ADVERTISEMENT

ಕುಟೀರ ತೆರವು ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 9:42 IST
Last Updated 19 ಜನವರಿ 2018, 9:42 IST

ಧಾರವಾಡ: ಇಲ್ಲಿನ ಅಕ್ಕಿಪೇಟೆ ಮಟಗುಡ್ಲಿ ಅಂಗಡಿ ಪಕ್ಕದಲ್ಲಿನ ಹಾಗೂ ನೆಹರು ಮಾರ್ಕೆಟ್‌ನಲ್ಲಿರುವ ದಲಿತರ ಕುಟೀರಗಳನ್ನು ಮಹಾನಗರ ಪಾಲಿಕೆ ಏಕಾಏಕಿ ತೆರವುಗೊಳಿಸಿದೆ ಎಂದು ಆರೋಪಿಸಿ ಜೈ ಭೀಮ ಕಸ್ತೂರಿ ಕನ್ನಡಿಗರ ಧ್ವನಿ ಸಂಘಟನೆ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

2006–7ನೇ ಸಾಲಿನಲ್ಲಿ ಮಹಾನಗರ ಪಾಲಿಕೆಯಿಂದ ಶೇ 18ರ ಅನುದಾನದಲ್ಲಿ ಲಿಡಕರ ಕುಟೀರ ಮಂಜೂರು ಮಾಡಿದ್ದರು. ಇದರಿಂದ ಹಲವು ದಲಿತ ಕುಟುಂಬಗಳ ಕುಟೀರಗಳನ್ನು ನಂಬಿಕೊಂಡು ತಮ್ಮ ಉಪಜೀವನ ನಡೆಸುತ್ತಿದ್ದರು. ಆದರೆ, ಜ.1 ರಂದು ಸಂಜೆ 4ಕ್ಕೆ ಪಾಲಿಕೆ ಸಹಾಯಕ ಅಧಿಕಾರಿ ಜಿ.ಜಿ. ಹಿರೇಮಠ ಹಾಗೂ ಸಿಬ್ಬಂದಿ
ಯಾವುದೇ ಮುನ್ಸೂಚನೆ ನೀಡದೆ ಕುಟೀರಗಳನ್ನು ತೆರವುಗೊಳಿಸಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ತೆರವುಗೊಳಿಸುವ ವೇಳೆ ಕುಟೀರಗಳಲ್ಲಿದ್ದ ಸಾಮಗ್ರಿಗಳನ್ನೂ ಪಾಲಿಕೆ ಸಿಬ್ಬಂದಿಯೇ ತೆಗೆದುಕೊಂಡು ಹೋಗುವ ಮೂಲಕ ನೋವುಂಟು ಮಾಡಿದ್ದಾರೆ. ತಮ್ಮ ವೈಯಕ್ತಿಕ ಸಾಧನೆಗಾಗಿ ಕೆಲವು ರಾಜಕೀಯ ಒತ್ತಾಯಕ್ಕೆ ಈ ಕೃತ್ಯ ಎಸಗಿದ್ದಾರೆ. ಪದೇ ಪದೇ ದಲಿತರ ಮೇಲೆ ಪಾಲಿಕೆ ದೌರ್ಜನ್ಯ ನಡೆಸುತ್ತಿದೆ ಎಂದು ದೂರಿದರು.

ADVERTISEMENT

ಪ್ರತಿಭಟನೆಯಲ್ಲಿ ಸದಾನಂದ ನಿಪ್ಪಾಣಿಕರ, ಅಶೋಕ ಭಂಡಾರಿ, ರಾಜೇಂದ್ರ ಗಾಮನಗಟ್ಟಿ, ರಮೇಶ ಶಿರಹಟ್ಟಿ, ಸಂಜು ಹೊಂಗಲ, ಮಂಜುನಾಥ ದೊಡವಾಡ, ಸುರೇಶ ಬೆಣಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.