ADVERTISEMENT

ದಲಿತರ ಕರೆಗೆ ಪೇಢಾನಗರಿ ಬಂದ್‌

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 8:50 IST
Last Updated 9 ಜನವರಿ 2018, 8:50 IST
ಧಾರವಾಡದ ಆಲೂರು ವೆಂಕಟರಾವ್‌ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು
ಧಾರವಾಡದ ಆಲೂರು ವೆಂಕಟರಾವ್‌ ವೃತ್ತದಲ್ಲಿ ವಿವಿಧ ದಲಿತ ಸಂಘಟನೆಗಳು ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು   

ಧಾರವಾಡ: ವಿಜಯಪುರದಲ್ಲಿ ಇತ್ತೀಚೆಗೆ ನಡೆದ ಬಾಲಕಿಯ ಮೇಲಿನ ಅತ್ಯಾಚಾರ, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ಸಂವಿಧಾನ ವಿರೋಧಿ ಹೇಳಿಕೆ ಹಾಗೂ ಮಹಾರಾಷ್ಟ್ರದಲ್ಲಿ ಕೋರೆಗಾಂವ್‌ ವಿಜಯೋತ್ಸವ ಮೆರವಣಿಗೆ ಮೇಲೆ ಕಲ್ಲು ತೂರಾಟ ಖಂಡಿಸಿ ವಿವಿಧ ದಲಿತ ಸಂಘಟನೆಗಳು ಸೋಮವಾರ ಕರೆ ನೀಡಿದ್ದ ಬಂದ್‌ಗೆ ನಗರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಆಲೂರು ವೆಂಕಟರಾವ್ ವೃತ್ತದಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ಪ್ರತಿಭಟನಾಕಾರರು ಬೀದಿಗಿಳಿದು, ಟೈರ್‌ಗೆ ಬೆಂಕಿ ಹಚ್ಚಿ ಘೋಷಣೆ ಕೂಗುವ ಮೂಲಕ ಪ್ರತಿಭಟನೆ ಆರಂಭಿಸಿದರು. ಸಾರಿಗೆ ಬಸ್ಸುಗಳು, ಆಟೊಗಳು ರಸ್ತೆಗಿಳಿಯಲಿಲ್ಲ. ಪೆಟ್ರೋಲ್‌ ಬಂಕ್‌, ಬ್ಯಾಂಕ್‌ ಹಾಗೂ ಸರ್ಕಾರಿ ಕಚೇರಿಗಳು ಮುಚ್ಚಿದ್ದವು. ಜಿಲ್ಲಾಡಳಿತ ಶಾಲೆಗಳಿಗೆ ರಜೆ ನೀಡಿದ್ದರೂ ಮಕ್ಕಳನ್ನು ಕರೆತರುವ ವಾಹನಗಳು ಬಾರದ ಕಾರಣ ಅವುಗಳೂ ಅನಿವಾರ್ಯವಾಗಿ ಬಂದ್‌ ಆಗಿದ್ದವು.

ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡಿದ್ದರು. ಪ್ರತಿಭಟನಾಕಾರರು ಬೈಕ್‌ ಮೇಲೆ ಕುಳಿತು ಘೋಷಣೆ ಕೂಗುತ್ತಾ ಇಡೀ ನಗರವನ್ನು ಸುತ್ತು ಹಾಕಿದರು. ಬಾಗಿಲು ತೆರೆದಿದ್ದ ಅಂಗಡಿಗಳನ್ನು ಬಲವಂತದಿಂದ ಮುಚ್ಚಿಸಿದರು. ತಮ್ಮ ಹೋರಾಟಕ್ಕೆ ದನಿಯಾಗಿ ಎಂದು ಕರೆ ಕೊಟ್ಟರು. ಆಟೊ ಮೂಲಕ ಪ್ರಚಾರ ನಡೆಸಿ, ಯಾವುದೇ ಅಂಗಡಿಗಳನ್ನು ಬಾಗಿಲು ತೆರೆಯದಂತೆ, ವಾಹನಗಳು ರಸ್ತೆಗಿಳಿಯದಂತೆ ಎಚ್ಚರಿಕೆ ನೀಡುತ್ತಿದ್ದ ದೃಶ್ಯ ಕಂಡುಬಂತು.

