ADVERTISEMENT

ಅಪರೂಪದ ಪುನುಗು ಬೆಕ್ಕುಗಳು ಪ್ರತ್ಯಕ್ಷ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 9:44 IST
Last Updated 5 ಜನವರಿ 2018, 9:44 IST

ಧಾರವಾಡ: ಇಲ್ಲಿನ ಶಿವಗಿರಿ ಬಡಾವಣೆಯ ಮನೆಯೊಂದರಲ್ಲಿ ಮೂರು ಪುನುಗು ಬೆಕ್ಕಿನ ಮರಿಗಳು ಗುರುವಾರ ಪ್ರತ್ಯಕ್ಷವಾಗಿ, ತೀವ್ರ ಕುತೂಹಲ ಮೂಡಿಸಿದವು. ಕಾಡಿನಲ್ಲಿರುವ ಈ ಅಪರೂಪದ ಪುನುಗು ಬೆಕ್ಕಿನ ಮರಿಗಳು ನಗರದಲ್ಲಿ ಕಂಡುಬಂದಿದ್ದು, ಮನೆಯ ಮಾಲೀಕ ವಿಶ್ವನಾಥ ತಿಪ್ಪೇಸ್ವಾಮಿ ಹಾಗೂ ಬಡಾವಣೆಯ ಜನರಲ್ಲಿ ಆಶ್ಚರ್ಯ ತಂದಿತು.

ಮೂರು ಮರಿಗಳು ಒಂದರ ಮೇಲೊಂದು ಹೊರಳಾಡುತ್ತಾ ಆಟವಾಡುತ್ತಿದ್ದುದ್ದನ್ನು ನೋಡುವುದೇ ಸೊಗಸಾಗಿತ್ತು. ತಾಯಿ ಪುನುಗು ಬೆಕ್ಕು ಆಹಾರ ಅರಸಿ ಹೊರಗೆ ಹೋಗಿತ್ತಾದರೂ, ಆಗಾಗ ಬಂದು ನೋಡುತ್ತಿತ್ತು. ಮರಿಗಳು ಚಿನ್ನಾಟದಲ್ಲಿ ತೊಡಗಿದ್ದವು. ನಂತರ ಪ್ರಾಣಿಪ್ರಿಯ ಯಲ್ಲಪ್ಪ ಜೋಡಳ್ಳಿ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಿದರು.

ಪುನಗಿನ ಬೆಕ್ಕು ಗುಂಪಾಗಿ ಒಂದೆಡೆ ಸಿಗುವುದು ತೀರಾ ಅಪರೂಪ. ಉದ್ದ ಮೂತಿ, ಮೋಟು ಕಾಲುಗಳು, ಕಪ್ಪು ಮಿಶ್ರಿತ ಬೂದು ಬಣ್ಣ, ಕತ್ತಿನಿಂದ ಬಾಲದವರೆಗೂ ಹಬ್ಬಿರುವ ಕಪ್ಪು ಕೂದಲಿನ ಏಣು, ಎದೆ ಹಾಗೂ ಭುಜಗಳ ಮೇಲಿನ ಕಪ್ಪು ಪಟ್ಟೆಗಳು ಇವಕ್ಕೆ ಇದ್ದವು.

ADVERTISEMENT

’ಇನ್ನೂ ಮರಿಗಳಾದ ಇವುಗಳನ್ನು ತಾಯಿಯ ಆರೈಕೆಯ ಅಗತ್ಯವಿದೆ. ಹೀಗಾಗಿ ಇವುಗಳನ್ನು ಸ್ಥಳಾಂತರಿಸುವುದಿಲ್ಲ. ಅವುಗಳನ್ನೇ ಇಲ್ಲೇ ಬಿಡಲಾಗುವುದು’ ಎಂದು ಯಲ್ಲಪ್ಪ ತಿಳಿಸಿದರು. ಅಪರೂಪದ ಅತಿಥಿಗಳ ಆಗಮನದಿಂದಾಗಿ ವಿಶ್ವನಾಥ ಅವರ ಮನೆಯಲ್ಲಿ ಸಂಭ್ರಮ ಕಾಣುತ್ತಿತ್ತು. ಜತೆಗೆ ಇವುಗಳ ರಕ್ಷಣೆಗೆ ಬದ್ಧ ಎಂದರು. ಆದರೂ ಇವು ಕಾಡಿನ ಪ್ರಾಣಿಗಳಾಗಿರುವುದರಿಂದ ತುಸು ಮಟ್ಟಿನ ಭಯವೂ ಇದೆ ಎಂದು ವಿಶ್ವನಾಥ ಅವರ ಮನೆಯವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.