ADVERTISEMENT

ಗಣರಾಜ್ಯೋತ್ಸವದಲ್ಲಿ ಸಾಂಸ್ಕೃತಿಕ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 10:07 IST
Last Updated 27 ಜನವರಿ 2018, 10:07 IST
ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ವಿನಯ ಕುಲಕರ್ಣಿ ಗೌರವ ವಂದನೆ ಸಲ್ಲಿಸಿದರು. ಪೊಲೀಸ್‌ ಆಯುಕ್ತ ಎಂ.ಎನ್.ನಾಗರಾಜ, ಎಸ್‌.ಬಿ.ಬೊಮ್ಮನಹಳ್ಳಿ, ಸ್ನೇಹಲ್ ರಾಯಮಾನೆ, ಜಿ. ಸಂಗೀತಾ, ಬಿ.ಎಸ್‌.ನೇಮಗೌಡ ಇದ್ದಾರೆ.
ಧಾರವಾಡದ ಆರ್‌.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಶುಕ್ರವಾರ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿದ ಸಚಿವ ವಿನಯ ಕುಲಕರ್ಣಿ ಗೌರವ ವಂದನೆ ಸಲ್ಲಿಸಿದರು. ಪೊಲೀಸ್‌ ಆಯುಕ್ತ ಎಂ.ಎನ್.ನಾಗರಾಜ, ಎಸ್‌.ಬಿ.ಬೊಮ್ಮನಹಳ್ಳಿ, ಸ್ನೇಹಲ್ ರಾಯಮಾನೆ, ಜಿ. ಸಂಗೀತಾ, ಬಿ.ಎಸ್‌.ನೇಮಗೌಡ ಇದ್ದಾರೆ.   

ಧಾರವಾಡ: ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಪೊಲೀಸ್, ಅಬಕಾರಿ, ಅರಣ್ಯ ಇಲಾಖೆ ಸಿಬ್ಬಂದಿ, ಎನ್‌.ಸಿ,ಸಿ, ಎನ್‌ಎಸ್‌ಎಸ್‌, ಸ್ಕೌಟ್ಸ್‌ ಮತ್ತು ಗೈಡ್ಸ್‌, ಭಾರತೀಯ ಸೇವಾದಳದ ವಿದ್ಯಾರ್ಥಿಗಳು ನಡೆಸಿಕೊಟ್ಟ ಆಕರ್ಷಕ ಪಥ ಸಂಚಲನ, ವಿವಿಧ ಶಾಲೆಯ ಮಕ್ಕಳು ಪ್ರಸ್ತುತಪಡಿಸಿದ ಕಲ್ಪಿತ ಯುದ್ಧ ರೂಪಕ, ಸಮೂಹ ನೃತ್ಯ, ಜಿಮ್ನಾಸ್ಟಿಕ್‌ ಪ್ರದರ್ಶನ ಇಲ್ಲಿನ ಆರ್.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ 69 ನೇ ಗಣರಾಜ್ಯೋತ್ಸವದ ಕಳೆಯನ್ನು ಇಮ್ಮಡಿಗೊಳಿಸಿದವು.

ಇಲ್ಲಿನ ಆರ್.ಎನ್‌.ಶೆಟ್ಟಿ ಕ್ರೀಡಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಧ್ವಜಾರೋಹಣ ನೆರವೇರಿಸುವ ಮೂಲಕ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದರು. ನಂತರ ವಿವಿಧ ದಳಗಳ ವೀಕ್ಷಣೆ ನಡೆಸಿದ ಸಚಿವರು, ರಾಜ್ಯೋತ್ಸವದ ಸಂದೇಶ ನೀಡಿದರು.

