ADVERTISEMENT

15 ವರ್ಷದ ನಂತರ ಬತ್ತಿದ ಮುಗದ ಕೆರೆ

ಇ.ಎಸ್.ಸುಧೀಂದ್ರ ಪ್ರಸಾದ್
Published 7 ಫೆಬ್ರುವರಿ 2018, 10:17 IST
Last Updated 7 ಫೆಬ್ರುವರಿ 2018, 10:17 IST
ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಹೊನ್ನಮ್ಮನ ಕೆರೆ ಸಂಪೂರ್ಣ ಬತ್ತಿದ್ದು ಗ್ರಾಮಸ್ಥರೊಬ್ಬರು ನೀರಿನ ಒರತೆ ಹುಡುಕುವ ಪ್ರಯತ್ನ ನಡೆಸಿರುವುದು ಕಂಡುಬಂತು    ಚಿತ್ರ: ಬಿ.ಎಂ.ಕೇದಾರನಾಥ
ಧಾರವಾಡ ತಾಲ್ಲೂಕಿನ ಮುಗದ ಗ್ರಾಮದ ಹೊನ್ನಮ್ಮನ ಕೆರೆ ಸಂಪೂರ್ಣ ಬತ್ತಿದ್ದು ಗ್ರಾಮಸ್ಥರೊಬ್ಬರು ನೀರಿನ ಒರತೆ ಹುಡುಕುವ ಪ್ರಯತ್ನ ನಡೆಸಿರುವುದು ಕಂಡುಬಂತು ಚಿತ್ರ: ಬಿ.ಎಂ.ಕೇದಾರನಾಥ   

ಧಾರವಾಡ: ಐತಿಹಾಸಿಕ ಮುಗದ ಗ್ರಾಮದ ಹೊನ್ನಮ್ಮನ ಕೆರೆ 15 ವರ್ಷಗಳ ಬಳಿಕ ಬರಿದಾಗಿದೆ. ಸತತ ಬರಗಾಲದಲ್ಲೂ ಬತ್ತಿರದ ಕೆರೆ ಅಂಗಳ ಬೇಸಿಗೆ ಬರುವ ಮೊದಲೇ ಬರಿದಾಗಿ, ಅಂಗಳ ಬಿರುಕು ಬಿಟ್ಟಿದೆ.

16ನೇ ಶತಮಾನದಲ್ಲಿ ಮುಗದರಾಯ ಎಂಬ ಜೈನ ದೊರೆ ನಿರ್ಮಿಸಿದ ಈ ಕೆರೆಗೆ ಆತನ ಸೋದರಿ ಹೊನ್ನಮ್ಮ ಹಾರ ಆದಳೆಂದು ಆಕೆಯ ಹೆಸರಿನಿಂದಲೇ ಇದನ್ನು ಕರೆಯಲಾಗುತ್ತದೆ. ಆದರೂ, ಮುಗದ ಕೆರೆ ಎಂದೇ ಹೆಚ್ಚು ಪ್ರಚಲಿತ. ಹೆಚ್ಚು ಮಳೆ ಬೀಳುವ ಮಲೆನಾಡಿನ ಪ್ರದೇಶದಲ್ಲಿರುವ ಈ ಕೆರೆಗೆ ಕ್ಯಾರಕೊಪ್ಪ ಹಾಗೂ ದಡ್ಡಿ ಕಮಲಾಪುರದ ಗುಡ್ಡ ಪ್ರದೇಶದಿಂದ ನೀರು ಹರಿದು ಬರುತ್ತದೆ.

40 ಕಿಲೋ ಮೀಟರ್‌ ದೂರದಲ್ಲಿರುವ ನೀರ ಸಾಗರ ಸೇರುವ ಮಾರ್ಗದಲ್ಲಿ 638 ಎಕರೆ ಜಮೀನಿಗೆ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಬೇಸಿಗೆ ಬರುವ ಮೊದಲೇ ಕೆರೆ ಬತ್ತಿರುವುದರಿಂದ, ಈಗಾಗಲೇ ಬರಿದಾಗಿರುವ ನೀರ ಸಾಗರದಲ್ಲಿ ನೀರಿನ ಕೊರತೆ ಇನ್ನಷ್ಟು ಹೆಚ್ಚಲಿದೆ.