ADVERTISEMENT

ಆಲೂರು ವೆಂಕಟರಾವ್ ವೃತ್ತದಲ್ಲಿ ಬೆಳಿಗ್ಗೆಯೇ ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ದಲಿತರ ಮೇಲಿನ ಶೋಷಣೆ ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಿದರು. ದಲಿತ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿವೆ. ಇಷ್ಟಾದರೂ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಇಂಹತ ಪ್ರಕರಣಗಳು ಇಲ್ಲಿಗೇ ಕೊನೆಯಾಗಬೇಕು. ಬಾಲಕಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

‘ಸಂವಿಧಾನ ಬದಲಿಸುವ ಮಾತುಗಳನ್ನಾಡಿರುವ ಕೇಂದ್ರ ಸಚಿವ ಹೆಗಡೆ ಅವರನ್ನು ಸಚಿವ ಸ್ಥಾನದಿಂದ ಕಿತ್ತೊಗೆಯಬೇಕು. ಜತೆಗೆ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಂಥ ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ಮತ್ತು ಸಚಿವರಿಗೆ ಕುಮ್ಮಕ್ಕು ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತಕ್ಷಣ ವಜಾಗೊಳಿಸಬೇಕು’ ಎಂದು ರಾಷ್ಟ್ರಪತಿ ಅವರಿಗೆ ಆಗ್ರಹಿಸಿದರು.

’ಭೀಮಾ ಕೋರೆಗಾಂವ್‌ ಸ್ವಾಭಿಮಾನ ಸಂಗ್ರಾಮದ 200ನೇ ವಿಜಯೋತ್ಸವದ’ ನಿಮಿತ್ತ ಮಹಾರಾಷ್ಟ್ರದಲ್ಲಿ ನಡೆದ ಮೆರವಣಿಗೆ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಪ್ರೇರಿತ ಕೋಮುವಾದಿಗಳು ದಲಿತರ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಇಂಥ ಸಂಘಟನೆಗಳನ್ನು ನಿಷೇಧಿಸಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆಯ ಕಾವು ಮಧ್ಯಾಹ್ನದವರೆಗೂ ಮುಂದುವರೆದಿದ್ದರೂ, ಸಂಜೆ 6ರವರೆಗೂ ಅಂಗಡಿಗಳು ಬಾಗಿಲು ಹಾಕಿದ್ದವು. ಬಂದ್‌ ಮಾಹಿತಿ ಇಲ್ಲದೇ ನೆರೆಯ ಜಿಲ್ಲೆಗಳಿಂದ ಇಲ್ಲಿನ ಆಸ್ಪತ್ರೆಗಳಿಗೆ ಬಂದಿದ್ದವರು ನಗರ ಸಾರಿಗೆ ಬಸ್ಸುಗಳು ಇಲ್ಲದೇ ಪರದಾಡುವಂತಾಯಿತು.

ಬದಾಮಿ ತಾಲ್ಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕ ಭೀಮನಗೌಡ ಪಾಟೀಲ ಮಾತನಾಡಿ, ‘ಇಂದು ಸೋಮವಾರವಾದ ಕಾರಣ ರಜೆ ಹಾಕಿ ಆಸ್ಪತ್ರೆಗೆಂದು ಬಂದೆ. ಆದರೆ ನಗರ ಸಾರಿಗೆ ಬಸ್ಸು, ಆಟೊ ರಿಕ್ಷಾಗಳು ಇಲ್ಲ. ಹೀಗಾಗಿ ಆಸ್ಪತ್ರೆ ಹೋಗಲು ಸಾಧ್ಯವಾಗಲಿಲ್ಲ. ಮನೆಗೆ ಮರಳುವುದು ಅನಿವಾರ್ಯವಾದರೂ, ಸಂಜೆಯವರೆಗೂ ಬಸ್ಸು ಇಲ್ಲ ಎಂದು ಸಾರಿಗೆ ಸಂಸ್ಥೆ ಅಧಿಕಾರಿಗಳು ಹೇಳುತ್ತಿದ್ದಾರೆ. ಹೋಟೆಲ್‌ಗಳೂ ಬಾಗಿಲು ತೆಗೆದಿಲ್ಲ’ ಎಂದು ಅವರು ತಮ್ಮ ಅಳಲು ತೋಡಿಕೊಂಡರು.

