ADVERTISEMENT

ಕುಷ್ಠರೋಗ ಮಾರಣಾಂತಿಕವಲ್ಲ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 9:49 IST
Last Updated 2 ಫೆಬ್ರುವರಿ 2018, 9:49 IST

ಧಾರವಾಡ: ’ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕುಷ್ಠರೋಗ ಮಾರಣಾಂತಿಕವಲ್ಲ. ಆದರೆ, ಶಾಶ್ವತ ಅಂಗವಿಕಲತೆಯನ್ನು ಉಂಟು ಮಾಡಬಹುದು’ ಎಂದು ನಿವೃತ್ತ ಜಿಲ್ಲಾ ಸರ್ಜನ್‌ ಡಾ.ವಿ.ಡಿ.ಕರ್ಪೂರಮಠ ಹೇಳಿದರು.

ಕೆ.ಎಚ್.ಕಬ್ಬೂರ ತಾಂತ್ರಿಕ ಕಾಲೇಜಿನಲ್ಲಿ ಮಹಾತ್ಮ ಗಾಂಧಿ ಪುಣ್ಯತಿಥಿ ನಿಮಿತ್ತ ಆಯೋಜಿಸಿದ್ದ ರಾಷ್ಟ್ರೀಯ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಕಾಯಿಲೆ ಕುರಿತು ಜನರಲ್ಲಿ ಹಲವಾರು ಮೂಢ ನಂಬಿಕೆಗಳಿವೆ. ಅವುಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳು ಅಗತ್ಯ' ಎಂದರು.

‘ಅದರ ಲಕ್ಷಣಗಳ ಬಗ್ಗೆ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅರಿವು ಮೂಡಿಸಿದಲ್ಲಿ ಪ್ರಾರಂಭಿಕ ಹಂತದಲ್ಲೇ ರೋಗವನ್ನು ತಡೆಗಟ್ಟಬಹುದು. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಹಾಗೂ ಔಷಧೋಪಚಾರ ದೊರೆಯಲಿದೆ. ನಿರ್ಲಕ್ಷಿಸಿದರೆ, ಶಾಶ್ವತ ಅಂಗವಿಕಲತೆ ಉಂಟಾಗಿ ರೋಗಿ ಸಾಮಾಜಿಕ, ಆರ್ಥಿಕ, ಮಾನಸಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ’ ಎಂದರು.

ADVERTISEMENT

ಜೆಎಸ್‌ಎಸ್ ವಿತ್ತಾಧಿಕಾರಿ ಡಾ. ಅಜಿತಪ್ರಸಾದ ಮಾತನಾಡಿ, ’ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಸಂಗ್ರಾಮಕ್ಕೆ ನೀಡಿದ ಕೊಡುಗೆಯಷ್ಟೇ ಕುಷ್ಠರೋಗದಂತಹ ಸಾಂಕ್ರಾಮಿಕ ರೋಗಗಳನ್ನು ನಿರ್ಮೂಲನೆ ಮಾಡಲು ಪ್ರಯತ್ನಿಸಿದ್ದರು. ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕು ಎನ್ನುವ ಮಾನವೀಯ ಕಳಕಳಿ ತೋರುತ್ತಿದ್ದರು’ ಎಂದು ಸ್ಮರಿಸಿಕೊಂಡರು. ಪ್ರಾಚಾರ್ಯರಾದ ಜಿ.ಸರಳಾಬಾಯಿ, ವೇದವತಿ ತಿವಾರಿ, ಮಹಾವೀರ ಉಪಾಧ್ಯೆ, ಪವಿತ್ರಾ, ಜ್ಯೋತಿ, ವಿ.ಕೆ.ಭರಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.