ಅದಾದ ನಂತರ ವಿವಿಧ ದಳಗಳಿಂದ ಸಚಿವರು ಗೌರವ ವಂದನೆ ಸ್ವೀಕರಿಸಿದರು. ಪೊಲೀಸ್ ವಾದ್ಯವೃಂದದ ಆಕರ್ಷಕ ಸಂಗೀತದ ಹಿನ್ನೆಲೆಯಲ್ಲಿ ನಡೆದ ಪಥ ಸಂಚಲನದಲ್ಲಿ ಪೊಲೀಸ್‌, ಅಬಕಾರಿ, ಅರಣ್ಯ ಇಲಾಖೆ, ಎನ್‌ಸಿಸಿ, ಸ್ಕೌಟ್ಸ್‌ ಸೇರಿದಂತೆ ವಿವಿಧ ಶಾಲೆಗಳ 21 ತಂಡಗಳು ಭಾಗವಹಿಸಿದ್ದವು.

ADVERTISEMENT

ನಂತರ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಕೆಎನ್‌ಕೆ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ‘ಕಲ್ಪಿತ ಯುದ್ಧ’ ಪ್ರಸ್ತುತ ಪಡಿಸಿದರು. ಗಡಿಗಳಲ್ಲಿ ಭಯೋತ್ಪಾದಕರು ನುಗ್ಗಿದಾಗ ನಮ್ಮ ಸೈನಿಕರು ನಡೆಸುವ ಯುದ್ಧ ತಂತ್ರಗಳು, ಎದುರಾಳಿಯ ಮೇಲೆ ದಾಳಿ ನಡೆಸುವ ಪರಿ, ಹೀಗೆ ಅನೇಕ ವಿಷಯಗಳನ್ನು ಮೈ ನವಿರೇಳುವಂತೆ ಪ್ರಸ್ತುಪಡಿಸಿದರು.

ನಂತರ ರಾಜೀವ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕೂಡಾ ದೇಶ ಭಕ್ತಿ, ಯೋಧರ ತ್ಯಾಗ ಕುರಿತಾದ ಸಮೂಹ ನೃತ್ಯ ಪ್ರದರ್ಶಿಸಿ, ಮೆಚ್ಚುಗೆ ಗಳಿಸಿದರು. ಶ್ರೀ ಬಾಲಮಾರುತಿ ಜಿಮ್ನಾಸ್ಟಿಕ್‌ ಸಂಸ್ಥೆಯ ಸದಸ್ಯರು ಪ್ರಸ್ತುತಪಡಿಸಿದ ಜಿಮ್ನಾಸ್ಟಿಕ್‌ ಪ್ರದರ್ಶನಕ್ಕೆ ದೊಡ್ಡ ಪ್ರಮಾಣದ ಪ್ರಶಂಸೆ ಮೂಡಿ ಬಂತು.

ನಂತರ ಸಂಜೆ ಇಲ್ಲಿನ ಆಲೂರು ವೆಂಕಟರಾವ್ ಸಭಾಭವನದಲ್ಲಿ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ವಿಜೇತ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಕರ್ನಾಟಕ ವಿಜನ್ 2025 ಯೋಜನೆ ಅಂಗವಾಗಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪೇಂಟಿಂಗ್ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದ ಕವಿವಿಯ ಆನಂದ ಕುರಿಯವರ (ಕನ್ನಡ) ಮತ್ತು ತೃಪ್ತಿ ಪಾಟೀಲ (ಇಂಗ್ಲೀಷ್), ಪೇಂಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ನವಲಗುಂದದ ಎಂಇಬಿ ಗರ್ಲ್ಸ್ ಹೈಸ್ಕೂಲ್‌ನ ನೇಹಾ ಪವಾರ ಮತ್ತು ಧಾರವಾಡ ಕೆಪಿಇಎಸ್ ಇಂಗ್ಲಿಷ್ ಮಾಧ್ಯಮ ಪ್ರಾಥಮಿಕ ಶಾಲೆಯ ಅಬ್ದುಲ್‌ಗನಿ ಶಿರಹಟ್ಟಿ ಅವರಿಗೆ ಐದು ಸಾವಿರ ನಗದು, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