ADVERTISEMENT

ಕೆರೆಯ ಅಂಗಳದಲ್ಲಿ ಅಲ್ಲಲ್ಲಿ ಬೆಳೆದ ಹುಲ್ಲನ್ನು ಜಾನುವಾರುಗಳು ಮೇಯುತ್ತಿವೆ. ಹಾಗೆಯೇ ಒಣಗುತ್ತಿರುವ ಕೆರೆಯ ಅಂಗಳದಲ್ಲಿ ಬೀಡು ಬಿಟ್ಟಿರುವ ವಿವಿಧ ಜಾತಿಯ ಪಕ್ಷಿಗಳಿವೆ. ಕೆರೆಯ ಅಂಗಳ ಬಿರುಕು ಬಿಟ್ಟಿರುವುದರಿಂದ ಅಕ್ಷರಶಃ ಬರದ ಛಾಯೆ ಆವರಿಸಿದಂತೆ ಕಾಣುತ್ತಿದೆ.

ಗ್ರಾಮದ ಹಿರಿಯ ಎಸ್.ಎಫ್‌. ಪೀರಜಾದೆ ಕೆರೆ ಕುರಿತು ಮಾತನಾಡಿ, ‘16ನೇ ಶತಮಾನದಲ್ಲಿ ನಿರ್ಮಾಣವಾಗಿದೆ. ಗುಡ್ಡಗಾಡಿನಿಂದ ಹರಿದು ಬರುವ ನೀರು ಕುಡಿಯುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿಯೇ ಊರಿನಲ್ಲಿ ದಷ್ಟ–ಪುಷ್ಟರಾಗಿರುವವರಿಗೆ ‘ಮುಗದ ಕೆರೆ ನೀರು ಕುಡಿದು ಬಂದ್ಯಾ’ ಎಂದು ಕೇಳುವ ಮಟ್ಟಿಗೆ ಈ ನೀರಿನ ಶಕ್ತಿ ಸುತ್ತ–ಮುತ್ತಲಿನ ಹಳ್ಳಿಗಳಲ್ಲಿ ಖ್ಯಾತಿ ಪಡೆದಿದೆ’ ಎಂದು ವಿವರಿಸಿದರು.

‘1970ರಲ್ಲಿ ಎದುರಾದ ಬರಗಾಲ ಸಮಯದಲ್ಲಿ ಬೇಡ್ತಿ ಹಳ್ಳದಿಂದ ಕೆರೆಗೆ ನೀರು ತಿರುಗಿಸಲಾಗಿತ್ತು. ಹೀಗಾಗಿ ಕೆರೆಯ ಅಂಗಳ ತುಂಬಿರುತ್ತಿತ್ತು. ಆಗ ಬೇಡ್ತಿ ಹಳ್ಳದ ಮಾರ್ಗದ ಅಕ್ಕ–ಪಕ್ಕದ ಹೊಲದ ಮಾಲೀಕರು ಬಾಯಿಮಾತಿನಲ್ಲಿಯೇ ಜಮೀನು ಬಿಟ್ಟುಕೊಟ್ಟಿದ್ದರು. ಆದರೆ, ಇತ್ತೀಚಿನ ಕೆಲ ವರ್ಷಗಳ ಕೆಲ ರೈತರು ಜಮೀನು ವಾಪಸ್‌ ಪಡೆದಿದ್ದಾರೆ. ಹಾಗಾಗಿ ಬೇಡ್ತಿ ಹಳ್ಳದ ನೀರು ಕೆರೆ ಸೇರುತ್ತಿಲ್ಲ. ಹೀಗಾಗಿ ಕೆರೆ ಒಣಗಿದೆ’ ಎಂದರು

