರ್ವಜನಿಕರ ಜೀವ ಮುಖ್ಯವಾಗಿದ್ದು, ಅವರನ್ನು ನಂಬಿಕೊಂಡು ಒಂದು ಕುಟುಂಬ ಇರುತ್ತದೆ. ಎರಡು ದಿನಗಳ ಹಿಂದೆ ನಗರದಲ್ಲಿ ಹೆಲ್ಮೆಟ್‌ ಇಲ್ಲದೆ ಬೈಕ್‌ ಓಡಿಸಿದ ವ್ಯಕ್ತಿಗೆ ವಾಹನ ಡಿಕ್ಕಿ ಹೊಡೆದು, ತಲೆ ಛಿದ್ರವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾರ್ವಜನಿಕರು ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ಅಂಕಿ–ಅಂಶ

ವರ್ಷ;ಮೃತಪಟ್ಟವರು;ಗಾಯಗೊಂಡವರು;ಪ್ರಕರಣಗಳ ಸಂಖ್ಯೆ

2018;90;408;370

2019;92;479;430

2020;91;323;342

2021;109;382;428

2022;108;491;513

2023;39;176;187(ಮೇ 31ರವರೆಗೆ)

5 ವರ್ಷದಲ್ಲಿ ₹38.48 ಕೋಟಿ ಸಂಗ್ರಹ

2018ರಿಂದ 2023ರ ಮೇ 31ರವರೆಗೆ ಅವಳಿನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ 12,53,922 ಪ್ರಕರಣಗಳನ್ನು ದಾಖಲಿಸಿಕೊಂಡು, ₹38.48 ಕೋಟಿ ದಂಡ ಸಂಗ್ರಹಿಸಲಾಗಿದೆ. ಇವುಗಳಲ್ಲಿ ₹32.72 ಲಕ್ಷ ದಂಡವನ್ನು ಸ್ಥಳದಲ್ಲಿಯೇ ಸಂಗ್ರಹಿಸಿದರೆ, ₹5.32 ಕೋಟಿ ದಂಡವನ್ನು ಕೋರ್ಟ್‌ ಮೂಲಕ ಕಟ್ಟಿಸಿಕೊಳ್ಳಲಾಗಿದೆ. ವಿಶೇಷ ಕಾರ್ಯಾಚರಣೆ: ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ಮೇ 31ರಿಂದ ವಿಶೇಷ ಕಾರ್ಯಾಚರಣೆ ಹಮ್ಮಿಕೊಂಡಿರುವ ಪೊಲೀಸರು, ಎರಡು ದಿನಗಳಲ್ಲಿ 2093 ಪ್ರಕರಣಗಳನ್ನು ದಾಖಲಿಸಿಕೊಂಡು, ₹10.07 ಲಕ್ಷ ದಂಡ ಸಂಗ್ರಹಿಸಿದ್ದಾರೆ.

ಅವಳಿನಗರದಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಸವಾರರ ವಿರುದ್ಧ ಕ್ರಮಕೈಗೊಳ್ಳಲು ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

– ರಮನ್‌ ಗು‍ಪ್ತಾ, ಕಮಿಷನರ್‌ ಹು–ಧಾ ಮಹಾನಗರ

Graphic text / Statistics - ಅಂಕಿ–ಅಂಶ ವರ್ಷ;ಮೃತಪಟ್ಟವರು;ಗಾಯಗೊಂಡವರು;ಪ್ರಕರಣಗಳ ಸಂಖ್ಯೆ 2018;90;408;370 2019;92;479;430 2020;91;323;342 2021;109;382;428 2022;108;491;513 202339;176;18738

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.