ಪರಿಹಾರ ವಿತರಣೆ: 2017ನೇ ಇಸ್ವಿ ಏಪ್ರಿಲ್‌ನಲ್ಲಿ ಜಮ್ಮು ಕಾಶ್ಮೀರದಲ್ಲಿ ವೀರ ಮರಣವನ್ನಪ್ಪಿದ ಸಿಆರ್‌ಪಿಎಫ್ ಯೋಧ, ಹೊಸಯಲ್ಲಾಪುರದ ಬಸಪ್ಪ ಭಜಂತ್ರಿ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ನೀಡಿದ ₹20 ಲಕ್ಷ ಪರಿಹಾರದ ಚೆಕ್‌ನ್ನು ಸಚಿವ ವಿನಯ ಕುಲಕರ್ಣಿ ವಿತರಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಪಂ ಸಿಇಒ ಆರ್. ಸ್ನೇಹಲ್, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಅವಳಿ ನಗರದ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಜಿ., ಜಿ.ಪಂ. ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಇತರರು ಇದ್ದರು.

ಜಿಲ್ಲಾ ಸರ್ವೋತ್ತಮ ಪ್ರಶಸ್ತಿ
ಉತ್ತಮ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಪ್ರಶಸ್ತಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್.ಎಚ್. ನಾಗೂರ, ಕಂದಾಯ ಇಲಾಖೆಯ ನವಲಗುಂದ ತಹಸೀಲ್ದಾರ ಎಚ್.ವಿ. ನವೀನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆಯ ಧಾರವಾಡ ತಾಲ್ಲೂಕು ಪಂಚಾಯ್ತಿ ಸಹಾಯಕ ನಿರ್ದೇಶಕ ಪ್ರಶಾಂತ ತುರಕಾಣಿ, ಹುಬ್ಬಳ್ಳಿ ತಾಲ್ಲೂಕಿನ ಅದರಗುಂಚಿ ಗ್ರಾಮ ಲೆಕ್ಕಾಧಿಕಾರಿ ಬಿ.ಎಚ್.ವಿಜಯಕುಮಾರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಪಿಜಿ ವಿದ್ಯಾರ್ಥಿನಿಯರ ನಿಲಯದ ನಿಲಯಪಾಲಕಿ ಗೀತಾ ಹೂಗಾರ ಮತ್ತು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರ ಕಚೇರಿ ಸಿಪಾಯಿ ಜೆ.ಬಿ.ಕದಂ ಅವರಿಗೆ ನೀಡಲಾಯಿತು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಗೃಹ ರಕ್ಷಕ ದಳದ ಕೃಷ್ಣ ಬ್ಯಾಡಗಿ, ಜಾನಪದ ಕಲಾವಿದ ವೆಂಕಪ್ಪ ಪುಲಿ, ಕ್ರೀಡಾಪಟು ಜ್ಯೋತಿ ಸಣ್ಣಕ್ಕಿ, ಮಹಮ್ಮದಗೌಸ್ ಕಳಸಾಪುರ, ಜವಾಹರ ನವೋದಯ ವಿದ್ಯಾಲಯದ ಹರ್ಷವರ್ಧನ ಅರಳಿಕಟ್ಟಿ ಹಾಗೂ ಸುಜೇಯ ತೇಗೂರ ಮತ್ತು ಜಿಲ್ಲೆಯ ಸ್ವಾತಂತ್ರೃ ಹೋರಾಟಗಾರರಾದ ಬಸವಂತೆಪ್ಪ ಮಡಿವಾಳರ, ಪೀರಸಾಬ ಬಂದೂನವರ, ಇಮಾಮಸಾಬ ಮುಲ್ಲಾ ಅವರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಇನ್ನು 2017–18 ನೇ ಸಾಲಿನ ಜೀವರಕ್ಷಕ ಪ್ರಶಸ್ತಿಯನ್ನು ನುಗ್ಗಿಕೇರಿ ಗ್ರಾಮದ ನಿಂಗಪ್ಪ ರುದ್ರಪ್ಪ ಕುಡವಕ್ಕಲಿಗಾರ ಅವರಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.