ಬಂದ್‌ನಿಂದ ಸಂಘಟನೆಗಳು ದೂರ

ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಅಂಬೇಡ್ಕರ್‌ ಬಣ ಸೇರಿದಂತೆ ನಾಲ್ಕಕ್ಕೂ ಹೆಚ್ಚು ದಲಿತ ಸಂಘಟನೆಗಳು ಬಂದ್‌ನಲ್ಲಿ ಪಾಲ್ಗೊಳ್ಳದೆ ತಟಸ್ಥ ನಿಲುವು ತಾಳಿದ್ದವು. ಈ ಕುರಿತು ಪ್ರತಿಕ್ರಿಯಿಸಿದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಲಕ್ಷ್ಮಣ ದೊಡ್ಡಮನಿ, ‘ಈ ಮೂರೂ ವಿಷಯಗಳ ಕುರಿತು ಈಗಾಗಲೇ ನಾವು ಹೋರಾಟ ನಡೆಸಿದ್ದೇವೆ. ಮತ್ತೊಮ್ಮೆ ನಡೆಸಲು ನಮ್ಮ ಬೆಂಬಲವೂ ಇದೆ. ಆದರೆ ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಂದ್‌ಗೆ ಕರೆ ನೀಡಲಾಗಿದೆ. ಹೀಗಾಗಿ ನಾವು ತಟಸ್ಥ ನಿಲುವು ತೆಗೆದುಕೊಂಡಿದ್ದೇವೆ’ ಎಂದರು.

ಪ್ರಯಾಣಿಕರ ಪರದಾಟ

ನಗರ ಪ್ರದೇಶದಲ್ಲಿ ಸಾರಿಗೆ ಸಂಪರ್ಕ ಸಂಪೂರ್ಣ ಬಂದ್‌ ಆಗಿದ್ದರಿಂದ ಪ್ರಯಾಣಿಕರು ಪರದಾಡಿದರು. ಬೆಳಗಾವಿ ಹಾಗೂ ಇತರ ಕಡೆ ಹೋಗುವವರು ತಮ್ಮ ಸಂಬಂಧಿಕರ ಬೈಕ್‌ನಲ್ಲಿ ಹೆದ್ದಾರಿವರೆಗೂ, ಇತ್ತ ಯಾದವಾಡದವರೆಗೂ ಹೋಗಿ ಸಾರಿಗೆ ಬಸ್ಸುಗಳ ಮೂಲಕ ಪ್ರಯಾಣಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮತ್ತೊಂದೆಡೆ ಗ್ರಾಮೀಣ ಪ್ರದೇಶದಿಂದ ಕೆಲಸ ಅರಿಸಿ ನಗರಕ್ಕೆ ಬೆಳಿಗ್ಗೆಯೇ ಬಂದಿದ್ದ ಹಲವರು, ನಗರ ಬಂದ್‌ನಿಂದ ಕಂಗಾಲಾಗಿದ್ದರು. ಕೂಲಿ ಸಿಗದ ಕಾರಣ ಬೇಸರ ವ್ಯಕ್ತಪಡಿಸಿದರು. ಇವರಲ್ಲಿ ಕೆಲವರು ತಂದಿದ್ದ ಬುತ್ತಿಯನ್ನೇ ಹಂಚಿಕೊಂಡು ತಿಂದು ಸಂಜೆ ಊರಿನತ್ತ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.