ಮುಗದ ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ಕಲಕೇರಿ ಮಾತನಾಡಿ, ‘ಧರ್ಮಸ್ಥಳ ಸಂಘ ಹಾಗೂ ಟಾಟಾ ಮಾರ್ಕೊಪೊಲೊ ಕಂಪನಿಯವರು ಕಳೆದ ವರ್ಷ ಕೆರೆ ಹೂಳು ಎತ್ತಲು ಒಂದಷ್ಟು ಸಹಾಯ ಮಾಡಿದ್ದರು. ಸಂಪೂರ್ಣವಾಗಿ ಹೂಳು ಎತ್ತುವ ಕೆಲಸವಾಗಬೇಕಿದೆ. ಏಪ್ರಿಲ್ ಕೊನೆಯ ವಾರ ಹಾಗೂ ಮೇ ತಿಂಗಳಲ್ಲಿ ಅಡ್ಡ ಮಳೆ ಆಗುವ ಸಾಧ್ಯತೆ ಇದೆ. ಅಷ್ಟರೊಳಗಾಗಿ ಕೆರೆ ಹೂಳೆತ್ತಬೇಕು. ಇದಕ್ಕೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ ಹಾಗೂ ಸಂಘ ಸಂಸ್ಥೆಗಳ ನೆರವಿನ ಅಗತ್ಯವಿದೆ. ಆ ಮೂಲಕ ಐತಿಹಾಸಿಕ ಕೆರೆ ಉಳಿಸಬೇಕಾಗಿದೆ’ ಎಂದರು.

ಸಮೀಕ್ಷೆ ಮಾಡಿ

ಕೆರೆ ಅಂಗಳದ ಅಂದಾಜು 25 ರಿಂದ 30 ಎಕರೆ ಪ್ರದೇಶ ಒತ್ತುವರಿ ಯಾಗಿರುವ ಸಾಧ್ಯತೆ ಇದೆ. ಜತೆಗೆ ರೈತರು ಒಡ್ಡು ಹಾಗೂ ಕಾಲುವೆಗಳು ಸರಿ ಇಲ್ಲದ ಕಾರಣ ಕೆರೆಯ ನೀರು ಹೆಚ್ಚಾಗಿ ಪೋಲಾಗುತ್ತಿದೆ. ಹೂಳು ತೆಗೆದು, ರೈತರಲ್ಲೂ ನೀರು ಉಳಿತಾಯದ ಜಾಗೃತಿ ಮೂಡಿಸಿದಲ್ಲಿ ಮುಗದದ ಹೊನ್ನಮ್ಮನ ಕೆರೆ ಉಳಿಸಬಹುದು
ಎಸ್‌.ಎಫ್‌.ಪೀರಜಾದೆ,
ಮುಗದ ಗ್ರಾಮದ ಮುಖಂಡ

ನದಿ ನೀರು ಹರಿಸಿ

ಮುಗದ ಕೆರೆಯನ್ನೇ ನಂಬಿ 80 ಮೀನುಗಾರರ ಕುಟುಂಬ ಗಳಿವೆ. ಹಾಗೆಯೇ ಕೆರೆಯ ಮಣ್ಣನ್ನು ಬಳಸಿ ಕುಂಬಾರಿಕೆ ವೃತ್ತಿ ಮಾಡುವ ವರ್ಗವೂ ಇದೆ. ಜಾನುವಾರುಗಳು, ಕಾಡು ಪ್ರಾಣಿಗಳಿಗೂ ಇಲ್ಲಿನ ನೀರನ್ನು ಅವಲಂಬಿಸಿವೆ. ಶಾಶ್ವತ ಪರಿಹಾರವಾಗಿ ಮಲಪ್ರಭಾ ಅಥವಾ ಕಾಳಿ ನದಿ ನೀರು ಹರಿಸಬೇಕು. ಅಳ್ನಾವರದ ಬೆಣಚಿ ಬಳಿ ಬಂದಿರುವ ಕಾಳಿಯಿಂದ ಮುಗದ ಕೆರೆ ಕೇವಲ 16 ಕಿ.ಮೀ. ದೂರದಲ್ಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತಿಸಬೇಕಿದೆ.
ಬಸವರಾಜ ಕಲಕೇರಿ,
ಅಧ್ಯಕ್ಷ, ಮುಗದ ಗ್ರಾಮ ಪಂಚಾಯ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.